ಮುನ್ನೆಚ್ಚರಿಕೆ ಅಗತ್ಯ ಮುಂಗಾರು ಶುಭ ಶಕುನ ನುಡಿದಿದೆ. ಕಳೆದ ವರ್ಷ ಜನರನ್ನು ಕಂಗೆಡಿಸಿದ್ದ ಬರದ ಬೇಗೆಯನ್ನು ನೀಗುವ ಭರವಸೆ ಮೂಡಿಸಿದೆ. ಮಳೆ ಬಿರುಸು ಪಡೆದಿರುವ ಕಾರಣ ರಾಜ್ಯದ ಪ್ರಮುಖ ಜಲಾಶಯಗಳು ಮೈದುಂಬಿಕೊಳ್ಳುತ್ತಿವೆ. ಜಲಾಶಯಗಳ ಒಳಹರಿವೂ ಹೆಚ್ಚತೊಡಗಿದೆ. ರೈತ ಸಮುದಾಯದಲ್ಲಿ ಹುರುಪು ಮೂಡಿಸಿದ ಮಳೆ, ನಗರವಾಸಿಗಳಲ್ಲಿ ಕುಡಿಯುವ ನೀರು ಪೂರೈಕೆ ವಿಷಯವಾಗಿ ಉಂಟಾಗಿದ್ದ ಭೀತಿಯನ್ನೂ ನಿವಾರಿಸಿದೆ. ಪುಳಕಗೊಳಿಸುವ ಮಳೆ ಹನಿಯ ಈ ಮುಖ ಭರವಸೆದಾಯಕ. ಆದರೆ ಇದರ ಮತ್ತೊಂದು ಮುಖ ಅನಾಹುತಗಳಿಗೆ ಸಂಬಂಧಿಸಿದ್ದು. ಅದಕ್ಕೆ ನಿದರ್ಶನವಾಗಿ ಉತ್ತರಾಖಂಡ ದುರಂತ ಕಣ್ಣೆದುರಿಗೇ ಇದೆ. 2009ರಲ್ಲಿ ಪ್ರವಾಹ ರೂಪದಲ್ಲಿ ನಮ್ಮ ರಾಜ್ಯದಲ್ಲಿಯೇ ಮಳೆ ಉಗ್ರಪ್ರತಾಪ ತೋರಿತ್ತು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದವು. ಮಳೆಯ ಈ ಅನಾಹುತಗಳು ಯಾವುದೇ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ. ಗಾಳಿ ಮಳೆಯ ಅಬ್ಬರಕ್ಕೆ ಮರಗಳು ನೆಲಕ್ಕೆ ಉರುಳುವುದು, ಸೇತುವೆಗಳು ಜಲಾವೃತಗೊಳ್ಳುವುದು, ಜನಜೀವನ ಅಸ್ತವ್ಯಸ್ತ ಆಗುವುದು ಸಾಮಾನ್ಯವೇ. ಇಂತಹ ಸ್ಥಿತಿ ಎದುರಾದಾಗ ಜನರ ಸಂಕಷ್ಟಕ್ಕೆ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದು ಮುಖ್ಯ. ಅದಕ್ಕೆ ಪೂರ್ವಸಿದ್ಧತೆ ಬೇಕು. ಮಳೆಗಾಲಕ್ಕೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದರೆ ಜನರ ನೆರವಿಗೆ ಜಿಲ್ಲಾಡಳಿತ ತಕ್ಷಣ ಧಾವಿಸಲು ಸಾಧ್ಯವಾಗುತ್ತದೆ. ತುರ್ತು ಕಾರ್ಯಪಡೆಗಳ ರಚನೆ, ಪರಿಹಾರ ಸಾಮಗ್ರಿ ಸಂಗ್ರಹ, ಪ್ರವಾಹಕ್ಕೆ ಸಿಲುಕಬಹುದಾದವರ ಸ್ಥಳಾಂತರ ಕುರಿತು ಯೋಜನೆ ಮತ್ತು ಅವುಗಳಿಗೆ ಬೇಕಾದ ಹಣದ ಲಭ್ಯತೆ ಮುಂತಾದವುಗಳ ಬಗ್ಗೆ ನೀಲನಕಾಶೆ ಸಿದ್ಧವಾಗಿರಬೇಕು. ಆದರೆ ಈ ಬಗ್ಗೆ ಜಿಲ್ಲಾಡಳಿತಗಳು ಸರಿಯಾದ ಪೂರ್ವಸಿದ್ಧತೆ ನಡೆಸಿದಂತೆ ಕಾಣುವುದಿಲ್ಲ. ರಾಜ್ಯದಲ್ಲಿ ಮಳೆ ಅನಾಹುತದ ಮೊದಲ ವರದಿಗಳು ಬರತೊಡಗಿವೆ. ಕುಮಾರಧಾರ ನದಿ ತುಂಬಿ ಹರಿಯುತ್ತಿರುವ ಕಾರಣ ಗುಂಡ್ಯ ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಮುಳುಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕೆಆರ್‌ಎಸ್, ಹೇಮಾವತಿ, ಹಾರಂಗಿ ಜಲಾಶಯಗಳ ಒಳಹರಿವು ಹೆಚ್ಚಿದೆ. ಭಾಗಮಂಡಲ ಬಳಿಯ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಂಪರ್ಕ ತುಂಡರಿಸಿದೆ. ನದಿ ದಡದ ಕೆಲವು ಗ್ರಾಮಗಳಲ್ಲಿ ಮನೆಗಳು ಜಲಾವೃತವಾಗಿವೆ. ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕೆಲವು ಜಲಾಶಯಗಳಿಂದ ಹೊರಹರಿವು ಹೆಚ್ಚುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸೂಚನೆ ನೀಡಿ ಸುಮ್ಮನೆ ಕುಳಿತರಾಗದು. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳನ್ನು ಬಡಿದೆಬ್ಬಿಸಬೇಕು. ಪರಿಹಾರ ಕಾರ್ಯಗಳಿಗೆ ಹಣ ಒದಗಿಸಬೇಕು. ಮೊದಲ ಮಳೆಗೇ ಎಲ್ಲ ಕಷ್ಟಗಳೂ ಕೊನೆಗೊಳ್ಳುವುದಿಲ್ಲ. ಇನ್ನೂ ನಾಲ್ಕು ತಿಂಗಳು ಮಳೆ ಸಂಬಂಧಿ ಸಮಸ್ಯೆಗಳು ಎದುರಾಗುವುದರಿಂದ ದೀರ್ಘಾವಧಿ ಪರಿಹಾರ ಕಾರ್ಯಗಳಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಳೆಗಾಲ ಯಾವುದೇ ಸರ್ಕಾರಕ್ಕೆ ಸವಾಲು ಇದ್ದಂತೆ. ಅದನ್ನು ಸಮರ್ಥವಾಗಿ ಎದುರಿಸಲು ಅಣಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.