ಕೊಳೆ ತೊಳೆವ ಇಚ್ಛೆ ಇಲ್ಲವೇ? ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಯಲು ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ಮಾಡಿದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಂತಿದೆ. ತಿಪ್ಪೆ ಸಾರಿಸುವ ರೀತಿಯಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವುದರಿಂದ ಪ್ರಯೋಜನ ಅಷ್ಟಕಷ್ಟೇ. ಕೆಪಿಎಸ್‌ಸಿ ಸದಸ್ಯರ ನೇಮಕಾತಿಗೆ ಆಯ್ಕೆ ಸಮಿತಿ ರಚಿಸಬೇಕು ಎನ್ನುವ ಶಿಫಾರಸನ್ನು ತಿರಸ್ಕರಿಸುವ ಮೂಲಕ ರಾಜಕೀಯ ನೇಮಕದ ಅವಕಾಶವನ್ನು ಸರ್ಕಾರ ತನ್ನಲ್ಲಿಯೇ ಇಟ್ಟುಕೊಂಡಿದೆ. ಆಯೋಗದ ಕೊಳಕನ್ನು ಸಂಪೂರ್ಣ ಸ್ವಚ್ಛ ಮಾಡುವ ಬಯಕೆ ಸರ್ಕಾರಕ್ಕೆ ಇಲ್ಲ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ. ಹೋಟಾ ಸಮಿತಿಯನ್ನು ರಚಿಸಿದ್ದು ಯಾವಾಗ ಮತ್ತು ಅದಕ್ಕೆ ಯಾವ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ತಿಳಿಸಲಾಗಿತ್ತು ಎನ್ನುವುದು ನಿಗೂಢವಾಗಿಯೇ ಇದೆ. 45 ದಿನಗಳಲ್ಲಿ ವರದಿ ನೀಡಬೇಕಿದ್ದ ಸಮಿತಿ 21 ದಿನದಲ್ಲಿಯೇ ವರದಿ ನೀಡಿದೆ. ಸಮಿತಿಯ ಶಿಫಾರಸುಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕಿತ್ತು. ಈ ವಿಷಯಕ್ಕೆ ಅಷ್ಟೊಂದು ಮಹತ್ವ ಇದೆ. ಅದಕ್ಕೆ ಅವಕಾಶ ಒದಗಿಸದೆ ರಾಜ್ಯ ಸಚಿವ ಸಂಪುಟ ದಿಢೀರನೆ ತೀರ್ಮಾನ ತೆಗೆದುಕೊಂಡಿರುವುದರ ಹಿಂದಿನ ಉದ್ದೇಶ ಅನುಮಾನಾಸ್ಪದ. ಕೇಂದ್ರ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಸೆಲ್ವಿದಾಸ್ ಅವರು `ನೀರಿನ ಟ್ಯಾಂಕ್ ಶುದ್ಧವಾಗದೆ ನಲ್ಲಿಯಲ್ಲಿ ಶುದ್ಧ ನೀರು ಬರುವುದಿಲ್ಲ' ಎಂದು ಹೇಳಿದ್ದರು. ಸರ್ಕಾರ ಈಗ ಟ್ಯಾಂಕನ್ನು ಹಾಗೆ ಬಿಟ್ಟು ನಲ್ಲಿಯನ್ನು ಶುದ್ಧ ಮಾಡುವ ಕೆಲಸಕ್ಕೆ ಮುಂದಾಗಿದೆ. ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಹೇಗೆ ಮತ್ತು ಯಾರಿಂದ ನಡೆಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾದರೂ ಈ ಅನಿಷ್ಟ ವ್ಯವಸ್ಥೆಯನ್ನು ಬದಲಾಯಿಸುತ್ತಾರೆ ಎಂಬ ನಿರೀಕ್ಷೆ ಇದೀಗ ಹುಸಿಯಾಗಿದೆ. ಸದಸ್ಯರ ನೇಮಕಾತಿಯಲ್ಲಿಯೇ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆಯುತ್ತಿರಬೇಕಾದರೆ, ಅಂತಹವರಿಂದ ಕರ್ನಾಟಕ ಆಡಳಿತ ಸೇವೆಗೆ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸುವುದಾದರೂ ಹೇಗೆ? ಕೆಪಿಎಸ್‌ಸಿ ನೇಮಕಾತಿಯಲ್ಲಿ ಹಲವು ದಶಕಗಳಿಂದಲೂ ಅಕ್ರಮ ನಡೆದಿದೆ. ಆದರೆ, ಅಕ್ರಮಕ್ಕೆ ಕಾರಣರಾದ ಪ್ರಭಾವಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿದ ನಿದರ್ಶನಗಳು ಇಲ್ಲ. ಮೇಲಿನವರನ್ನು ಮೇಯಲು ಬಿಟ್ಟು, ಕೆಳಹಂತದ ಅಧಿಕಾರಿಗಳಿಗೆ ಕಡಿವಾಣ ಹಾಕುವುದರಿಂದ ಪ್ರಯೋಜನ ಆಗಲಾರದು. ಈ ಬಗೆಯ ತೇಪೆ ಹಚ್ಚುವ ಪ್ರಯತ್ನಗಳನ್ನು ಜವಾಬ್ದಾರಿಯಿಂದ ಜಾರಿಕೊಳ್ಳುವ ಹುನ್ನಾರಗಳೆಂದೇ ಭಾವಿಸಬೇಕಾಗುತ್ತದೆ. 1998, 1999, 2004ರ ಸಾಲಿನ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ತನಿಖಾ ವರದಿಯೇ ಹೇಳಿದೆ. ಅಕ್ರಮವಾಗಿ ನೇಮಕಗೊಂಡವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಹೈಕೋರ್ಟ್ ಪದೇ ಪದೇ ಕೇಳುತ್ತಿದೆ. ಅದಕ್ಕೆ ಉತ್ತರ ನೀಡುವುದರಿಂದ ನುಣುಚಿಕೊಳ್ಳುತ್ತಿರುವ ಸರ್ಕಾರ, ಈಗ ಹೋಟಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡು ಸುಧಾರಣೆ ತರುತ್ತೇನೆ ಎಂದು ಹೇಳುತ್ತಿರುವುದು ಕಣ್ಣೊರೆಸುವ ತಂತ್ರವಷ್ಟೇ. ಕೆಪಿಎಸ್‌ಸಿಯಲ್ಲಿರುವ ಕೆಲವು ಸಿಬ್ಬಂದಿಯನ್ನು ವರ್ಗ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕೊಳೆತು ನಾರುತ್ತಿರುವ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಬೇಕಿದೆ. ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನಡೆಸುವ ಬಯಕೆ ರಾಜ್ಯ ಸರ್ಕಾರಕ್ಕೆ ಇದ್ದರೆ, ಈ ವಿಷಯದಲ್ಲಿ ಅಂತಹ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.