ಕೈತಪ್ಪಿದ ಅವಕಾಶ ದಕ್ಷಿಣ ಕೊರಿಯಾದ ಪೋಸ್ಕೊ ಕಂಪೆನಿ ಗದಗ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಉಕ್ಕು ತಯಾರಿಕಾ ಕಾರ್ಖಾನೆಯನ್ನು ಕೊನೆಗೂ ಕೈಬಿಟ್ಟಿದೆ. ಕಾರ್ಖಾನೆ ಸ್ಥಾಪಿಸಲು ಅಗತ್ಯವಾಗಿದ್ದ ಜಮೀನು ಸ್ವಾಧೀನಕ್ಕೆ ಎದುರಾದ ಅಡೆತಡೆ ಮತ್ತು ಪ್ರತಿಕೂಲ ಮಾರುಕಟ್ಟೆ ಪರಿಸ್ಥಿತಿ ಈ ನಿರ್ಧಾರಕ್ಕೆ ಕಾರಣ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ. ಈ ಕಾರ್ಖಾನೆ ಸ್ಥಾಪನೆಗೆ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳಲು ರೈತರು ಸಿದ್ಧರಿಲ್ಲದ ಕಾರಣ ಸಹಜವಾಗಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈ ಉಕ್ಕಿನ ಉದ್ಯಮ ಸ್ಥಾಪನೆಗೆ 3,382 ಎಕರೆ ಜಮೀನಿನ ಬೇಡಿಕೆಯನ್ನು ಪೋಸ್ಕೊ ಮುಂದಿಟ್ಟಿತ್ತು. ಈ ಪ್ರಮಾಣದ ಭೂಮಿ ಕಳೆದುಕೊಳ್ಳಲು ಸಿದ್ಧರಿಲ್ಲದ ರೈತರು ಸಂಘಟಿತ ಚಳವಳಿ ಆರಂಭಿಸಿದಾಗ ಮಠಾಧೀಶರೇ ಬೆಂಬಲಿಸಿದ್ದರು. ಭೂಸ್ವಾಧೀನ ವಿಚಾರದಲ್ಲಿ ಸರ್ಕಾರ ಎಡವಿದೆ ಎನ್ನಬಹುದು. ಇದರಿಂದ ಉಕ್ಕು ಕಾರ್ಖಾನೆ ಸ್ಥಾಪನೆಯ ಅವಕಾಶ ರಾಜ್ಯದ ಕೈತಪ್ಪಿದೆ. ಉಕ್ಕಿನ ಉದ್ಯಮಕ್ಕೆ ಭಾರಿ ಪ್ರಮಾಣದಲ್ಲಿ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾದಾಗ ಅದಕ್ಕೆ ದೂರದೃಷ್ಟಿಯ ಕೊರತೆ ಇತ್ತು ಎನ್ನುವುದು ಸ್ಪಷ್ಟವಾಗಿತ್ತು. ಕೃಷಿಯನ್ನೇ ನೆಚ್ಚಿದ ರೈತಜೀವಿ ನೀರಾವರಿ, ಉದ್ಯಮ, ವಿದ್ಯುತ್ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡಾಗ ಮೇಟಿ ವಿದ್ಯೆಯ ಹೊರತು ಬೇರೆ ವಿದ್ಯೆ ಗೊತ್ತಿಲ್ಲದ ಕಾರಣ ಪಡಬಾರದ ಪಾಡನ್ನು ಪಟ್ಟ ಉದಾಹರಣೆ ರಾಜ್ಯದಲ್ಲಿದೆ. ಉಕ್ಕು ಉದ್ಯಮ ಸ್ಥಾಪನೆಯಾದರೆ ಅದು ರೈತರ ಬದುಕಿಗೆ ಆಸರೆಯಾಗುವುದೇ ಎನ್ನುವುದರ ಬಗ್ಗೆ ಸರ್ಕಾರ ಚಿಂತಿಸಿದಂತೆ ಇಲ್ಲ. ಗ್ರಾಮೀಣ ಪ್ರದೇಶದಿಂದ ಭಾರಿ ಸಂಖ್ಯೆಯಲ್ಲಿ ನಗರಕ್ಕೆ ಯುವ ಜನಾಂಗ ವಲಸೆ ಬರುತ್ತಿರುವ ಈ ದಿನಗಳಲ್ಲಿ ಕೃಷಿ ಒಂದು ಹೊರೆಯಾಗಿ ಪರಿಣಮಿಸಿದರೆ ಅದರ ಪರಿಣಾಮ ಘೋರ. ಉದ್ಯಮ ಸ್ಥಾಪನೆಗೆ ಭೂಮಿ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದ್ಯೋಗ ಸೃಷ್ಟಿಯ ದೃಷ್ಟಿಯಿಂದಲೂ ಕೈಗಾರಿಕಾ ಉದ್ಯಮಗಳ ಗಣನೀಯ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ. ಅವುಗಳ ಬೆಳವಣಿಗೆಗೆ ಸರ್ಕಾರ ಎಲ್ಲ ರೀತಿಯ ಪ್ರೋತ್ಸಾಹ ನೀಡಲೇಬೇಕು. ರೈತರೂ ಇದನ್ನು ಅಲ್ಲಗಳೆಯುವುದಿಲ್ಲ. ಕೃಷಿ ಮೇಲಿನ ಅತಿಯಾದ ಅವಲಂಬನೆ ನಿಲ್ಲಬೇಕು ಎನ್ನುವುದು ಕೂಡ ಸತ್ಯ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕೃಷಿ ಕೂಡ ಬೆಳವಣಿಗೆ ಕಾಣಬೇಕು. ಇಂದು ದವಸ ಧಾನ್ಯಗಳ ಬೆಲೆ ಮುಗಿಲು ಮುಟ್ಟಲು ಕೃಷಿಯೋಗ್ಯ ಭೂಮಿ ಕಡಿಮೆಯಾಗುತ್ತಿರುವುದೂ ಒಂದು ಪ್ರಮುಖ ಕಾರಣ ಎನ್ನುವುದು ಸರ್ಕಾರಕ್ಕೆ ಈಗಾಗಲೇ ಮನದಟ್ಟಾಗಿದೆ. ಕೃಷಿ ಭೂಮಿ ಕಡಿಮೆಯಾದಂತೆ ಉತ್ಪಾದನೆ ಕುಂಠಿತವಾಗಿ ಜನರು ಬಳಲುವಂತಾಗಿದೆ. ರಾಜ್ಯ ಸರ್ಕಾರ ವಿದೇಶಿ ಬಂಡವಾಳ ಆಕರ್ಷಣೆ ಹಾಗೂ ಕೈಗಾರಿಕೆ ಸ್ಥಾಪನೆಗೆ ಮುಂದಾಗುವ ಉದ್ಯಮಿಗಳಿಗೆ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಹೊತ್ತಿದೆ. ಹೀಗಾಗಿ ಕೃಷಿ ಭೂಮಿ ಒದಗಿಸುವ ತನ್ನ ನೀತಿಯನ್ನು ಸರ್ಕಾರ ಪುನರ್ ವಿಮರ್ಶಿಸುವುದು ಸೂಕ್ತ. ಉದ್ಯಮ ಮತ್ತು ಕೃಷಿ ಇಂದು ಯಾವುದೇ ದೇಶದ ಎರಡು ಕಣ್ಣುಗಳಿದ್ದಂತೆ. ಇವುಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆಯೇ ಒಂದಕ್ಕೆ ಅತಿಯಾದ ಮಹತ್ವ ನೀಡಿ ಇನ್ನೊಂದರ ಅವಸಾನಕ್ಕೂ ಕಾರಣವಾಗುವಂತಿಲ್ಲ. ಸರ್ಕಾರ ಇವೆರಡರ ಮಧ್ಯೆ ದೂರದೃಷ್ಟಿಯಿಂದ ಸಮತೋಲನ ಕಾಪಾಡುವುದು ಅತ್ಯಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.