ಅಸಾಧಾರಣ ಧೀಮಂತರು ವಿಶ್ವವೇದಿಕೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಾಲ್ವರು ಹೆಣ್ಣುಮಕ್ಕಳ ಮಾತು ಮತ್ತು ಬದುಕು ವಿಶ್ವದ ಜನರಿಗೆ ಸ್ಫೂರ್ತಿದಾಯಕವಾಗಬೇಕು. ಈ ನಾಲ್ವರಲ್ಲಿ ಒಬ್ಬಾಕೆ ಪಾಕಿಸ್ತಾನದ ಪ್ರಜೆ; ಇನ್ನು ಮೂವರು ಭಾರತೀಯರು. ಪಾಕಿಸ್ತಾನದ ಹಿಂಸಾಚಾರ ಪೀಡಿತ ಸ್ವಾತ್ ಪ್ರಾಂತ್ಯದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ತಾಲಿಬಾನ್ ನಿಷೇಧಿಸಿದಾಗ ಅದನ್ನು ವಿರೋಧಿಸುವ ಧೀಮಂತಿಕೆ ತೋರಿಸಿದವಳು ಮಲಾಲಾ ಯೂಸುಫ್‌ಝೈ. ಇದಕ್ಕಾಗಿ ತಾಲಿಬಾನ್ ಉಗ್ರರು ಆಕೆಯ ತಲೆಗೆ ಗುಂಡು ಹಾರಿಸಿದಾಗ ತೀವ್ರ ಗಾಯಗೊಂಡರೂ ಮೃತ್ಯುವನ್ನು ಗೆದ್ದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿ ಇಡೀ ಜಗತ್ತು ತನ್ನ ಮಾತನ್ನು ಆಲಿಸುವಂತೆ ಮಾಡಿದವಳು. ಕರ್ನಾಟಕದ ಅಂಧ ಯುವತಿ ಅಶ್ವಿನಿ ಅಂಗಡಿ ಮತ್ತು ಉತ್ತರ ಪ್ರದೇಶದ ಅತ್ಯಂತ ಹಿಂದುಳಿದ ಪ್ರದೇಶದ ರಜಿಯಾ ಸುಲ್ತಾನ್ ಅವರ ಶೈಕ್ಷಣಿಕ ಸಾಧನೆಗೆ ವಿಶ್ವಸಂಸ್ಥೆ `ಯುವ ಸಾಹಸಿ ಪ್ರಶಸ್ತಿ' ನೀಡಿ ಗೌರವಿಸಿದೆ. ಶಿಕ್ಷಣದ ಶಕ್ತಿ ಮತ್ತು ವೈಯಕ್ತಿಕ ದೃಢ ತೀರ್ಮಾನದಿಂದ ತಮ್ಮ ಗುರಿಯಲ್ಲಿ ಅವರು ಯಶಸ್ಸು ಸಾಧಿಸಿರುವುದಕ್ಕೆ ಈ ಗೌರವ ಸಿಕ್ಕಿದೆ. ಸೀಳುತುಟಿಯ ಕಾರಣ ಶಾಲೆಯಿಂದ ದೂರ ಉಳಿದು ನಂತರ ಅದನ್ನು ಸರಿಪಡಿಸಿಕೊಳ್ಳುವ ಶಸ್ತ್ರಕ್ರಿಯೆಗೆ ಒಳಗಾದ ಪಿಂಕಿ ಸೊಂಕಾರ್ ವಿಂಬಲ್ಡನ್ ಪುರುಷರ ಫೈನಲ್ ಪಂದ್ಯಾವಳಿಯಲ್ಲಿ ನಾಣ್ಯ ಚಿಮ್ಮಿಸಿದ ಭಾರತೀಯ ಬಾಲಕಿ. ಈ ಎಲ್ಲ ಹೆಣ್ಣು ಮಕ್ಕಳು ವಿಭಿನ್ನ ಸವಾಲುಗಳನ್ನು ಬದುಕಿನಲ್ಲಿ ಎದುರಿಸಿದ ಧೀಮಂತರು. ರಜಿಯಾ ಸುಲ್ತಾನ್ ಹಿಂದೊಮ್ಮೆ ಬಾಲಕಾರ್ಮಿಕರಾಗಿದ್ದವರು. ಅನಂತರ ಶಿಕ್ಷಣ ಪಡೆದು ತಮ್ಮ ಬದುಕನ್ನು ರೂಪಿಸಿಕೊಂಡವರು. ಈಗ ಯುವ ನಾಯಕಿ. ಹಲವಾರು ಬಾಲಕಾರ್ಮಿಕರ ಬದುಕಿನಲ್ಲಿ ಬದಲಾವಣೆ ತಂದ ಕಾರಣ ಆ ಮಕ್ಕಳು ಶಾಲೆಯ ಭಾಗ್ಯ ಕಾಣುವಂತಾಗಿದೆ. ಮಲಾಲಾ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣ ಶಿಕ್ಷಣದ ಮಹತ್ವ ಸಾರಿದೆ. `ಒಂದು ಮಗು, ಒಬ್ಬ ಶಿಕ್ಷಕ, ಒಂದು ಪೆನ್ನು ಮತ್ತು ಒಂದು ಪುಸ್ತಕ ವಿಶ್ವವನ್ನೇ ಬದಲಾಯಿಸಬಲ್ಲದು' ಎಂಬ ಮಾತು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕನ್ನು ಸಮರ್ಥವಾಗಿ ಪ್ರತಿಪಾದಿಸಿದೆ. ಸರ್ಕಾರ ಮತ್ತು ಸಮಾಜ ಈ ಸವಾಲನ್ನು ಎದುರಿಸಬೇಕಾದುದನ್ನು ಈ ಹೆಣ್ಣುಮಕ್ಕಳು ತೋರಿಸಿಕೊಟ್ಟಿದ್ದಾರೆ. ಹೆಣ್ಣು ಮಕ್ಕಳು ಸಮಾಜದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳಲು ಗಂಡುಮಕ್ಕಳಿಗಿಂತ ಹೆಚ್ಚಿನ ಹೋರಾಟವನ್ನೇ ಹೂಡಬೇಕಾಗುತ್ತದೆ. ಅವರ ಬದುಕಿನ ಕಥೆಗಳು ಕೋಟ್ಯಂತರ ಮಂದಿಯ ಬದುಕಿನಲ್ಲಿ ವಿಶ್ವಾಸ ಮೂಡಿಸಲು ನೆರವಾಗುತ್ತವೆ. ಈ ಹೆಣ್ಣುಮಕ್ಕಳ ಹೋರಾಟ ಅಸಂಖ್ಯ ಮಂದಿಗೆ ನೀಡುವಂತಹ ಸ್ಫೂರ್ತಿ, ಸಕಾರಾತ್ಮಕ ಸಂದೇಶ ಮುಖ್ಯವಾದದ್ದು. ದಮನ, ಭೇದಭಾವ, ಮತ್ತು ನಿರಾಕರಣೆಯಂತಹ ಸಾಮಾಜಿಕ ವಾಸ್ತವಗಳನ್ನು ಎದುರಿಸಿ ಈ ನಾಲ್ಕು ಮಕ್ಕಳು ತಮ್ಮ ಅಸಾಧಾರಣ ಬದುಕಿನ ಮೂಲಕ ಸಾಧಿಸಿರುವ ಯಶಸ್ಸು ಎಲ್ಲರಲ್ಲೂ ಸ್ಫೂರ್ತಿ ತುಂಬುವಂತಹದ್ದು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.