ಸಮಗ್ರ ತನಿಖೆ ಆಗಲಿ ಪಡಿತರ ವ್ಯವಸ್ಥೆಯ ಸಮಗ್ರ ಗಣಕೀಕರಣ ಮತ್ತು ನಕಲಿ ರೇಷನ್ ಕಾರ್ಡುಗಳನ್ನು ಪತ್ತೆಹಚ್ಚಿ ಸರಿಪಡಿಸುವ ಹೊಣೆಹೊತ್ತಿದ್ದ ಕೊಮ್ಯಾಟ್ ಟೆಕ್ನಾಲಜೀಸ್ ಹೆಸರಿನ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಟೋಪಿ ಹಾಕಿದ ಪ್ರಕರಣ ಆಹಾರ ಇಲಾಖೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿ. ರೂ 54 ಕೋಟಿ ವೆಚ್ಚದ ದೊಡ್ಡ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಆರಂಭದ ಹಂತದಲ್ಲೇ ಆಹಾರ ಇಲಾಖೆ ಎಡವಿದೆ. ಸಂಸ್ಥೆ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚುವುದಿರಲಿ, ಇನ್ನಷ್ಟು ನಕಲಿ ಕಾರ್ಡುಗಳನ್ನು ಬೇಕಾಬಿಟ್ಟಿಯಾಗಿ ನೀಡುವ ಮೂಲಕ ಇದ್ದ ಸರಬರಾಜು ವ್ಯವಸ್ಥೆಯನ್ನೇ ಹಾಳು ಮಾಡಿದೆ. ಇದರಿಂದ ಸರ್ಕಾರಕ್ಕೆ ಆದ ನಷ್ಟ ಎಷ್ಟು ಎನ್ನುವುದು ಗೊತ್ತಾಗಿಲ್ಲ. ಈ ಅವ್ಯವಸ್ಥೆಗೆ ಯಾರು ಜವಾಬ್ದಾರಿ? ಗಣಕೀಕರಣದ ಗುತ್ತಿಗೆ ನೀಡುವ ವಿಷಯದಲ್ಲಿ ಇಲಾಖೆ ಪಾರದರ್ಶಕವಾಗಿ ವರ್ತಿಸಿಲ್ಲ ಎಂಬುದು ಮೇಲುನೋಟಕ್ಕೆ ಎದ್ದು ಕಾಣುತ್ತದೆ. ಸಂಸ್ಥೆಗೆ ಇರುವ ಅನುಭವ, ದಕ್ಷತೆ ಇತ್ಯಾದಿಗಳನ್ನು ಪರಿಶೀಲಿಸದೇ ಒಪ್ಪಂದಕ್ಕೆ ಮುಂದಾದ ಇಲಾಖೆ ಅಧಿಕಾರಿಗಳ ವರ್ತನೆ ಹಲವು ಸಂದೇಹಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಗಣಕೀಕರಣದ ಗುತ್ತಿಗೆ ನೀಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ನಕಲಿ ರೇಷನ್ ಕಾರ್ಡುಗಳನ್ನು ಪತ್ತೆ ಹಚ್ಚುವ ಕೆಲಸ ನಿಜಕ್ಕೂ ಸವಾಲಿನದು. ಅದು ಆಹಾರ ಇಲಾಖೆಯ ಸಿಬ್ಬಂದಿ ಮಾತ್ರವೇ ಮಾಡಬೇಕಾದ ಕೆಲಸ. ಭ್ರಷ್ಟಾಚಾರಕ್ಕೆ ವಿಪುಲ ಅವಕಾಶ ಇರುವ ಈ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸಿದ ಕ್ರಮ ಸಮರ್ಥನೀಯ ಅಲ್ಲ. ಈ ಎಲ್ಲ ಲೋಪಗಳಿಗೆ ಇಲಾಖೆಯ ಹಿರಿಯ ಅಧಿಕಾರಿಗಳೂ ಹೊಣೆಗಾರರು. ಅವರೊಂದಿಗೆ ಆಡಳಿತಾರೂಢ ರಾಜಕೀಯ ನಾಯಕರು ಶಾಮೀಲಾಗಿದ್ದರೆ ಮಾತ್ರ ಇಂತಹ ಒಪ್ಪಂದ ಕುದುರಲು ಸಾಧ್ಯ. ನಷ್ಟದ ನೆಪ ಹೇಳಿ ಸಂಸ್ಥೆಯನ್ನೇ ವಿಸರ್ಜಿಸುವ ಹಂತ ತಲುಪಿದಾಗಲೂ ಇಲಾಖೆ ತ್ವರಿತ ಕ್ರಮ ಜರುಗಿಸಲು ವಿಳಂಬ ಮಾಡಿದೆ. ಇಡೀ ಪ್ರಕರಣ ಆಹಾರ ಇಲಾಖೆಯ ನಿರ್ಲಕ್ಷ್ಯದ ಪರಮಾವಧಿ. ಒಪ್ಪಂದದಂತೆ ತನ್ನ ಕರ್ತವ್ಯ ನಿರ್ವಹಿಸದ ಕೊಮ್ಯಾಟ್ ಸಂಸ್ಥೆಗೆ ರೂ54 ಕೋಟಿಯನ್ನು ಪಾವತಿ ಮಾಡುವಂತಹ ದುರದೃಷ್ಟಕರ ನಿರ್ಧಾರವನ್ನು ತೆಗೆದುಕೊಂಡವರು ಯಾರು ಎಂಬುದನ್ನೂ ಸರ್ಕಾರ ತನಿಖೆಗೆ ಒಳಪಡಿಸ ಬೇಕು. ಅಂತಹ ಪಾವತಿಗೆ ಒಪ್ಪಂದದಲ್ಲಿ ಅವಕಾಶ ಇದೆಯೇ ಎಂಬುದನ್ನೂ ನೋಡಬೇಕು. ಇಡೀ ಪ್ರಕರಣ ವ್ಯವಸ್ಥಿತ ಸಂಚಿನಂತೆ ಕಾಣುತ್ತದೆ. ಅದೇನೇ ಇರಲಿ, ಸರ್ಕಾರ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ತ್ವರಿತ ಕಾನೂನು ಕ್ರಮ ಜರುಗಿಸಬೇಕು. ಕೊಮ್ಯಾಟ್ ಸಂಸ್ಥೆ ತನಗೆ ನಷ್ಟವಾಗಿದೆ ಎಂದು ಹೇಳಿದರೆ ಸಾಲದು. ಸಂಸ್ಥೆ ನೀಡುವ ನಷ್ಟದ ಕಾರಣಗಳನ್ನು ತನಿಖೆಗೆ ಒಳಪಡಿಸಬೇಕು. ಕೊಮ್ಯಾಟ್ ಸಂಸ್ಥೆಯ ಹಿಂದೆ ಇರುವ ಪ್ರಭಾವಿಗಳು ಯಾರು ಎಂಬುದು ಜನರಿಗೆ ಗೊತ್ತಾಗಬೇಕು. ದೊಡ್ಡ ಜವಾಬ್ದಾರಿಯನ್ನು ಹೊತ್ತು ಅದನ್ನು ನಿರ್ವಹಿಸಲಾಗದೆ ಕಾಲುಕೀಳುವ ಖಾಸಗಿ ಸಂಸ್ಥೆಗಳ ಬಗ್ಗೆ ಸರ್ಕಾರ ಇನ್ನು ಮುಂದೆ ಎಚ್ಚರವಾಗಿರಬೇಕು. ಕೊಮ್ಯಾಟ್ ಸಂಸ್ಥೆಯ ಕೆಟ್ಟ ನಡವಳಿಕೆ ಇತರ ಖಾಸಗಿ ಸಂಸ್ಥೆಗಳಿಗೆ ಮಾದರಿ ಆಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.