ಹಳಿ ತಪ್ಪಿದ ನಗರಾಡಳಿತ ರಾಜ್ಯದ ಆರನೇ ಒಂದು ಭಾಗದಷ್ಟು ಜನರನ್ನು ಪ್ರತಿನಿಧಿಸುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಆಡಳಿತ ಹಳಿ ತಪ್ಪಿದೆ. ಕಸ ವಿಲೇವಾರಿಯಿಂದ ಹಿಡಿದು ರಸ್ತೆಗಳ ನಿರ್ವಹಣೆವರೆಗೂ ವೈಫಲ್ಯಗಳೇ ಎದ್ದು ಕಾಣುತ್ತವೆ. ಆಡಳಿತ ಬಿಗಿಗೊಳಿಸುವ ಸೂಚನೆಗಳಂತೂ ಗೋಚರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಗಮನ ಹರಿಸಲು ಚುನಾಯಿತ ಪ್ರತಿನಿಧಿಗಳಿಗೆ ಆಸಕ್ತಿಯೂ ಇದ್ದಂತಿಲ್ಲ. ಆರ್ಥಿಕ ಅಶಿಸ್ತು ಬಿಬಿಎಂಪಿಯನ್ನು ದಿವಾಳಿಯತ್ತ ದೂಡಿದೆ. ಗುತ್ತಿಗೆದಾರರಿಗೆ 1,400 ಕೋಟಿ ರೂಪಾಯಿ ಮೊತ್ತದ ಬಾಕಿ ಬಿಲ್ ಪಾವತಿಸಬೇಕಿದೆ. ರಸ್ತೆಗಳು ಒಂದೇ ಮಳೆಗೆ ಕಿತ್ತುಬರುತ್ತವೆ. ಕಾಮಗಾರಿಗಳ ಗುಣಮಟ್ಟ ಆ ಮಟ್ಟದಲ್ಲಿದೆ. ಇದರ ನಡುವೆ ಮೇಯರ್ ಸ್ಥಾನದ ಮೀಸಲಾತಿ ವಿಷಯ ಕಗ್ಗಂಟಾಗಿ ಪರಿಣಮಿಸಿದೆ. ಮೇಯರ್ ಅವಧಿ ಏಪ್ರಿಲ್ 27ಕ್ಕೆ ಪೂರ್ಣಗೊಂಡರೂ ಮೀಸಲಾತಿ ವಿವಾದದಿಂದಾಗಿ ಹೊಸ ಮೇಯರ್ ಆಯ್ಕೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಇಲ್ಲಿಯವರೆಗೂ ಬಜೆಟ್ ಮಂಡನೆ ಆಗಿಲ್ಲ. ಆರ್ಥಿಕ ವರ್ಷ ಆರಂಭವಾಗಿ ಮೂರೂವರೆ ತಿಂಗಳಾದರೂ ಬಜೆಟ್ ಮಂಡನೆಯಾಗಿಲ್ಲ ಎಂಬುದು ನಗೆಪಾಟಲಿನ ವಿಷಯ. ಮುಂಗಡ ಪತ್ರವೇ ಇಲ್ಲದ ಮೇಲೆ ಆದ್ಯತೆಗಳ ಕುರಿತಾಗಲೀ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆ ವಿಷಯವಾಗಲೀ ಮಾತಾಡುವ ಪ್ರಶ್ನೆಯೇ ಎದುರಾಗುವುದಿಲ್ಲ. ಮೇಯರ್ ಮೀಸಲಾತಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ಇದೆ. ಆದಕಾರಣ ಅವಧಿ ಮುಗಿದರೂ ಮೇಯರ್ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಪಡೆದಿರುವ ವೆಂಕಟೇಶಮೂರ್ತಿ ಅವರಿಗೇ ಬಜೆಟ್ ಮಂಡಿಸಲು ಸರ್ಕಾರ ಸೂಚಿಸಿತ್ತು. ಅದರ ಅನುಸಾರ ಇದೇ 20ಕ್ಕೆ ಬಜೆಟ್ ಮಂಡನೆಗೆ ದಿನ ನಿಗದಿಯಾಗಿತ್ತು. ಕೌನ್ಸಿಲ್ ಕಾರ್ಯದರ್ಶಿ, ಸಭೆಗೆ ಸಿದ್ಧತೆ ಕೂಡ ನಡೆಸಿದ್ದರು. ಆದರೆ, ರಾಜಕೀಯ ಕಾರಣಗಳಿಗಾಗಿ, ಕೊನೆ ಗಳಿಗೆಯಲ್ಲಿ ಬಜೆಟ್ ಸಭೆಯನ್ನು 26ಕ್ಕೆ ಮುಂದೂಡಿರುವುದು ಸರಿಯಲ್ಲ. `ಆಡಳಿತ ಪಕ್ಷವನ್ನೇ ಕತ್ತಲಲ್ಲಿ ಇಟ್ಟು ಬಜೆಟ್ ಸಿದ್ಧಪಡಿಸಲಾಗಿದೆ' ಎಂದು ಬಿಜೆಪಿ ಸದಸ್ಯರು ತಗಾದೆ ತೆಗೆದಿರುವುದೇ ಸಭೆ ಮುಂದೂಡಲು ನಿಜವಾದ ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಸರ್ಕಾರ ಕಾಂಗ್ರೆಸ್ ಕೈಯಲ್ಲಿದೆ. ಬಿಬಿಎಂಪಿ ಬಿಜೆಪಿ ಹಿಡಿತದಲ್ಲಿದೆ. ಪಕ್ಷ ರಾಜಕಾರಣದ ಮೇಲಾಟಕ್ಕೆ ಸಾರ್ವಜನಿಕ ಹಿತ ನಲುಗಬೇಕಾಗಿ ಬಂದಿರುವುದು ವಿಪರ್ಯಾಸ. ಇದಕ್ಕೆ ಜಾತಿಬಣ್ಣದ ಲೇಪನವಂತೂ ದುರದೃಷ್ಟಕರ. ಮೇಯರ್, ಉಪಮೇಯರ್ ಸ್ಥಾನಗಳ ಮೀಸಲಾತಿ ವಿಷಯ ಪ್ರತಿವರ್ಷ ಗೋಜಲಾಗುತ್ತಿದೆ. ಅಧಿಕಾರ ಸೂತ್ರ ಹಿಡಿದ ಪಕ್ಷಗಳು, ಮೀಸಲಾತಿ ನಿಗದಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸುವುದರಿಂದ ಇಂಥ ಗೊಂದಲ ಉಂಟಾಗುತ್ತಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಿದರೆ ಮಾತ್ರ ಇಂತಹ ಸಮಸ್ಯೆಗಳು ಪದೇ ಪದೇ ಮರುಕಳಿಸುವುದು ತಪ್ಪುತ್ತದೆ. ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ದೊರೆಯುವ ರೀತಿಯಲ್ಲಿ ಮೀಸಲಾತಿಯನ್ನು ವ್ಯವಸ್ಥಿತವಾಗಿ ರೂಪಿಸಲು ಇಲ್ಲಿಯವರೆಗೂ ಆಗದಿರುವುದು ವ್ಯವಸ್ಥೆಯ ಬಹುದೊಡ್ಡ ಲೋಪ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಕಾರಣ. ವಿಶ್ವಖ್ಯಾತಿಯ ನಗರದ ಸೊಬಗು ಹೆಚ್ಚಿಸಲು ಆಡಳಿತ ಮತ್ತು ಅಭಿವೃದ್ಧಿ ಎರಡೂ ನೆಲೆಯಲ್ಲಿ ದೃಢ ನಿರ್ಧಾರಗಳು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.