ಆಸಿಡ್ ಮಾರಾಟಕ್ಕೆ ನಿಯಂತ್ರಣ ಆಸಿಡ್ ದಾಳಿ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಎಚ್ಚರಿಸಲು ಕಡೆಗೂ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸ ಬೇಕಾಯಿತು. ಆಸಿಡ್ ದಾಳಿ ಸಂತ್ರಸ್ತರತ್ತ ತೋರುತ್ತಿರುವ ನಿಧಾನಗತಿಯ ಸ್ಪಂದನಕ್ಕೆ ಅನೇಕ ಬಾರಿ ನಮ್ಮ ಸರ್ಕಾರಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈಗ ಆಸಿಡ್ ದಾಳಿಯನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವುದು ಮಹತ್ವದ ಹೆಜ್ಜೆ. ಆಸಿಡ್ ದಾಳಿ ಸಂತ್ರಸ್ತರಿಗೆ ರೂ 3 ಲಕ್ಷ ಪರಿಹಾರ ನೀಡಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಹಾಗೆಯೇ ಆಸಿಡ್ ಮಾರಾಟ ನಿಯಂತ್ರಣಕ್ಕೆ ನಿಯಮಾವಳಿಗಳನ್ನು ಮೂರು ತಿಂಗಳೊಳಗೇ ರೂಪಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಆಸಿಡ್ ಖರೀದಿಸುವವರ ಗುರುತು ಚೀಟಿ ಪರಿಶೀಲಿಸಿ, ಅವರ ವಿಳಾಸಗಳನ್ನು ಮಾಹಿತಿ ಪುಸ್ತಕದಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಿರುವ ಕ್ರಮವೂ ಸ್ವಾಗತಾರ್ಹ. ವಾಣಿಜ್ಯ ಹಾಗೂ ವೈಜ್ಞಾನಿಕ ಉದ್ದೇಶಗಳಿಗೆ ಹೊರತುಪಡಿಸಿ ಆಸಿಡ್ ಮಾರಾಟ ಹಾಗೂ ವಿತರಣೆ ನಿಷೇಧಿಸಬೇಕು ಎಂದು 2009ರ ಜುಲೈ ತಿಂಗಳಲ್ಲಿ ಕಾನೂನು ಆಯೋಗ ತನ್ನ 226ನೇ ವರದಿಯಲ್ಲಿ ತಿಳಿಸಿತ್ತು. ಆಸಿಡ್ ಮಾರಾಟಕ್ಕೆ ಹೇರುವ ಈ ಬಗೆಯ ನಿರ್ಬಂಧಗಳು, ಅಪರಾಧಗಳ ಪ್ರಮಾಣವನ್ನು ತಗ್ಗಿಸುತ್ತವೆ ಎಂಬುದಕ್ಕೆ ನಮ್ಮ ನೆರೆಯ ಬಾಂಗ್ಲಾದೇಶವೇ ಉದಾಹರಣೆ. ಬಾಂಗ್ಲಾದೇಶದಲ್ಲಿ ಆಸಿಡ್ ಮಾರಾಟ ನಿಯಂತ್ರಣಕ್ಕೆ 2002ರಲ್ಲಿ ಕಾಯ್ದೆ ಜಾರಿಗೊಳಿಸಲಾಯಿತು. ಆ ನಂತರ, 2002ರಲ್ಲಿ 367ರಷ್ಟಿದ್ದ ಆಸಿಡ್ ದಾಳಿ ಪ್ರಕರಣಗಳ ಸಂಖ್ಯೆ 2009ರ ವೇಳೆಗೆ 116ಕ್ಕೆ ಇಳಿದಿತ್ತು. ಮಹಿಳೆಯ ಮೇಲೆ ನಡೆಯುವಂತಹ ಅತಿ ಘೋರ ಅಪರಾಧ ಆಸಿಡ್ ದಾಳಿ. ಇಂತಹ ದಾಳಿಗಳನ್ನು ಸಾಮಾನ್ಯವಾಗಿ ನಡೆಸಿರುವವರು ಪತಿ, ಪ್ರಿಯಕರ, ಮದುವೆಯಾಗೆಂದು ಪೀಡಿಸುವವರು, ಮನೆ ಮಾಲೀಕರು ಅಥವಾ ಉದ್ಯೋಗದಾತ. ಮಹಿಳೆಯ ಮೇಲೆ ಅಧಿಕಾರದ ಹಿಡಿತ ಸಾಧಿಸಲು ಯತ್ನಿಸುವಂತಹವರು ಇವರು. ಆದರೆ ಇದನ್ನು ಪ್ರಶ್ನಿಸುವ ಮಹಿಳೆಯ ಮನೋಭಾವವನ್ನು ಸಹಿಸಿಕೊಳ್ಳಲಾಗದೆ ಹಗೆತನ ಸಾಧಿಸಲು ಪುರುಷರಿಗೆ ಆಸಿಡ್ ಪ್ರಬಲ ಅಸ್ತ್ರವಾಗಿರುವುದು ದುರದೃಷ್ಟಕರ. ರಾಜ್ಯದಲ್ಲಿ 1991ರಿಂದ ಈವರೆಗೆ 65ಕ್ಕಿಂತ ಹೆಚ್ಚಿನ ಸಂಖ್ಯೆಯ ಮಹಿಳೆಯರು ಆಸಿಡ್ ದಾಳಿಗೆ ಗುರಿಯಾಗಿದ್ದಾರೆ. ಈಗ ಸಹ ಸುಪ್ರೀಂಕೋರ್ಟ್ ಘೋಷಿಸಿರುವ ರೂ 3 ಲಕ್ಷ ಪರಿಹಾರ, ಆಸಿಡ್ ದಾಳಿಯಲ್ಲಿ ಬೆಂದು ಹೋದ ದೇಹದ ಚರ್ಮದ ಕಸಿ ಚಿಕಿತ್ಸೆಗೆ ಏನೇನೂ ಸಾಲದು ಎಂಬುದು ತಜ್ಞರ ಅಭಿಪ್ರಾಯ. ಜೊತೆಗೆ ಸುಟ್ಟಗಾಯಗಳ ಚಿಕಿತ್ಸಾ ಘಟಕಗಳು ಹಾಗೂ ಚರ್ಮ ಕಸಿ ಕೇಂದ್ರಗಳೂ ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಈ ಅಗತ್ಯವನ್ನೂ ಸರ್ಕಾರಗಳು ಪರಿಗಣಿಸುವುದು ಅವಶ್ಯ. ಆಸಿಡ್ ದಾಳಿಗೊಳಗಾದವರು ಜೀವಮಾನವಿಡೀ ವಿರೂಪಗೊಂಡ ದೇಹದ ಸಮಸ್ಯೆ ಎದುರಿಸಬೇಕು. ಇದರಿಂದ ಉಂಟಾಗಬಹುದಾದ ದೈಹಿಕ ವೈಕಲ್ಯ ಹಾಗೂ ಮಾನಸಿಕ ಕ್ಷೋಭೆ ಜೀವಮಾನವಿಡೀ ಕಾಡಿಸುತ್ತದೆ. ಇದು ಅವರ ಸಾಮಾಜಿಕ ಹಾಗೂ ಆರ್ಥಿಕ ಬದುಕಿನ ಮೇಲೂ ದೀರ್ಘಕಾಲೀನ ಪರಿಣಾಮ ಬೀರುತ್ತದೆ. ಈ ಎಲ್ಲಾ ಅಂಶಗಳನ್ನೂ ಆಸಿಡ್ ದಾಳಿಗೆ ಒಳಗಾದವರಿಗೆ ಪರಿಹಾರ ಅಥವಾ ಪುನರ್ವಸತಿ ಕಲ್ಪಿಸುವ ಸಂದರ್ಭದಲ್ಲಿ ಗಮನದಲ್ಲಿ ಇಟ್ಟುಕೊಳ್ಳುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.