ಖಾಸಗಿ ವಿವಿಗಳ ಪ್ರಸ್ತುತತೆ ಹೆಚ್ಚುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳಿಂದ ಬಡವರ ಶಿಕ್ಷಣಕ್ಕೆ ಯಾವ ರೀತಿಯಲ್ಲಿ ಲಾಭವಾಗುತ್ತಿದೆ ಎಂಬ ಬಹುಮುಖ್ಯವಾದ ಪ್ರಶ್ನೆಯೊಂದನ್ನು ಎತ್ತುವ ಮೂಲಕ ಕರ್ನಾಟಕದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನಮ್ಮ ವಿಶ್ವವಿದ್ಯಾಲಯ ಶಿಕ್ಷಣದ ಕುರಿತಂತೆ ಚರ್ಚೆಯೊಂದನ್ನು ಆರಂಭಿಸಿದ್ದಾರೆ. ಎರಡು ದಶಕಗಳ ಹಿಂದೆ ಭಾರತ ಮಾರುಕಟ್ಟೆಯನ್ನು ಮುಕ್ತಗೊಳಿಸುವ ತೀರ್ಮಾನ ಕೈಗೊಂಡಾಗಲೇ ವಿದೇಶೀ ವಿಶ್ವವಿದ್ಯಾಲಯಗಳ ಭಾರತ ಪ್ರವೇಶದ ಕುರಿತಂತೆ ಚರ್ಚೆ ಆರಂಭವಾಗಿತ್ತು. ಮುಂದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉದಾರವಾಗಿ `ಡೀಮ್ಡ ವಿಶ್ವವಿದ್ಯಾಲಯ'ದ ಸ್ಥಾನ ನೀಡಲು ಆರಂಭಿಸಿದಾಗ ಉನ್ನತ ಶಿಕ್ಷಣವನ್ನು ಖಾಸಗಿಯವರಿಗೆ ಒತ್ತೆಯಿಡಲಾಗುತ್ತಿದೆ ಎಂಬ ಟೀಕೆಗಳು ವ್ಯಾಪಕವಾಗಿ ಕೇಳಿಬಂದಿದ್ದವು. ನ್ಯಾಯಾಲಯದ ಮಧ್ಯಪ್ರವೇಶದಿಂದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಡೀಮ್ಡ ವಿಶ್ವವಿದ್ಯಾಲಯದ ಸ್ಥಾನವನ್ನೂ ಕಳೆದುಕೊಂಡವು. ಇದರ ಹಿಂದೆಯೇ ರಾಜ್ಯ ಸರ್ಕಾರದ ಅನುಮತಿ ಪಡೆದು ಸ್ಥಾಪಿಸಬಹುದಾದ ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿತು. ಹಿಂದಿನ ಬಿಜೆಪಿ ಸರ್ಕಾರ ಸುಮಾರು 22 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುಮತಿ ನೀಡಿತ್ತು. ಈಗಿನ ಸರ್ಕಾರ ಅವುಗಳ ಮರುಪರಿಶೀಲನೆಗಾಗಿ ಸಮಿತಿಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಕುರಿತ ಚರ್ಚೆಯನ್ನು ಪರಿಶೀಲಿಸುವ ಅಗತ್ಯವಿದೆ. ದತ್ತಿ ಆಧಾರದಲ್ಲಿ ನಡೆಯುವ ಸಾಮಾಜಿಕ ಉದ್ದೇಶವೊಂದನ್ನಿಟ್ಟುಕೊಂಡು ಸ್ಥಾಪಿತವಾಗಿರುವ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವನ್ನೂ ಶಿಕ್ಷಣದ ವ್ಯಾಪಾರದ ಅನುಕೂಲಕ್ಕಾಗಿ ರೂಪಿಸಿಕೊಂಡಿರುವ ಖಾಸಗಿ ವಿಶ್ವವಿದ್ಯಾಲಯಗಳನ್ನೂ ಹೋಲಿಸಲು ಸಾಧ್ಯವಿಲ್ಲ. ಮೂರು ತಿಂಗಳ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ್ದ ರಾಜ್ಯಪಾಲ ಭಾರದ್ವಾಜ್ ಅವರೇ `ಎಲ್ಲಾ ಖಾಸಗಿ ವಿ.ವಿ.ಗಳನ್ನು ಸಂಶಯದಿಂದ ನೋಡಬೇಕಾದ ಅಗತ್ಯವಿಲ್ಲ. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಬಹಳ ಉತ್ತಮ ಕೆಲಸ ಮಾಡುತ್ತಿದೆ' ಎಂದಿದ್ದರು. ಕೇವಲ ಮೂರು ದಿನಗಳ ಹಿಂದಷ್ಟೇ ಖಾಸಗಿ ವಿಶ್ವವಿದ್ಯಾಲಯಗಳಿಗೆ ಹಿಂದಿನ ಸರ್ಕಾರ ನೀಡಿರುವ ಅನುಮತಿಯ ಪರಾಮರ್ಶೆಯ ಕುರಿತಂತೆ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ `ಅಜೀಂ ಪ್ರೇಂಜಿ ವಿ.ವಿ. ಈಗಾಗಲೇ ಉತ್ತಮ ಕೆಲಸ ಮಾಡಿದೆ. ಅದರ ಬಗ್ಗೆ ನಮಗೆ ಸಮಸ್ಯೆ ಇಲ್ಲ' ಎಂದಿದ್ದರು. ಆದರೆ ಮೂರು ತಿಂಗಳ ನಂತರ ರಾಜ್ಯಪಾಲರು ತಮ್ಮ ಟೀಕಾಸ್ತ್ರವನ್ನು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಮೇಲೂ ಪ್ರಯೋಗಿಸಿರುವುದು ಸಂಶಯಗಳಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರದ ಆಡಳಿತದಡಿಯಲ್ಲಿ ಬರುವ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳೂ ಒಂದಲ್ಲಾ ಒಂದು ಹಗರಣದ ಭಾರದಲ್ಲಿ ಬಳಲುತ್ತಿವೆ. ಈ ಸ್ಥಿತಿಯ ನೈತಿಕ ಹೊಣೆ ಈ ವಿ.ವಿ.ಗಳ ಕುಲಾಧಿಪತಿಯಾಗಿ ರಾಜ್ಯಪಾಲರ ಮೇಲೂ ಇದೆ. ಈ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಿಕೊಳ್ಳಲು ನೀತಿ ನಿರೂಪಣೆಯ ಮಟ್ಟದಲ್ಲಿ ತರಬೇಕಾಗಿರುವ ಬದಲಾವಣೆಗಳಿಗಾಗಿ ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗಿದೆ. ಅವರಿದನ್ನು ಮರೆತು ಖಾಸಗಿ ವಿಶ್ವವಿದ್ಯಾಲಯಗಳ ಸಾಮಾಜಿಕ ಬದ್ಧತೆಯ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.