ಜಾತಿ ಸಮೀಕ್ಷೆಯ ಅಗತ್ಯ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ನಡೆಸುವ ಕಾಂಗ್ರೆಸ್ ಸರ್ಕಾರದ ಚಿಂತನೆ ಸ್ವಾಗತಾರ್ಹ ಮಾತ್ರವಲ್ಲ ಅದು ತುರ್ತಾಗಿ ಆಗಬೇಕಾದ ಕೆಲಸ. ಈ ಸಮೀಕ್ಷೆಯಿಂದ ರಾಜ್ಯದಲ್ಲಿರುವ ವಿವಿಧ ಜಾತಿಗಳ ಜನರ ಸಂಖ್ಯೆಯ ಜತೆಗೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಸಮೀಕ್ಷಾ ವರದಿ ಆಧಾರದ ಮೇಲೆ ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಜನರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸರ್ಕಾರಕ್ಕೆ ಸಾಧ್ಯವಾಗಬಹುದು. ಅದಕ್ಕಿಂತ ಮುಖ್ಯವಾಗಿ ಇದುವರೆಗೆ ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ ಯೋಜನೆಗಳಿಂದ ಯಾರಿಗೆ ಪ್ರಯೋಜನವಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಲು ಸಮೀಕ್ಷೆಯಿಂದ ಸಹಾಯಕವಾದೀತು. ಈ ಸಮೀಕ್ಷೆ ಎಂದೋ ನಡೆಯಬೇಕಾಗಿತ್ತು. ಬಹುತೇಕ ರಾಜಕೀಯ ಪಕ್ಷಗಳಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ಅವಕಾಶ ನೀಡಿರಲಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಅಗತ್ಯವನ್ನು ಮನಗಂಡಿದೆ. ಸಮೀಕ್ಷೆ ಒಂದೆರಡು ತಿಂಗಳಲ್ಲಿ ಮಾಡಿಮುಗಿಸುವ ಕೆಲಸ ಅಲ್ಲ. ಕಾಲಮಿತಿಯಲ್ಲಿ ಸಮೀಕ್ಷೆಯ ಉದ್ದೇಶವನ್ನು ಅರ್ಥಮಾಡಿಕೊಂಡು ಅದಕ್ಕಾಗಿ ಶ್ರಮಿಸುವ ಸಿಬ್ಬಂದಿ ಅಗತ್ಯವಿದೆ. ಅವರಿಗೆ ಸೂಕ್ತ ತರಬೇತಿಯೂ ಬೇಕು. ಸಮೀಕ್ಷೆಗೆ ಬೇಕಾದ ಹಣಕಾಸಿನ ನೆರವು ನೀಡುವುದರ ಜತೆಗೆ ಅದು ದಾರಿ ತಪ್ಪದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ್ದು. ಅದಕ್ಕಿಂತ ಮುಖ್ಯವಾಗಿ ಸಮೀಕ್ಷೆಯ ಉದ್ದೇಶವನ್ನೇ ವಿಫಲಗೊಳಿಸುವ ಶಕ್ತಿಗಳ ಬಗ್ಗೆಯೂ ಸರ್ಕಾರ ಎಚ್ಚರವಹಿಸಬೇಕು. ಜಾತಿವಾರು ಸಮೀಕ್ಷೆ ಹಿಂದುಳಿದ ಜಾತಿಗಳಿಗೆ ಮಾತ್ರ ಅನುಕೂಲಕರ ಎಂಬ ಭಾವನೆ ಸರಿಯಾದುದಲ್ಲ. ಸಮೀಕ್ಷೆಯಿಂದ ಮೀಸಲಾತಿ ಸೌಲಭ್ಯ ಇನ್ನಷ್ಟು ಜಾತಿಗಳಿಗೆ ವಿಸ್ತರಣೆಯಾಗಲಿದೆ ಎಂಬ ವಾದದಲ್ಲಿ ಹುರುಳಿಲ್ಲ. ಇದುವರೆಗೆ ಸೌಲಭ್ಯಗಳ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದಿರುವ ಜಾತಿಗಳನ್ನು ಗುರುತಿಸಲು ಸಮೀಕ್ಷೆಯಿಂದ ಸಹಾಯವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಶಿಕ್ಷಣ, ಉದ್ಯೋಗ ಮತ್ತಿತರ ವಿಶೇಷ ಸವಲತ್ತುಗಳನ್ನು ಹಿಂದುಳಿದ ಹಾಗೂ ಇತರ ಜಾತಿಗಳ ಯಾದಿಯಲ್ಲಿರುವ ಮತ್ತು ರಾಜಕೀಯವಾಗಿ ಬಲಿಷ್ಠವಾಗಿರುವ ಕೆಲವೇ ಜಾತಿಗಳು ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಲು ಸಮೀಕ್ಷೆಯಿಂದ ಸಾಧ್ಯವಾಗಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾನ್ಯತೆ ನೀಡದಿರುವ ಹತ್ತಾರು ಜಾತಿಗಳು ರಾಜ್ಯದಲ್ಲಿ ಇವೆ ಎಂಬ ಅಭಿಪ್ರಾಯವಿದೆ. ಸಮೀಕ್ಷೆಯಿಂದ ಅಂತಹ ಕೆಲವು ಜಾತಿಗಳಿಗಾದರೂ ಮಾನ್ಯತೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಲು ಸಹಾಯವಾದೀತು. ಒಟ್ಟಾರೆ ಈ ಸಮೀಕ್ಷೆ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.