ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5 ಕೋಟಿ ರೂಪಾಯಿ ಮತ್ತು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 15.90 ಕೋಟಿ ರೂಪಾಯಿ ದುರುಪಯೋಗವಾಗಿರುವುದು ಬಹಿರಂಗವಾಗಿದೆ. ಮಂಡ್ಯ ಮತ್ತು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಬ್ಬರು ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿಗೆ ಬಡ್ಡಿ ನೀಡುವ ಆಸೆ ತೋರಿಸಿ ಜನರನ್ನು ವಂಚಿಸುವ ಖಾಸಗಿ ಸಂಸ್ಥೆಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಹೆಚ್ಚಿಗೆ ಬಡ್ಡಿ ಆಸೆಗೆ ಸರ್ಕಾರದ ಸಂಸ್ಥೆಗಳೇ ಮೋಸ ಹೋಗುವುದು ಹಾಗೂ ಇದಕ್ಕೆ ಆಯುಕ್ತರಂತಹ ಹಿರಿಯ ಅಧಿಕಾರಿಗಳೇ ನೆರವಾಗುವುದು ಅಕ್ಷಮ್ಯ ಅಪರಾಧ. ಸರ್ಕಾರಿ ಸಂಸ್ಥೆಯಲ್ಲಿ ಇರುವ ಹಣವೇ ಮಾಯವಾಗುತ್ತದೆ ಎಂಬುದು ನಮ್ಮ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಜ್ವಲಂತ ನಿದರ್ಶನ. ಜನರು ಹಲವಾರು ಆಸೆಗಳನ್ನು ಇಟ್ಟುಕೊಂಡು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಕಟ್ಟಿರುತ್ತಾರೆ. ಅವರಿಗೆ ನಿವೇಶನ ಒದಗಿಸುವ ಜವಾಬ್ದಾರಿಯನ್ನು ಹೊತ್ತ ಪ್ರಾಧಿಕಾರಗಳು ಹೀಗೆ ಹಣ ದುರುಪಯೋಗ ಮಾಡಿಕೊಂಡರೆ ಜನರು ಸರ್ಕಾರಿ ವ್ಯವಸ್ಥೆಯ ಬಗ್ಗೆಯೂ ನಂಬಿಕೆ ಕಳೆದುಕೊಳ್ಳುತ್ತಾರೆ. ಮಂಡ್ಯ ನಗರಾಭಿವೃಧ್ಧಿ ಪ್ರಾಧಿಕಾರ ಕಳೆದ 10 ವರ್ಷಗಳಿಂದ ನಷ್ಟದಲ್ಲಿಯೇ ಇದೆ. ಸಿಬ್ಬಂದಿಗೆ ಸಂಬಳ ನೀಡಲೂ ಹಣ ಇಲ್ಲದೆ ನಿವೇಶನಗಳನ್ನು ಹರಾಜು ಮಾಡಿ ವೇತನ ನೀಡಲಾಗುತ್ತಿದೆ. 29 ಸಾವಿರಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಜನರಿಗೆ ನಿವೇಶನ ನೀಡದೇ ಪ್ರಾಧಿಕಾರದ 5 ಕೋಟಿ ರೂಪಾಯಿಗಳನ್ನು ಯಾರೋ ಏಜೆಂಟರು ಹೆಚ್ಚು ಬಡ್ಡಿ ನೀಡುವುದಾಗಿ ನಂಬಿಸಿದ್ದರಿಂದ ಅವರ ಖಾತೆಗೆ ಹಣ ಜಮಾ ಮಾಡುವುದು ಹಾಗೂ ಅದಕ್ಕೆ ಸಹಕರಿಸಿದ್ದಕ್ಕೆ ಆಯುಕ್ತರೇ ಕಮಿಷನ್ ಪಡೆಯುವುದು ಜನರಿಗೆ ಮಾಡುವ ಬಹುದೊಡ್ಡ ವಂಚನೆ. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂತಹ ವಂಚನೆ ಹಲವಾರು ವರ್ಷಗಳಿಂದ ನಡೆಯುತ್ತಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಅಲಹಾಬಾದ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ವಿಜಯಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬ್ಯಾಂಕ್ ಆಫ್ ಬರೋಡ, ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕುಗಳ ನಕಲಿ ದಾಖಲೆ ಸೃಷ್ಟಿ ಮಾಡಿರುವುದು ಕೂಡ ಪತ್ತೆಯಾಗಿದೆ. ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಹಣವನ್ನು ಅರ್ಧದಲ್ಲಿಯೇ ವಾಪಸು ಪಡೆಯುವುದು, ನಕಲಿ ಠೇವಣಿ ಬಾಂಡ್ ಅನ್ನು ಪ್ರಾಧಿಕಾರದಲ್ಲಿ ಇಟ್ಟುಕೊಳ್ಳುವುದು, ಜನರ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ಜಮಾ ಮಾಡುವುದು ಹೀಗೆ ದುರುಪಯೋಗದ ಸರಮಾಲೆಯೇ ನಡೆದಿದೆ. ಮಂಡ್ಯ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ಕೈಗೊಳ್ಳಲು ಆದೇಶ ನೀಡದೇ ಇದ್ದರೆ ಈ ಪ್ರಕರಣ ಬೆಳಕಿಗೇ ಬರುತ್ತಿರಲಿಲ್ಲ. ಜಿಲ್ಲಾಧಿಕಾರಿ ಆದೇಶ ಬಂದ ನಂತರವೂ ಪ್ರಾಧಿಕಾರದ ಆಯುಕ್ತರು ಹಣ ಮಾಯವಾಗಿದೆ ಎಂದು ದೂರು ನೀಡುವ ನಾಟಕವಾಡಿದ್ದು ಹಾಗೂ ಬ್ಯಾಂಕ್ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದು ಹೇಳಿದ್ದು ಕೂಡ ಬೇಜವಾಬ್ದಾರಿಯ ಪರಮಾವಧಿ. ಇಂತಹ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲದೆ ರಾಜ್ಯದ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿನ ಹಣಕಾಸು ವಹಿವಾಟುಗಳ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಿ ಸಂಸ್ಥೆಗಳ ಬಗ್ಗೆ ಜನರಿಗೆ ನಂಬಿಕೆ ಬರುವಂತೆ ಮಾಡುವ ಜವಾಬ್ದಾರಿ ಕೂಡ ರಾಜ್ಯ ಸರ್ಕಾರದ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.