ಆಡಳಿತ ಚುರುಕುಗೊಳಿಸಿ ಕುಂಭಕರ್ಣ ನಿದ್ರೆಗೆ ಜಾರಿರುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಎಚ್ಚರಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ನಗರದಲ್ಲಿ ಒಂದು ಸುತ್ತು ಹಾಕಿದರೆ, ಪಾಲಿಕೆಯ ಕಾರ್ಯನಿರ್ವಹಣೆ ಹೇಗಿದೆ ಎನ್ನುವುದರ ಪೂರ್ಣ ಚಿತ್ರಣ ಸಿಗುತ್ತದೆ. ನಗರದಲ್ಲಿ ಮೂಲ ಸೌಕರ್ಯ ಹಾಗೂ ಸೇವೆಗಳ ಗುಣಮಟ್ಟ ಕುಸಿದಿರುವುದು ಜನಾಗ್ರಹ ಸಂಸ್ಥೆಯ ಸಮೀಕ್ಷೆಯಿಂದಲೂ ಹೊರಬಿದ್ದಿದೆ. ಕುಡಿಯುವ ನೀರಿನ ಗುಣಮಟ್ಟ ಕುಸಿದಿದೆ. ಶಬ್ದ ಹಾಗೂ ವಾಯು ಮಾಲಿನ್ಯದ ಪ್ರಮಾಣ ವಸತಿ ಪ್ರದೇಶಗಳಲ್ಲಿಯೂ ಹೆಚ್ಚಿರುವುದು ಆತಂಕಕಾರಿ. ನೈರ್ಮಲ್ಯ ಕಾಪಾಡುವ ಕುರಿತು ಕಾಳಜಿಯೇ ಇಲ್ಲವಾಗಿದೆ. ಇದೇ ಸ್ಥಿತಿ ಮುಂದುವರಿದರೆ ನಗರದ ಬದುಕು ಮತ್ತಷ್ಟು ಅಸಹನೀಯ ಆಗುವುದರಲ್ಲಿ ಅನುಮಾನವೇ ಇಲ್ಲ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವ ಕೆಲಸ ಆಗುತ್ತಿಲ್ಲ. ಈ ವಿಚಾರದಲ್ಲಿ ಹೈಕೋರ್ಟ್‌ನಿಂದ ಹಲವು ಬಾರಿ ಛೀಮಾರಿ ಹಾಕಿಸಿಕೊಂಡರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ ಮತ್ತು ಸರ್ಕಾರ ಸ್ಪಂದಿಸಿಲ್ಲ ಎಂಬುದು ಆಡಳಿತ ಜಡ್ಡುಗಟ್ಟಿರುವುದರ ದ್ಯೋತಕ. ಹಾದಿ ಬೀದಿಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಅಗತ್ಯವಾದ ನಿಯಮ ರೂಪಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠ ಈ ಹಿಂದೆಯೇ ತಾಕೀತು ಮಾಡಿತ್ತು. ಆದರೆ ನ್ಯಾಯಾಲಯದ ಆದೇಶ ಪಾಲನೆ ಆಗಿಲ್ಲ. ಇದರಿಂದ ಅಸಮಾಧಾನಗೊಂಡು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಕೋರ್ಟ್ ಪುನಃ ಕಿಡಿ ಕಾರಿದೆ. ಪ್ರತಿಯೊಂದು ಕೆಲಸವನ್ನೂ ನ್ಯಾಯಾಲಯ ಚಾಟಿ ಹಿಡಿದು ಮಾಡಿಸಬೇಕಾದ ಸ್ಥಿತಿ ಒದಗಿರುವುದು ದುರದೃಷ್ಟಕರ. `ಪಾಲಿಕೆಯ ಬಹುಪಾಲು ಅಧಿಕಾರಿಗಳು ತ್ಯಾಜ್ಯ ಸಾಗಣೆ ಅಕ್ರಮದಲ್ಲಿ ಪಾಲುದಾರರು' ಎಂದು ಹೈಕೋರ್ಟ್ ಬೊಟ್ಟು ಮಾಡಿರುವುದು ಮತ್ತು `ಪಾಲಿಕೆಯಲ್ಲಿನ ಕೊಳಕನ್ನು ಮೊದಲು ತೆಗೆಯಿರಿ' ಎಂದು ಸೂಚಿಸಿರುವುದರ ಹಿಂದಿನ ಒಳಮರ್ಮ ಅರಿತು ಪಾಲಿಕೆ ತಕ್ಷಣ ಕ್ರಮ ಜರುಗಿಸಬೇಕು. ಕಸ ಸಂಗ್ರಹ ಮತ್ತು ಸಾಗಣೆ ವಹಿವಾಟು ವಾರ್ಷಿಕ 250 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬೃಹತ್ ಬಾಬತ್ತು. ಕಸ ಗುತ್ತಿಗೆ ವ್ಯವಹಾರ ಮಾಫಿಯಾ ಹಿಡಿತಕ್ಕೆ ಒಳಪಟ್ಟಿದೆ. ಈ ದಂಧೆಯಲ್ಲಿ ಬಿಬಿಎಂಪಿಯ ಹಲವು ಸದಸ್ಯರೂ ಷಾಮೀಲಾಗಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅವಧಿ ಮುಗಿದರೂ ಕೆಲವರ ಗುತ್ತಿಗೆಯನ್ನು ಮುಂದುವರಿಸಿರುವುದು ಅನುಮಾನಕ್ಕೆ ಎಡೆಮಾಡಿದೆ. ಈ ಗುತ್ತಿಗೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಕೆಯ ಹೊಸ ಆಯುಕ್ತರು ಓದಿಯೇ ಇಲ್ಲ ಎಂಬುದನ್ನು ಅರಿತ ನ್ಯಾಯಮೂರ್ತಿಗಳು ಅವರ ವಿರುದ್ಧವೂ ಚಾಟಿ ಬೀಸಿದ್ದಾರೆ. ಆಯುಕ್ತರು ಬದಲಾಗುತ್ತಲೇ ಇದ್ದಾರೆ. ಆದರೆ, ಪಾಲಿಕೆ ಆಡಳಿತ ಮಾತ್ರ ಸುಧಾರಿಸುತ್ತಿಲ್ಲ. ಕೋಟಿ ಜನರು ವಾಸಿಸುವ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ. ಹಿತಕರ ಹವೆಯಿಂದಾಗಿ ದೇಶದ ಎಲ್ಲ ಭಾಗದ ಜನರಿಗೂ ಇಷ್ಟವಾಗುವ ಬೆಂಗಳೂರು ದಿನೇ ದಿನೇ ಸೊರಗುತ್ತಿದೆ. ನಗರವನ್ನು ಸಹನೀಯಗೊಳಿಸುವ ಪ್ರಯತ್ನಕ್ಕೆ ಹೊಸ ಸರ್ಕಾರ ಕೂಡಲೇ ಗಮನಹರಿಸಬೇಕು. ಈ ಕೆಲಸವನ್ನು ತುರ್ತು ಅಗತ್ಯ ಎಂದು ಭಾವಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.