ನ್ಯಾಯದಾನ ತ್ವರಿತಗೊಳ್ಳಲಿ ದೇಶದ ರಾಜಧಾನಿ ನವದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ಇನ್ನೂ ಕೆಟ್ಟ ಕನಸಿನಂತೆ ಕಾಡುತ್ತಿದೆ. ಆ ಕರಾಳ ನೆನಪನ್ನು ಮರೆಯುವ ಮುನ್ನವೇ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅಂತಹದ್ದೇ ಪ್ರಕರಣ ವರದಿಯಾಗಿದೆ. ಇತರ ಮಹಾನಗರಗಳಿಗೆ ಹೋಲಿಸಿದರೆ ಮುಂಬೈ ಮಹಾನಗರಿ ಮಹಿಳೆಯರ ಪಾಲಿಗೆ ಸುರಕ್ಷಿತ ಎನ್ನುವ ಭಾವನೆ ಇತ್ತು. ನಿಯತಕಾಲಿಕೆಯೊಂದರ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಿಂದ ಆ ನಂಬಿಕೆಯೂ ಸುಳ್ಳಾಗಿದೆ. ಇಂತಹ ಹೀನ ಕೃತ್ಯ ಖಂಡಿಸಲು ಪದಗಳೇ ಸಾಲುವುದಿಲ್ಲ. ಅತ್ಯಾಚಾರ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವುದು ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದ ಸಂಗತಿ. ಅತ್ಯಾಚಾರ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಪೊಲೀಸ್ ವ್ಯವಸ್ಥೆಯ ವೈಫಲ್ಯ ಮತ್ತು ದುರ್ಬಲ ಕಾನೂನನ್ನು ದೂಷಿಸಬೇಕಾಗುತ್ತದೆ. ಶಿಕ್ಷೆಯ ಭಯ ಇಲ್ಲದಿರುವುದೇ ಇಂತಹ ಕೃತ್ಯಗಳು ಮರುಕಳಿಸಲು ಒಂದು ಕಾರಣ. ಛಾಯಾಚಿತ್ರ ತೆಗೆಯಲು ನಿರ್ಜನ ಶಕ್ತಿ ಮಿಲ್ ಆವರಣಕ್ಕೆ ತೆರಳಿದ್ದ ಯುವತಿಯನ್ನು ಐವರು ದುರುಳರು ಬೆದರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವುದು ಪೈಶಾಚಿಕ ಕೃತ್ಯವಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಸಾಕ್ಷ್ಯಾಧಾರಗಳನ್ನೆಲ್ಲ ಒಟ್ಟುಗೂಡಿಸಿ ದುಷ್ಕರ್ಮಿಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಂಡರೆ ಅತ್ಯಾಚಾರ ಸಂತ್ರಸ್ತೆಗೆ ಕನಿಷ್ಠ ಸಾಂತ್ವನ ಸಿಕ್ಕೀತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ವಿರುದ್ಧ ನಿರಂತರವಾಗಿ ನಡೆಯುತ್ತಲೇ ಇರುವ ದೌರ್ಜನ್ಯಕ್ಕೆ ವ್ಯವಸ್ಥೆಯಲ್ಲಿನ ದೋಷವೇ ಕಾರಣ. ಅತ್ಯಾಚಾರ ಎಸಗಿದವರಿಗೆ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸುವಲ್ಲಿ ನಮ್ಮ ವ್ಯವಸ್ಥೆ ಸೋತಿದೆ. `ಮಹಿಳೆ ಎಂದರೆ ಭೋಗದ ವಸ್ತು' ಎನ್ನುವ ಮೃಗೀಯ ಮನಸ್ಥಿತಿ ಬದಲಾಗಬೇಕು. ಈ ನಿಟ್ಟಿನಲ್ಲಿ ಸಮಾಜವನ್ನು ಇನ್ನಷ್ಟು ಸಂವೇದನಾಶೀಲಗೊಳಿಸಬೇಕು. ದೇಶದ ಅಂತಃಸಾಕ್ಷಿಯನ್ನೇ ಕಲಕುವ ಹೀನ ಕೃತ್ಯಗಳು ನಡೆದಾಗ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು ಎನ್ನುವ ಕೂಗು ಗಟ್ಟಿಯಾಗಿ ಕೇಳಿಬರುತ್ತದೆ. ದೆಹಲಿ ಘಟನೆ ನಂತರ ರಚಿಸಲಾದ ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ವರ್ಮಾ ನೇತೃತ್ವದ ತ್ರಿಸದಸ್ಯ ಸಮಿತಿಯು, `ಅತ್ಯಾಚಾರಿಗಳಿಗೆ ಕನಿಷ್ಠ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು. ಮರಣ ದಂಡನೆ ಬೇಡ' ಎಂದು ಶಿಫಾರಸು ಮಾಡಿರುವುದು ಚರ್ಚಾಸ್ಪದ. ಅತ್ಯಾಚಾರ ಪ್ರಕರಣಗಳ ತನಿಖೆಗೆ ತ್ವರಿತಗತಿಯ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ಆಗದಿದ್ದರೆ ಅದಕ್ಕೆ ನ್ಯಾಯಾಂಗವೊಂದನ್ನೇ ದೂಷಿಸಲಾಗದು. ಅಪರಾಧಿಗಳ ವಿರುದ್ಧ ಸೂಕ್ತ ಸಾಕ್ಷ್ಯ ಸಂಗ್ರಹಿಸಿ ಅದನ್ನು ನ್ಯಾಯಾಲಯದ ಮುಂದಿಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಇಂತಹ ಪ್ರಕರಣಗಳನ್ನು ಸೂಕ್ತವಾಗಿ ನಿಭಾಯಿಸಲು ಪೊಲೀಸ್ ವ್ಯವಸ್ಥೆಯನ್ನು ಅಣಿಗೊಳಿಸಬೇಕಾದ ಗುರುತರ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.