ಅಂತರ್ಜಾಲ ಸುರಕ್ಷತಾ ನೀತಿ ಕೇಂದ್ರ ಸರ್ಕಾರವು ಮಾಹಿತಿ, ಸಂವಹನ ತಂತ್ರಜ್ಞಾನ (ಐಸಿಟಿ) ರಂಗದ ಮಾಹಿತಿ ಮತ್ತು ಮೂಲ ಸೌಕರ್ಯಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕೊನೆಗೂ ಎಚ್ಚೆತ್ತುಕೊಂಡಿದ್ದು, ರಾಷ್ಟ್ರೀಯ ಅಂತರ್ಜಾಲ (ಸೈಬರ್) ಭದ್ರತಾ ನೀತಿ ಪ್ರಕಟಿಸಿದೆ. ದೇಶದ ಒಟ್ಟಾರೆ ಸುರಕ್ಷತೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿರುವುದು ಉತ್ತಮ ಆರಂಭವಾಗಿದೆ. ದೇಶದ ಐ.ಟಿ ಉದ್ದಿಮೆ ಜತೆಗೆ ದೂರಸಂಪರ್ಕ, ಬ್ಯಾಂಕ್, ವಿಮಾನಯಾನ, ಸಾರಿಗೆ, ವಿದ್ಯುತ್ ಉತ್ಪಾದನೆ, ಆರೋಗ್ಯ ರಕ್ಷಣೆ ಮುಂತಾದ ಸೇವೆಗಳು ಖಾಸಗಿ ಒಡೆತನದಲ್ಲಿ ಇರುವುದರ ಜತೆಗೆ ಮಾಹಿತಿ ಸೋರಿಕೆಗೆ ಒಳಗಾಗುವ ಮತ್ತು ಹಾಳು ಮಾಡುವ ಉದ್ದೇಶದ ದಾಳಿ ಭೀತಿಗೆ ಒಳಗಾಗುವ ಸಾಧ್ಯತೆ ಹೆಚ್ಚಿಗೆ ಇದೆ. ಇಂತಹ ದುಷ್ಕೃತ್ಯಗಳಿಗೆಲ್ಲ ಕಡಿವಾಣ ಹಾಕುವ ಅನಿವಾರ್ಯ ಈಗ ಉದ್ಭವಿಸಿದೆ. ವಿಶ್ವದ `ದೊಡ್ಡಣ್ಣ' (ಅಮೆರಿಕ) ಅಂತರ್ಜಾಲದ ಮೂಲಕ ವಿಶ್ವದಾದ್ಯಂತ ಗೋಪ್ಯವಾಗಿ ಮಾಹಿತಿ ಸಂಗ್ರಹಿಸಿರುವುದು ಬಯಲಾದ ನಂತರವೇ ಸರ್ಕಾರಕ್ಕೆ ಜ್ಞಾನೋದಯವಾಗಿರುವುದು ಇದರಿಂದ ವೇದ್ಯವಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಫಲವಾಗಿ ಶತ್ರು ಮತ್ತು ಮಿತ್ರ ರಾಷ್ಟ್ರಗಳೂ ಮಾಹಿತಿ ಸಂಗ್ರಹಿಸಲು ಅಥವಾ ವೈರಿ ದೇಶಗಳಲ್ಲಿ ವಿಧ್ವಂಸಕ ಘಟನೆಗಳನ್ನು ನಡೆಸಲು ಅಂತರ್ಜಾಲ ಸಮರವನ್ನೂ ಬಳಸಿಕೊಳ್ಳುತ್ತಿರುವ ಸದ್ಯದ ಸಂದರ್ಭದಲ್ಲಿ ಮಾಹಿತಿಯ ಗೋಪ್ಯತೆ ಕಾಪಾಡಿಕೊಳ್ಳಲು ರಾಷ್ಟ್ರೀಯ ನೀತಿ ಅನಿವಾರ್ಯವಾಗಿತ್ತು. ಇದೊಂದು ದೂರದೃಷ್ಟಿಯ ನೀತಿ ನಿರೂಪಣಾ ಕರಡು ದಾಖಲೆಯಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದೇ ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ. ರಾಷ್ಟ್ರೀಯ ನೀತಿ ರೂಪಿಸಿದರಷ್ಟೇ ಸಾಲದು. ಅದರ ಜಾರಿಯಲ್ಲಿ ಎದುರಾಗುವ ಕಂಟಕಗಳನ್ನೆಲ್ಲ ನಿವಾರಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರವು ರಾಜ್ಯಗಳ ಸಹಯೋಗದಲ್ಲಿ ರಚನಾತ್ಮಕವಾಗಿ ಕಾರ್ಯಪ್ರವೃತ್ತವಾಗಬೇಕು. ಮಾಹಿತಿ, ಸಂಪರ್ಕ ತಂತ್ರಜ್ಞಾನ ರಂಗದ ಮೂಲ ಸೌಕರ್ಯಗಳ ಸಂರಕ್ಷಣೆ ಮತ್ತು ಅನಿರೀಕ್ಷಿತ ಬಿಕ್ಕಟ್ಟು ನಿರ್ವಹಣೆ ಸಂದರ್ಭದಲ್ಲಿ ಸರ್ಕಾರದ ವಿವಿಧ ಭದ್ರತಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತಾಗಲು ಸರ್ಕಾರವು ಸಮನ್ವಯ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿರುವುದು ಸರಿಯಾದ ಧೋರಣೆಯಾಗಿದೆ. ಆದರೆ ಸುರಕ್ಷತೆಗೆ ಸಂಬಂಧಿಸಿದ ಸಂಸ್ಥೆಗಳ ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ನಿಗದಿಪಡಿಸುವಲ್ಲಿ ರಾಷ್ಟ್ರೀಯ ನೀತಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷದಷ್ಟು ಅಂತರ್ಜಾಲ ಸುರಕ್ಷತಾ ತಂತ್ರಜ್ಞರನ್ನು ಸೃಷ್ಟಿಸುವ ಪ್ರಸ್ತಾವ ಎಷ್ಟು ಕಾರ್ಯಸಾಧ್ಯವಾದದ್ದು ಎನ್ನುವ ಪ್ರಶ್ನೆಯೂ ಇದೆ. ಅರ್ಹ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲು ದೇಶದ ಪ್ರಮುಖ ಐ.ಟಿ ಸಂಸ್ಥೆಗಳೇ ಹರಸಾಹಸ ಮಾಡುತ್ತಿರುವಾಗ ಭಾರಿ ಸಂಖ್ಯೆಯಲ್ಲಿ ಸುರಕ್ಷತಾ ತಂತ್ರಜ್ಞರ ನೇಮಕ ಸಾಧ್ಯವೆ ಎನ್ನುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳದಿದ್ದರೆ ಈ ನೀತಿ ವಿಫಲವಾದಂತೆಯೇ ಸರಿ. ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿ ಸಂಗ್ರಹ ಮತ್ತು ಸುರಕ್ಷತಾ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಸರ್ಕಾರ ಕಾರ್ಯಪ್ರವೃತ್ತವಾದರೆ ಮಾತ್ರ ರಾಷ್ಟ್ರೀಯ ನೀತಿ ಅಳವಡಿಸಿಕೊಂಡಿರುವುದು ಸಾರ್ಥಕ ಎನಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.