ಈಜಿಪ್ಟ್ ಮತ್ತೆ ಸಂಕಷ್ಟದಲ್ಲಿ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ಪ್ರದರ್ಶನಗಳು, ಅಧ್ಯಕ್ಷ ಮೊಹಮದ್ ಮೊರ್ಸಿ ಅವರ ಸ್ಥಾನಕ್ಕೆ ಕುತ್ತು ತರುವ ಎಲ್ಲ ಸೂಚನೆಗಳಿವೆ. ಕೈರೋದಲ್ಲಿ ಪ್ರತಿ ದಿನ ಚಳವಳಿ ಉಗ್ರಗೊಳ್ಳುತ್ತಾ ಹೋಗುತ್ತಿದೆ. ಈಜಿಪ್ಟಿನ ಇತಿಹಾಸದಲ್ಲಿಯೇ ಈ ಪ್ರಮಾಣದ ಚಳವಳಿ ಈ ಹಿಂದೆ ಎಂದೂ ನಡೆದಿಲ್ಲ ಎನ್ನಲಾಗಿದೆ. ಪ್ರತಿಪಕ್ಷಗಳು ಮೊರ್ಸಿ ಅವರ ರಾಜೀನಾಮೆಗೆ ತೀವ್ರ ಒತ್ತಡ ಹೇರುತ್ತಿವೆ. ಇದಕ್ಕೆ ಪ್ರತಿಯಾಗಿ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆ ಕೂಡ ತನ್ನ ಪ್ರತಿಭಟನಾ ಚಳವಳಿಯನ್ನು ತೀವ್ರಗೊಳಿಸಿದೆ. ಇತ್ತೀಚೆಗೆ ಪೊಲೀಸರು ಅಸಹಾಯಕರಾಗಿ ನೋಡುತ್ತಿದ್ದಂತೆ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಯ ಮುಖ್ಯ ಕಚೇರಿಯನ್ನು ಚಳವಳಿಕಾರರು ಧ್ವಂಸ ಮಾಡ್ದ್ದಿದಾರೆ. ಇದರಿಂದ ಅಲ್ಲಿನ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಊಹಿಸಬಹುದು. ಮೊರ್ಸಿ ಜನರಿಂದ ಮಾತ್ರವಲ್ಲ, ಸೇನೆಯಿಂದಲೂ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಬಿಕ್ಕಟ್ಟು ಪರಿಹರಿಸದಿದ್ದಲ್ಲಿ ತನ್ನ ಯೋಜನೆಯೊಂದಿಗೆ ಮಧ್ಯಪ್ರವೇಶ ಮಾಡಬೇಕಾದೀತು ಎಂದು ಸೇನೆ ಎಚ್ಚರಿಕೆ ನೀಡಿದೆ. ಜನರ ಆಶಯವನ್ನು ಗೌರವಿಸಬೇಕು. ಆಡಳಿತ ನಡೆಸುವುದು ತನ್ನ ಉದ್ದೇಶವಲ್ಲ ಎಂದೂ ಅದು ಸ್ಪಷ್ಟನೆ ನೀಡಿದೆ. ಮೊರ್ಸಿ ಅವರು ಈಜಿಪ್ಟ್ ದೇಶದ ಪ್ರಥಮ ಚುನಾಯಿತ ಅಧ್ಯಕ್ಷ. 2011ರಲ್ಲಿ ಪ್ರಜಾಸತ್ತೆಗೆ ಆಗ್ರಹಿಸಿ ಹೋಸ್ನಿ ಮುಬಾರಕ್ ಅವರ ಸರ್ವಾಧಿಕಾರ ಮತ್ತು ಸೇನೆಯ ಬೆಂಬಲ ಹೊಂದಿರುವ ಸರ್ಕಾರದ ವಿರುದ್ಧ ಭಾರಿ ಚಳವಳಿ ನಡೆದ ಬಳಿಕ 2012ರಲ್ಲಿ ಅಧಿಕಾರಕ್ಕೆ ಬಂದವರು ಅವರು. ಆಗ ಪ್ರತಿದಿನ ಭಾರಿ ಸಂಖ್ಯೆಯಲ್ಲಿ ಜನರು ಕೈರೋದಲ್ಲಿ ನೆರೆದು ಮುಬಾರಕ್ ರಾಜೀನಾಮೆಗೆ ಭಾರಿ ಒತ್ತಡ ಹೇರಿದ್ದರು. ಆದರೆ ಮೊರ್ಸಿ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಜನರ ಆಕ್ರೋಶವನ್ನು ಎದುರಿಸಬೇಕಾಗಿ ಬಂದಿರುವುದು ವಿಪರ್ಯಾಸದ ಸಂಗತಿ. ಈಜಿಪ್ಟ್ ಸದ್ಯ ಎದುರಿಸುತ್ತಿರುವ ಬಿಕ್ಕಟ್ಟಿಗೆ ತಾನು ಹೊಣೆಯಲ್ಲ ಎಂದು ಹೇಳಿ ಮೊರ್ಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ದೇಶದ ಆರ್ಥಿಕ ಪುನಶ್ಚೇತನಕ್ಕೆ ಶ್ರಮಿಸುವ ಬದಲು ಅವರು ಬ್ರದರ್‌ಹುಡ್‌ನ ಅಧಿಕಾರ ಬಲವರ್ಧನೆಗೆ ಗಮನ ನೀಡಿದರು. ದೇಶದ ಸಂವಿಧಾನ ಬ್ರದರ್‌ಹುಡ್‌ನ ಆಶಯಗಳನ್ನು ಬಿಂಬಿಸಲಿ ಎಂದು ಆ ನಿಟ್ಟಿನಲ್ಲಿ ಶ್ರಮಿಸಿದರು. ತಮ್ಮ ವಿಚಾರಧಾರೆಗಿಂತ ವಿಭಿನ್ನ ವಿಚಾರ ಹೊಂದಿರುವವರ ಜತೆ ಸಮಾಲೋಚಿಸಲಿಲ್ಲ ಅಥವಾ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸಂಪುಟದ ಐದು ಮಂದಿ ಸದಸ್ಯರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನ್ಯಾಯಾಂಗ, ಪೊಲೀಸ್ ಮತ್ತು ಮಾಧ್ಯಮಗಳ ವಿರೋಧ ಕಟ್ಟಿಕೊಂಡರು. ಮೊರ್ಸಿ ಅವರು ವಿರೋಧಿಗಳ ಜತೆ ಮಾತುಕತೆಗೆ ಮುಂದಾಗಬೇಕು. ರಾಷ್ಟ್ರೀಯ ಏಕತಾ ಸರ್ಕಾರ ರಚನೆಗೆ ಒಲವು ತೋರಿಸಬೇಕು. ಅವರ ವಿರೋಧಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಮೊರ್ಸಿ ಮಾತುಕತೆಗೆ ಮುಂದಾದಾಗ ಅವರ ವಿರೋಧಿಗಳು ಅದನ್ನು ತಿರಸ್ಕರಿಸಿದ್ದಾರೆ. ಸೇನೆ ಸದ್ಯ ಮರೆಯಲ್ಲಿದ್ದು ಅವಕಾಶಕ್ಕೆ ಎದುರು ನೋಡುತ್ತಿದೆ ಎನ್ನುವುದನ್ನು ಮೊರ್ಸಿ ಮತ್ತು ಅವರ ವಿರೋಧಿಗಳು ಮರೆಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.