ಕೀಳು ರಾಜಕೀಯ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ, ಭೂ ಕುಸಿತ ಉಂಟಾಗಿ ಎಂಟು ನೂರಕ್ಕೂ ಅಧಿಕ ಜನರು ಸತ್ತಿದ್ದು 8000 ಮಂದಿ ಅತಂತ್ರರಾಗಿದ್ದಾರೆ. ಕಳೆದ 11 ದಿನಗಳಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಜನರನ್ನು ಅಪಾಯದ ಸ್ಥಳಗಳಿಂದ ತೆರವುಗೊಳಿಸಲಾಗಿದೆ. ಈ ರಕ್ಷಣೆಯ ಕಾರ್ಯದಲ್ಲಿ ಅಭೂತಪೂರ್ವ ಸಾಹಸ ಹಾಗೂ ಶ್ರಮವನ್ನು ಪ್ರದರ್ಶಿಸಿರುವ ಸೇನೆ ಹಾಗೂ ಅರೆ ಸೇನಾ ಪಡೆಗಳ ಕಾರ್ಯ ಅಭಿನಂದಿಸುವಂತಹದ್ದು. `ನಾವು ದೇವರಲ್ಲ, ನಮಗೆ ವಿಪತ್ತು ಎದುರಿಸುವ ವಿಧಾನದ ಬಗ್ಗೆ ತರಬೇತಿ ಇದೆ. ನಮ್ಮ ಕಾರ್ಯತಂತ್ರದ ಪ್ರಕಾರ ಕಾರ್ಯ ನಿರ್ವಹಿಸುತ್ತೇವೆ' ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದರು. ಅಂತೆಯೇ ಸೇನೆ ಕಾರ್ಯನಿರ್ವಹಿಸಿದೆ. ಹೀಗಿದ್ದೂ ಪರಿಹಾರ ಕಾರ್ಯಾಚರಣೆ ಮುಕ್ತಾಯವಾಗಿಲ್ಲ. ಸಾಂಕ್ರಾಮಿಕ ಕಾಯಿಲೆಯ ಭೀತಿ, ಪರಿಹಾರ ಕಾರ್ಯಗಳ ಸವಾಲನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ. ಈ ಸಂದರ್ಭದಲ್ಲಿ ನಾಗರಿತ ಆಡಳಿತದ ವೈಫಲ್ಯ ಎದ್ದು ಕಾಣಿಸುತ್ತದೆ. ಈ ವಿಪತ್ತು ಅಪ್ಪಳಿಸುವುದನ್ನು ಮುಂದಾಗಿ ಗ್ರಹಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪೂರ್ಣ ವಿಫಲವಾಗಿವೆ. ಹವಾಮಾನ ಇಲಾಖೆ ಗಾಢನಿದ್ರೆಯಿಂದ ಎಚ್ಚೆತ್ತುಕೊಳ್ಳದ ಕಾರಣ ಎಷ್ಟೋ ಜನರು ಶಾಶ್ವತ ನಿದ್ರೆಗೆ ಹೋಗ್ದ್ದಿದಾರೆ. ವಿಪತ್ತು ನಿರ್ವಹಣಾ ಪ್ರಾಧಿಕಾರ ಯಾವುದೇ ಪೂರ್ವ ಯೋಜನೆ, ಮಾರ್ಗದರ್ಶಿ ಸೂತ್ರ, ತರಬೇತಿ ಪಡೆದ ವಿಪತ್ತು ನಿರ್ವಹಣಾ ತಂಡಗಳ ರಚನೆ ಮಾಡದೆ ಕರ್ತವ್ಯಚ್ಯುತಿ ಎಸಗಿದ್ದು ಜನತೆ ಭಾರಿ ಬೆಲೆ ತೆರುವಂತಾಗಿದೆ. ಕೇಂದ್ರದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಇದು ಗೊತ್ತಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇಂತಹ ಘೋರ ದುರಂತದ ಸಂದರ್ಭದಲ್ಲೂ ರಾಜಕೀಯ ನಾಟಕಗಳ ಆಟ ಮಾತ್ರ ಅಕ್ಷಮ್ಯ. ಉತ್ತರಾಖಂಡದಲ್ಲಿ ಅತಂತ್ರರಾಗಿದ್ದ 15 ಸಾವಿರ ಗುಜರಾತಿಗಳನ್ನು ಎರಡು ದಿನಗಳಲ್ಲಿ ರಕ್ಷಣೆ ಮಾಡಿರುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೊಚ್ಚಿಕೊಂಡಿದ್ದಾರೆ. ಈ ಮಾತುಗಳು ಎಷ್ಟೊಂದು ಶುದ್ಧ ಸುಳ್ಳು ಎಂಬುದು ಸಾಮಾನ್ಯ ಲೆಕ್ಕಾಚಾರ ಹಾಕಿದರೇ ಗೊತ್ತಾಗಿಬಿಡುತ್ತದೆ. ಜೊತೆಗೆ ಮಾನವೀಯತೆಯಲ್ಲಿ ನಂಬಿಕೆ ಇರಿಸಿದವರಿಗೆ ಇದು ಕೊಚ್ಚಿಕೊಳ್ಳುವ ಸಂಗತಿ ಎಂದೆನಿಸುವುದಂತೂ ಸಾಧ್ಯವಿಲ್ಲ. ವಿಕೃತವಾದ, ಕೀಳುಮಟ್ಟದ ರಾಜಕೀಯ ಇದು. ಏಕಮುಖ ಚಿಂತನೆ, ಮತದ ಮೇಲಿನ ಕಣ್ಣು, ಸಂಕುಚಿತ ಪ್ರಾದೇಶಿಕತೆ ಈ ಮಾತುಗಳಲ್ಲಿ ಮುಪ್ಪುರಿಗೊಂಡಿರುವುದನ್ನು ಕಾಣಬಹುದು. ತಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಕೊಚ್ಚಿಕೊಳ್ಳುವ ಮೋದಿ ತಮ್ಮಲ್ಲಿನ ನೈತಿಕ ದಿವಾಳಿತನವನ್ನು ಬಹಿರಂಗಗೊಳಿಸಿದ್ದಾರೆ. ಉತ್ತರಾಖಂಡದ ಯಾತ್ರಾ ಸ್ಥಳಗಳಲ್ಲಿ ಸಾವುನೋವಿಗೆ ಒಳಗಾದವರು ಎಲ್ಲರೂ ಆ ರಾಜ್ಯದವರಲ್ಲ. ಇಲ್ಲಿ ರಕ್ಷಣೆ ಮಾಡಬೇಕಾದುದು ಜನರನ್ನು, ಮತದಾರರನ್ನು ಅಲ್ಲ. ರಕ್ಷಣಾ ಕಾರ್ಯ ಎಂದರೆ ಅದೊಂದು ಕರ್ತವ್ಯ. ರಕ್ಷಣಾ ಕಾರ್ಯ ಎಂದರೆ ಭಿಕ್ಷುಕನಿಗೆ ಕಾಸು ಕೊಟ್ಟು ಆತನ ಮುಖದಲ್ಲಿ ಕೃತಜ್ಞತೆಯ ಭಾವ ನಿರೀಕ್ಷಿಸಿದಂತೆ ಅಲ್ಲ. ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿಗೆ ನೆರವಿನ ಮಹಾಪೂರ ಹರಿಸಿದವರು ಕೇವಲ ಗುಜರಾತಿಗಳ್ಲ್ಲಲ, ದೇಶದ ಮೂಲೆ, ಮೂಲೆಯ ಜನರು. ಇದನ್ನು ಅವರು ಇಷ್ಟು ಬೇಗ ಮರೆಯಬಾರದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.