ಭಾನುವಾರ, 25-8-1963 ಆರು ಕೇಂದ್ರ ಸಚಿವರು, ಆರು ರಾಜ್ಯಗಳ ಮುಖ್ಯಮಂತ್ರಿಗಳ ರಾಜೀನಾಮೆಗೆ ಒಪ್ಪಿಗೆ ನವದೆಹಲಿ, ಆ. 24 - ಕೇಂದ್ರ ಸಂಪುಟದ ಸಚಿವರಾದ ಸರ‌್ವಶ್ರೀ ಮೊರಾರ‌್ಜಿ ದೇಸಾಯ್, ಜಗ್‌ಜೀವನ್‌ರಾಂ, ಲಾಲ್‌ಬಹದ್ದೂರ್ ಶಾಸ್ತ್ರಿ, ಎಸ್. ಕೆ. ಪಾಟೀಲ್, ಗೋಪಾಲ ರೆಡ್ಡಿ ಮತ್ತು ಡಾ. ಶ್ರೀ ಮಾಲಿ ಇವರುಗಳ ರಾಜೀನಾಮೆಯನ್ನು ಅಂಗೀಕರಿಸಬಹುದೆಂದು ಪ್ರಧಾನ ಮಂತ್ರಿ ನೆಹರೂರವರು ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಮದ್ರಾಸು, ಒರಿಸ್ಸಾ, ಕಾಶ್ಮೀರ, ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ಮುಖ್ಯಮಂತ್ರಿಗಳಾದ ಸರ್ವಶ್ರೀ ಕಾಮರಾಜ್, ಬಿ. ಪಾಟ್ನಾಯಕ್, ಭಕ್ಷಿಗುಲಾಂ ಮಹಮದ್, ಬಿನೋದಾನಂದ್‌ಜ್ಹಾ, ಸಿ. ಬಿ. ಗುಪ್ತ ಮತ್ತು ಬಿ. ಎ. ಮಂಡಲಾಯ್ ಇವರುಗಳ ರಾಜೀನಾಮೆಯನ್ನು ಅಂಗೀಕರಿಸಲು ಪ್ರಧಾನ ಮಂತ್ರಿ ನೆಹರೂರವರು ಶಿಫಾರಸು ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿಯು ಪ್ರಧಾನ ಮಂತ್ರಿ ನೆಹರೂರ ಶಿಫಾರಸನ್ನು ಅಂಗೀಕರಿಸಿತು. ಮೀನುಗಾರಿಕೆ ಕೇಂದ್ರವಾಗಿ ಮಲ್ಪೆ ರೇವಿನ ಅಭಿವೃದ್ಧಿ: ಯುಗೋಸ್ಲಾವಿಯ ನೆರವು ಬೆಂಗಳೂರು, ಆ. 24 - ಉಡುಪಿಯ ಬಳಿಯಿರುವ ಮಲ್ಪೆಯನ್ನು ಮೀನು ಹಿಡಿಯುವ ಬಂದರಾಗಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಈ ಯೋಜನೆಯನ್ನು ಕಾರ್ಯಗತ ಮಾಡಲು ಯುಗೋಸ್ಲಾವಿಯವು ನೆರವು ನೀಡಲಿದೆ. ಯುಗೋಸ್ಲಾವಿಯದ ತಜ್ಞರ ತಂಡ ಒಂದು ಸರ್ವೆ ನಡೆಸಲಿದೆ. ಮಲ್ಪೆಯನ್ನು ಕೇಂದ್ರ ಸರ್ಕಾರವು ಆರಿಸಲು ಅಲ್ಲಿ ಇರುವ ನೈಸರ್ಗಿಕ ಸೌಲಭ್ಯವೂ ಕಾರಣ. ಅಭಿವೃದ್ಧಿ ಯೋಜನೆಗಳಲ್ಲಿ ಪ್ರಾದೇಶಿಕ ಅಸಮತೆ ಹೋಗಲಾಡಿಸಲು ಮನವಿ ಬೆಂಗಳೂರು, ಆ. 24 - ಮೈಸೂರು ರಾಜ್ಯಕ್ಕೆ ರೈಲ್ವೆಮಾರ್ಗ ನಿರ್ಮಾಣ, ಬಂದರು, ಕೈಗಾರಿಕೆಗಳ ಸ್ಥಾಪನೆ ಮೊದಲಾದ ವಿಷಯಗಳಲ್ಲಿ `ಪ್ರಾದೇಶಿಕ ಅಸಮತೆ' ಗೋಚರವಾಗುವುದೆಂದು ಇಂದು ಇಲ್ಲಿ ಸ್ಪಷ್ಟಪಡಿಸಿದ ಶ್ರೀ ಕೋಟಾ ಎಸ್. ರಾಮಯ್ಯ ಶೆಟ್ಟಿ ಅವರು `ಪ್ರತಿಘಟ್ಟದಲ್ಲೂ ನಮಗೆ ಅನಾನುಕೂಲವಾಗಿರುವುದು ದುರಾದೃಷ್ಟಕರ' ಎಂದು ವಿಷಾದಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.