ಅಮೆರಿಕಕ್ಕೆ ಸವಾಲು ಎಡ್ವರ್ಡ್ ಸ್ನೊಡೆನ್ ಈಗ ವಿಶ್ವದಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿರುವ ವ್ಯಕ್ತಿ. ಅಮೆರಿಕಕ್ಕೆ ಆತನ ಹಸ್ತಾಂತರ ಸದ್ಯದ ಕಾಳಜಿ. ಆದರೆ ಚೀನಾ ಮತ್ತು ರಷ್ಯಾ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್‌ಎಸ್‌ಎ) ಮಾಜಿ ಗುತ್ತಿಗೆದಾರ, ಸಿಐಎಯ ಮಾಜಿ ತಂತ್ರಜ್ಞ ಸ್ನೋಡೆನ್ `ವಾಷಿಂಗ್ಟನ್ ಪೋಸ್ಟ್' ಮತ್ತು `ಗಾರ್ಡಿಯನ್'ಗೆ ನೀಡಿದ ಮಾಹಿತಿ ಇಡೀ ವಿಶ್ವಕ್ಕೆ ಆಘಾತಕಾರಿಯಾಗಿದ್ದುದಾಗಿತ್ತು. ಅಮೆರಿಕದ ಎನ್‌ಎಸ್‌ಎ ಮತ್ತು ಎಫ್‌ಬಿಐ, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಮೈಕ್ರೊಸಾಫ್ಟ್, ಗೂಗಲ್, ಆ್ಯಪಲ್, ಯಾಹೂ, ಫೇಸ್‌ಬುಕ್, ಸ್ಕೈಪ್, ಯೂಟ್ಯೂಬ್ ಮುಂತಾದ ಒಂಬತ್ತು ಖ್ಯಾತ ಸಂಸ್ಥೆಗಳ ಸರ್ವರ್‌ಗೆ ಕಳ್ಳಗಿವಿ ಇರಿಸಿದೆ. ವಿಶ್ವದ ಖ್ಯಾತವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ ಎನ್ನುವುದು ಬಹಿರಂಗವಾಗಿದೆ. ಈ ಕಣ್ಗಾವಲಿನ ಸುದ್ದಿಸ್ಫೋಟದ ಬಳಿಕ ಒಬಾಮ ಆಡಳಿತ ಸ್ಪಷ್ಟನೆ ನೀಡಿ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದ ದೃಷ್ಟಿಯಿಂದ ಶಂಕಿತ ವ್ಯಕ್ತಿಗಳ ಮಾಹಿತಿ ಕಲೆ ಹಾಕುತ್ತಿರುವುದು ನಿಜ ಎಂದು ಹೇಳಿದೆ. ಇದು ವಿಶ್ವದ `ದೊಡ್ಡಣ್ಣ'ನ ವಿಪರೀತ ವರ್ತನೆ ಎಂದೇ ವಿಶ್ಲೇಷಿಸಲಾಗಿದೆ. ಭಾರತ ಇದರ ಬಗ್ಗೆ ತೀವ್ರ ಕಳವಳ ಮತ್ತು ಅಚ್ಚರಿ ವ್ಯಕ್ತಪಡಿಸಿದೆ. `ಅಮೆರಿಕದ ಎನ್‌ಎಸ್‌ಎಯ ಬೇಹುಗಾರಿಕೆ ಭಾರತದ ಖಾಸಗಿತನ ರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಇದನ್ನು ನಾವು ಒಪ್ಪುವುದಿಲ್ಲ' ಎಂದು ಕೇಂದ್ರ ಸರ್ಕಾರ ಹೇಳಿದೆ. ಚೀನಾದ ಕಂಪ್ಯೂಟರ್‌ಗಳಿಂದ ಅಮೆರಿಕ ಮಾಹಿತಿ ಕಳವು ಮಾಡಿದುದು ರೊಚ್ಚಿಗೆಬ್ಬಿಸುವ ಸಂಗತಿ. ಜೊತೆಗೆ ರಷ್ಯಾ ಕೂಡ ಅಮೆರಿಕಕ್ಕೆ ಮಣಿಯದೆ ಸೆಡ್ಡು ಹೊಡೆಯುವ ಕಾರ್ಯವನ್ನು ಸಮರ್ಥವಾಗಿ ಮಾಡಿದೆ. ಸ್ನೊಡೆನ್ ಅಮೆರಿಕದ ಅವಕೃಪೆಗೆ ಪಾತ್ರವಾದ ತಕ್ಷಣ ಅಲ್ಲಿಂದ ಪಲಾಯನ ಮಾಡಿ ಹಾಂಕಾಂಗ್‌ಗೆ ಹೋಗಿದ್ದರು. ಅಲ್ಲಿದ್ದಾಗಲೇ ಹಸ್ತಾಂತರಕ್ಕೆ ಅಮೆರಿಕ ಮನವಿ ಮಾಡಿದ್ದು ವ್ಯರ್ಥವಾಗಿತ್ತು. ಅನಂತರ ರಷ್ಯಾಕ್ಕೆ ಹೋದಾಗ ಅಲ್ಲಿಂದ ಹೊರ ಹಾಕುವಂತೆ ಅಮೆರಿಕ ಹೇಳಿದ್ದರೂ `ಹಸ್ತಾಂತರ ಮತ್ತು ಗಡೀಪಾರು ಒಪ್ಪಂದ ನಮ್ಮ ಮತ್ತು ಅಮೆರಿಕ ಮಧ್ಯೆ ಆಗಿಲ್ಲ. ಅವರು ಇರುವುದು ವಿಮಾನ ನಿಲ್ದಾಣದಲ್ಲಿ, ದೇಶದ ಒಳಗೆ ಅಲ್ಲ' ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಾಣತನದ ಉತ್ತರ ನೀಡಿದ್ದಾರೆ. ಈಕ್ವೆಡಾರ್‌ಗೆ ಹೋಗಿ ಆಶ್ರಯ ಪಡೆಯಲು ಸ್ನೊಡೆನ್ ಯಶಸ್ವಿಯಾದಲ್ಲಿ ಅಮೆರಿಕ ಕೈಚೆಲ್ಲಿ ಕುಳಿತುಕೊಳ್ಳಬೇಕಾದೀತು. ಏಕೆಂದರೆ ಲಂಡನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ಈಕ್ವೆಡಾರ್ ವಿಕಿಲೀಕ್ಸ್‌ನ ಒಡೆಯ ಜೂಲಿಯಾನ್‌ಗೆ ಕಳೆದ ಒಂದು ವರ್ಷದಿಂದ ಆಶ್ರಯ ನೀಡಿದ್ದನ್ನು ಮರೆಯುವಂತಿಲ್ಲ. ವ್ಯಕ್ತಿಯ ಹಕ್ಕು, ಖಾಸಗಿತನಕ್ಕೆ ಮಹತ್ವ ನೀಡುವುದಾಗಿ ಕೊಚ್ಚಿಕೊಳ್ಳುವ ಅಮೆರಿಕ ತನ್ನ ನಿಜ ಬಣ್ಣ ಬಯಲು ಮಾಡಿದೆ.ಲ್ಯಾಟಿನ್ ಅಮೆರಿಕದ ರಾಷ್ಟ್ರಗಳ ಮೇಲೆ ನಿರಂತರ ಸವಾರಿ ಮಾಡುತ್ತಲೇ ಬಂದ ಅದಕ್ಕೆ ಆ ರಾಷ್ಟ್ರಗಳೂ ಸೇರಿದಂತೆ ಪ್ರವರ್ಧನಮಾನಕ್ಕೆ ಬರುವ ರಾಷ್ಟ್ರಗಳು ಈಗ ಸೊಪ್ಪು ಹಾಕದಿರುವುದು ನುಂಗಲಾಗದ ತುತ್ತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.