ಹಣಕಾಸು ಅಶಿಸ್ತಿಗೆ ತಕ್ಕ ಶಾಸ್ತಿ ಹಣಕಾಸು ಶಿಸ್ತು ಪಾಲಿಸದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಒಟ್ಟು 22 ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದಂಡ ವಿಧಿಸಿರುವುದರಿಂದ ವಾಣಿಜ್ಯ ಬ್ಯಾಂಕ್‌ಗಳ ವಹಿವಾಟಿನಲ್ಲಿ ಎಲ್ಲವೂ ಪಾರದರ್ಶಕವಾಗಿಲ್ಲ ಎನ್ನುವುದು ವೇದ್ಯವಾಗುತ್ತದೆ. ದೇಶದ ಅತಿ ದೊಡ್ಡ ಬ್ಯಾಂಕ್ ಹೆಗ್ಗಳಿಕೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕೂಡ ದಂಡನೆಗೆ ಒಳಗಾದ ಬ್ಯಾಂಕ್‌ಗಳ ಪಟ್ಟಿಯಲ್ಲಿ ಇರುವುದು ಕಳವಳಕಾರಿ. ದೇಶಿ ಬ್ಯಾಂಕಿಂಗ್ ವ್ಯವಸ್ಥೆಯ ವರ್ಚಸ್ಸಿಗೆ ಕಳಂಕ ತರುವ ಘಟನೆ ಇದಾಗಿದೆ. ಜನಸಾಮಾನ್ಯರಿಂದ ಒಂದು ಸಣ್ಣ ಮಾಹಿತಿ ಇರದಿದ್ದರೂ ಉಳಿತಾಯ ಖಾತೆ ತೆರೆಯಲು ನಿರಾಕರಿಸುವ ಬ್ಯಾಂಕ್‌ಗಳು ದೊಡ್ಡ ಕುಳಗಳ ಕಪ್ಪು ಹಣ ಬಿಳಿಯಾಗಿಸಲು ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೈವಿಸಿ) ಸೇರಿದಂತೆ ಹಲವಾರು ನಿಯಮಗಳನ್ನು ಗಾಳಿಗೆ ತೂರಿರುವುದು ಕಾನೂನುಬಾಹಿರವಷ್ಟೇ ಅಲ್ಲ ಶಿಕ್ಷಾರ್ಹವೂ ಹೌದು. ಬ್ಯಾಂಕ್ ಖಾತೆದಾರರ ಸಂಪೂರ್ಣ ಮಾಹಿತಿ, ಹಣಕಾಸಿನ ವಹಿವಾಟಿನ ಜಾಡು ತಿಳಿಯಲು `ಕೆವೈಸಿ', ಪ್ಯಾನ್ ಕಾರ್ಡ್ ಮಾಹಿತಿ ಸಲ್ಲಿಕೆ ಕಡ್ಡಾಯವಾಗಿರುವಾಗ ಮತ್ತು ರೂ.10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವರ್ಗಾವಣೆ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ವರದಿ ಸಲ್ಲಿಕೆಯಂತಹ ವಿಷಯಗಳಲ್ಲಿ ಬ್ಯಾಂಕ್‌ಗಳು ಉದ್ದೇಶಪೂರ್ವಕವಾಗಿ ನಿಯಮ ಉಲ್ಲಂಘಿಸಿರುವುದು ಬ್ಯಾಂಕಿಂಗ್ ನಿಯಂತ್ರಣ ವ್ಯವಸ್ಥೆಯ ವೈಫಲ್ಯವೂ ಹೌದು. ಇಂತಹ ಪ್ರಕರಣಗಳು ನಡೆಯಲು ಅವಕಾಶ ಮಾಡಿಕೊಟ್ಟ ಆರ್‌ಬಿಐ ಕೂಡ ಇದಕ್ಕೆ ಹೊಣೆಹೊರಬೇಕಾಗುತ್ತದೆ. ದೇಶದ ಖಾಸಗಿ ವಲಯದ ಮೂರು ಬ್ಯಾಂಕುಗಳು ಕಾನೂನುಬಾಹಿರ ರೀತಿಯಲ್ಲಿ ಹಣಕಾಸು ಚಟುವಟಿಕೆಯಲ್ಲಿ ನಿರತವಾಗಿವೆ ಎಂಬುದು ಅಂತರ್ಜಾಲ ಸುದ್ದಿತಾಣ `ಕೋಬ್ರಾ ಪೋಸ್ಟ್' ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಬ್ಯಾಂಕಿಂಗ್ ನಿಯಮಾವಳಿ ಮತ್ತು ಕಪ್ಪು ಹಣ ದುರ್ಬಳಕೆ ತಡೆ ಕಾನೂನಿನಡಿ ಕಡ್ಡಾಯವಾಗಿರುವ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಮೊತ್ತದ ನಗದು ವರ್ಗಾವಣೆಗೆ ಈ ಬ್ಯಾಂಕ್‌ಗಳು ಸಹಕರಿಸುತ್ತಿರುವುದು ಬಯಲಿಗೆ ಬಂದಿತ್ತು. ಯಾವುದೇ ಪ್ರಾಥಮಿಕ ದಾಖಲೆಗಳಿಲ್ಲದೇ ಬೇನಾಮಿ ಹೆಸರಿನಲ್ಲಿ ಖಾತೆ ತೆರೆಯಲು ಮತ್ತು ದೊಡ್ಡ ಮೊತ್ತದ ಹಣವನ್ನು ಈ ಖಾತೆಗಳ ಮೂಲಕ ವರ್ಗಾಯಿಸಲು ಬ್ಯಾಂಕ್‌ಗಳು ಸಹಕರಿಸುತ್ತಿದ್ದವು. ತಮ್ಮದೇ ಬ್ಯಾಂಕಿನ ವಿಮೆ ಮುಂತಾದ ಹೂಡಿಕೆಯ ಯೋಜನೆಗಳ ಮೂಲಕವೂ ಕಪ್ಪು ಹಣ ಬಿಳಿಯಾಗಿಸಲು ಕೈ ಜೋಡಿಸಿದ್ದವು. ಇಂತಹ ವಹಿವಾಟು ಪರ್ಯಾಯ ಅರ್ಥ ವ್ಯವಸ್ಥೆ ಹುಟ್ಟುಹಾಕಲೂ ನೆರವಾಗುವ ಸಾಧ್ಯತೆಗಳಿದ್ದವು. ವಹಿವಾಟು ಮತ್ತು ಲಾಭ ಹೆಚ್ಚಳ ದಾಖಲಿಸುವ ಏಕೈಕ ಉದ್ದೇಶದಿಂದ ನಿಯಮಗಳನ್ನೆಲ್ಲ ಗಾಳಿಗೆ ತೂರಿರುವುದೂ ಸ್ಪಷ್ಟವಾಗುತ್ತದೆ. ಖಾಸಗಿ ಬ್ಯಾಂಕ್‌ಗಳ ತೀವ್ರ ಸ್ವರೂಪದ ಅನಾರೋಗ್ಯಕರ ಸ್ಪರ್ಧೆ ಎದುರಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಿರಿವಂತ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆ ಹೆಸರಿನಲ್ಲಿ ನಿಯಮಾವಳಿ ಸಡಿಲುಗೊಳಿಸಿದ್ದವು. ತುಂಬ ಹಳೆಯದಾದ ನಿಯಂತ್ರಣ ಕ್ರಮಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನೂ ತರುವ ಜರೂರು ಕೂಡ ಇದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಆರ್‌ಬಿಐ ಇನ್ನಷ್ಟು ಕಠಿಣ ಕ್ರಮ ಮತ್ತು ನಿಗಾ ವ್ಯವಸ್ಥೆ ಜಾರಿಗೆ ತರಲು ಮುಂದಾದರೆ ಮಾತ್ರ ಬ್ಯಾಂಕ್‌ಗಳು ಸರಿದಾರಿಗೆ ಬಂದಾವು. ಕೇಂದ್ರೀಯ ಬ್ಯಾಂಕ್‌ನಿಂದ ದಂಡನೆಗೆ ಗುರಿಯಾದ ಬ್ಯಾಂಕ್ ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಳ್ಳಲೂ ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.