ಚಿಲ್ಲರೆ ವಲಯಕ್ಕೆ ಎಫ್‌ಡಿಐ ಬಹುಬ್ರಾಂಡ್ ಚಿಲ್ಲರೆ ವಹಿವಾಟು ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಈ ತೀರ್ಮಾನವು ರಾಜ್ಯದ ಜನಜೀವನ, ಉದ್ದಿಮೆ - ವಹಿವಾಟು ಮತ್ತು ಅರ್ಥವ್ಯವಸ್ಥೆ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಈ ವಲಯದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಶೇ 51ರಷ್ಟು ಬಂಡವಾಳ ತೊಡಗಿಸಲು ಅವಕಾಶ ಮಾಡಿಕೊಟ್ಟು ಕೇಂದ್ರ ಸರ್ಕಾರವು ಕಳೆದ ವರ್ಷವೇ ನಿರ್ಧಾರ ಕೈಗೊಂಡಿತ್ತು. ಈಗ ರಾಜ್ಯ ಸರ್ಕಾರವೂ ಕೇಂದ್ರದ ಆಶಯಕ್ಕೆ ಸ್ಪಂದಿಸಿ, ಎಫ್‌ಡಿಐ ಸ್ವಾಗತಿಸಿರುವ ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಲಿಗೆ ಸೇರಿದಂತಾಗಿದೆ. `ರಾಜಕೀಯ ಒತ್ತಡ' ಏನೂ ಇದ್ದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರೂ, ಯುಪಿಎ ಸರ್ಕಾರದ ನಿರ್ಧಾರ ಜಾರಿಗೆ ತರುವ ಅನಿವಾರ್ಯತೆಯು ಸಹಜವಾಗಿಯೇ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಇತ್ತು. ಹಿಂದಿನ ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗಾಗಿಯೇ ಎಫ್‌ಡಿಐ ವಿರೋಧಿಸಿತ್ತು ಎನ್ನುವುದೂ ಗುಟ್ಟೇನಲ್ಲ. ಸರಕುಗಳ ಮಾರಾಟ ಸಂಸ್ಥೆಯೊಂದು ಒಂದಕ್ಕಿಂತ ಹೆಚ್ಚು ಪ್ರತಿಸ್ಪರ್ಧಿ ಬ್ರಾಂಡ್‌ನ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಮಾರಾಟ ಮಾಡುವ (ಬಹು ಬ್ರಾಂಡ್) ವಹಿವಾಟಿನಲ್ಲಿ, ಎಫ್‌ಡಿಐಗೆ ಅವಕಾಶ ಮಾಡಿಕೊಡುವುದರಿಂದ ರಾಜ್ಯದಲ್ಲಿ ಗ್ರಾಹಕ ಉತ್ಪನ್ನಗಳು ಅಗ್ಗವಾಗಲಿವೆ. ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಮಧ್ಯವರ್ತಿಗಳ ಹಾವಳಿ ದೂರವಾಗಲಿದೆ. ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿ ರಾಜ್ಯದ ಅರ್ಥ ವ್ಯವಸ್ಥೆಗೆ ಚೇತರಿಕೆ ಸಿಗಲಿದೆ ಎಂಬ ಆಶಯವಂತೂ ಇದೆ. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು ರಾಜ್ಯದಲ್ಲಿ ತಮ್ಮ ಮಳಿಗೆ ತೆರೆಯಲು ಉತ್ಸುಕವಾಗಿರುವುದೂ ನಿಜ. ಬಂಡವಾಳ ಹರಿದು ಬರುವ ಜತೆಗೆ ಸ್ಥಳೀಯ ಉದ್ದಿಮೆ ಸಂಸ್ಥೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನೆಯ ಪ್ರಯೋಜನವೂ ದೊರೆಯಲಿದೆ. ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಬೇಕಾಗಿ ಬಂದು ನೂರಾರು ಜನರು ನಿರುದ್ಯೋಗಿಗಳಾಗುತ್ತಾರೆ ಎನ್ನುವ ಹುಯಿಲು ಉತ್ಪ್ರೇಕ್ಷಿತವಾದದ್ದು. ರಾಜ್ಯದ ಗ್ರಾಹಕ ಮಾರುಕಟ್ಟೆ ತುಂಬ ವಿಶಾಲವಾಗಿದ್ದು, ಕಿರಾಣಿ ಅಂಗಡಿ ಮತ್ತು ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳ ವ್ಯಾಪಾರಕ್ಕೆ ವಿಪುಲ ಅವಕಾಶಗಳು ಇದ್ದೇ ಇವೆ. ಸ್ಪರ್ಧೆ ತೀವ್ರಗೊಂಡು ಬೆಲೆ ಕಡಿಮೆಯಾಗಿ, ಉತ್ತಮ ಗುಣಮಟ್ಟದ ಸರಕು ಲಭ್ಯವಾಗುವುದರಿಂದ ಅಂತಿಮವಾಗಿ ಗ್ರಾಹಕರಿಗೇ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆಗೂ ಸೂಕ್ತ ತಿದ್ದುಪಡಿ ತರುವುದೂ ಅನಿವಾರ್ಯವಾಗಲಿದ್ದು, ಯಾವುದೇ ಕಾರಣಕ್ಕೂ ರೈತಾಪಿ ವರ್ಗದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮತ್ತು ವಹಿವಾಟಿನ ಜುಟ್ಟು ಕೈವಶವಾಗುತ್ತಿದ್ದಂತೆ ಎಂಎನ್‌ಸಿಗಳ ಏಕಸ್ವಾಮ್ಯಕ್ಕೆ ಹಾದಿ ಮಾಡಿಕೊಡದಂತೆ ರಾಜ್ಯ ಸರ್ಕಾರ ಎಚ್ಚರವಹಿಸಬೇಕು. ಆದರೆ, ಇದುವರೆಗೂ ಬಹುರಾಷ್ಟ್ರೀಯ ಸಂಸ್ಥೆಗಳಿಂದ ಎಫ್‌ಡಿಐ ಹೂಡಿಕೆ ಮಾಡುವ ಪ್ರಸ್ತಾವಗಳು ಕೇಂದ್ರ ಸರ್ಕಾರದ ಬಾಗಿಲಿಗೆ ಬಾರದಿರುವುದು ಒಳ್ಳೆಯ ವಿದ್ಯಮಾನವಲ್ಲ. ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳಲ್ಲಿ ಮನೆ ಮಾಡಿರುವ ಅನುಮಾನಗಳನ್ನೆಲ್ಲ ಬಗೆಹರಿಸಿ ಹೂಡಿಕೆಗೆ ಮಾರ್ಗ ಸುಗಮ ಮಾಡಿಕೊಡುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.