ದುಬಾರಿ ಈರುಳ್ಳಿ ದಿನನಿತ್ಯದ ಅಡುಗೆ, ತಿಂಡಿ ತಯಾರಿಕೆಯಲ್ಲಿ ಅಗತ್ಯವಾಗಿ ಬಳಕೆಯಾಗುವ ಈರುಳ್ಳಿ ಬೆಲೆ ಪ್ರತಿ ಕೆಜಿಗೆ ರೂ 80ರ ಆಸುಪಾಸಿಗೆ ತಲುಪಿ ಖರೀದಿ ಸಂದರ್ಭದಲ್ಲಿಯೂ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕೆ.ಜಿಗೆ ರೂ 20ರಿಂದ ರೂ 25ರಷ್ಟಿದ್ದ ಬೆಲೆ ಈಗ ರೂ 70ರಿಂದ ರೂ 80ರವರೆಗೆ ಏರಿಕೆಯಾಗಿರುವುದಕ್ಕೆ ಪೂರೈಕೆ ಪ್ರಮಾಣ ಕಡಿಮೆಯಾಗಿರುವುದೇ ಮುಖ್ಯ ಕಾರಣ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಗ್ರಾಹಕರಿಗೆ ಇದೊಂದು ಹೊಸ ಹೊರೆಯಾಗಿ ಪರಿಣಮಿಸಿದೆ. ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಪೂರೈಕೆ ಪ್ರಮಾಣ ತಗ್ಗಿ ದೇಶದಾದ್ಯಂತ ಈರುಳ್ಳಿ ದರ ಈ ಪರಿ ದುಬಾರಿಯಾಗಿದೆ. ಈರುಳ್ಳಿಯು ಖರೀದಿದಾರರ ಜೇಬಿಗೆ, ಕುಟುಂಬದ ತಿಂಗಳ ಖರ್ಚಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿರುವುದಂತೂ ನಿಜ. ಈರುಳ್ಳಿ ಉತ್ಪಾದನೆಯಲ್ಲಿ ರಾಜ್ಯವು, ಮಹಾರಾಷ್ಟ್ರ ನಂತರದ ಎರಡನೇ ಸ್ಥಾನದಲ್ಲಿದ್ದರೂ ಪೇಟೆಯಲ್ಲಿ ಅಭಾವ ಉಂಟಾಗಿರುವುದಕ್ಕೆ ಪೂರೈಕೆಯಲ್ಲಿನ ಕೊರತೆ ಜತೆಗೆ ಬೆಳೆಗಾರರಿಗೆ ಸೂಕ್ತ ದಾಸ್ತಾನು ಸೌಲಭ್ಯ ಇಲ್ಲದಿರುವುದು ಮತ್ತು ಮಹಾರಾಷ್ಟ್ರದಿಂದ ಬರುವ ಉತ್ಪನ್ನವನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವುದೇ ಕಾರಣ. ಏಕಾಏಕಿ ದರ ಏರಿಕೆಗೆ ಮಹಾರಾಷ್ಟ್ರದ ಈರುಳ್ಳಿ ಲಾಬಿಯೇ ಪ್ರಮುಖ ಕಾರಣ. ನಾಲ್ಕು ವರ್ಷಗಳಿಂದ ಇದು ಪುನರಾವರ್ತನೆಯಾಗುತ್ತಿದೆ. ಅದರ ಬಿಸಿಯನ್ನು ಇಡೀ ದೇಶದ ಜನತೆ ಅನುಭವಿಸಬೇಕಾಗಿದೆ ಎಂಬ ದೂರಿನಲ್ಲಿ ಸತ್ಯಾಂಶವೂ ಇದೆ. ಮಹಾರಾಷ್ಟ್ರದಲ್ಲಿ ಈರುಳ್ಳಿ ಆವಕ ಹೆಚ್ಚಿಗೆ ಇರುವಾಗ ಕೃಷಿ ಸಚಿವ ಶರದ್ ಪವಾರ್ ಮೇಲೆ ಒತ್ತಡ ಹೇರುವ ಲಾಬಿ, ರಫ್ತಿಗೆ ಅವಕಾಶ ಪಡೆಯುತ್ತದೆ. ಇದರಿಂದ ದೇಶಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಪ್ರತಿಭಟನೆ, ಟೀಕೆ ಎದುರಾಗುತ್ತಲೇ ರಫ್ತು ನಿಷೇಧಿಸಲಾಗುತ್ತದೆ. ಆ ಹೊತ್ತಿಗೆ ಮಹಾರಾಷ್ಟ್ರದ ಈರುಳ್ಳಿ ಹಂಗಾಮು ಕೂಡ ಮುಗಿದಿರುತ್ತದೆ. ಕರ್ನಾಟಕ, ಆಂಧ್ರಪ್ರದೇಶದ ಮುಂಗಾರು ಹಂಗಾಮಿನ ಈರುಳ್ಳಿ ಮಾರುಕಟ್ಟೆಗೆ ಬರುವುದರಿಂದ ಬೆಲೆ ದಿಢೀರನೆ ಕುಸಿಯುತ್ತದೆ. ಇದರಿಂದ ಈ ರಾಜ್ಯಗಳ ಬೆಳೆಗಾರರಿಗೆ ಅನ್ಯಾಯವಾಗುತ್ತದೆ. ಕೇಂದ್ರ ಸರ್ಕಾರ ಇಂತಹ ವಿದ್ಯಮಾನಕ್ಕೆ ಆಸ್ಪದ ನೀಡದೇ ಎಲ್ಲಾ ರಾಜ್ಯಗಳ ಬೆಳೆಗಾರರ ಹಿತಾಸಕ್ತಿ ಕಾಪಾಡುವ ಕಾರ್ಯತಂತ್ರ ರೂಪಿಸಬೇಕಾಗಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ತಡವಾಗಿ ಎಚ್ಚೆತ್ತಿದೆ. ಪೂರೈಕೆ ಹೆಚ್ಚಿಸಲು ಈರುಳ್ಳಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್ ಕರೆದಿದೆ. ಆದರೆ ಈ ಪ್ರಕ್ರಿಯೆ ವಿಳಂಬವಾಗಲಿದೆ. ಹಾಗಾಗಿ ತುರ್ತಿಗೆ ಪ್ರಯೋಜನಕ್ಕೆ ಬಾರದು. ರೈತರು ಈರುಳ್ಳಿ ದಾಸ್ತಾನು ಸೌಲಭ್ಯವನ್ನು ಸಮರ್ಪಕವಾಗಿ ಬಳಸಲು ಆರಂಭಿಸಿದರೆ ಭವಿಷ್ಯದಲ್ಲಿ ಬೆಲೆ ಏರಿಳಿತವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗಲಿದೆ. ಪೂರೈಕೆ ಅಭಾವದ ನೆಪದಲ್ಲಿ ಮಧ್ಯವರ್ತಿಗಳು, ವರ್ತಕರು ಬೆಳೆಗಾರರನ್ನು ಶೋಷಿಸುವ, ಗ್ರಾಹಕರನ್ನು ಸುಲಿಯುವ ವಂಚನೆಯೂ ನಿಲ್ಲಬೇಕಾಗಿದೆ. ವರ್ತಕರು ಮತ್ತು ದಲ್ಲಾಳಿಗಳ ದುರಾಸೆಗೆ ಕಡಿವಾಣ ಹಾಕಲು ಅಗತ್ಯ ವಸ್ತುಗಳ ಕಾಯ್ದೆ ಬಳಸಬೇಕಾಗಿದೆ. ಶೀಘ್ರವಾಗಿ ಕೊಳೆತು ಹೋಗುವ ಈರುಳ್ಳಿ ಫಸಲು ಸಂಗ್ರಹಿಸಿ ಇಡಲು ಶೈತ್ಯಾಗಾರ, ತ್ವರಿತ ಸಾಗಣೆಗೆ ಅಗತ್ಯ ಮೂಲ ಸೌಕರ್ಯ, ಮಾರುಕಟ್ಟೆ ಬೆಂಬಲ ಮತ್ತಿತರ ಸೌಲಭ್ಯಗಳಿದ್ದರೆ ಮಾತ್ರ ಬೆಳೆಗಾರ ಬದುಕಬಲ್ಲ, ಗ್ರಾಹಕರೂ ನೆಮ್ಮದಿಯ ನಿಟ್ಟುಸಿರು ಬಿಡಬಲ್ಲರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.