ದಾಸ್ತಾನು ಸೌಕರ್ಯ ಹೆಚ್ಚಿಸಿ ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು 44 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಹಾರ ಸದ್ಬಳಕೆಯಾಗದೆ ಹಾಳಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿದ ಅಂಕಿಸಂಖ್ಯೆ ಪ್ರಕಾರ, ಕೊಳೆತು ತಿಪ್ಪೆ ಸೇರುವ ತರಕಾರಿ, ಹಣ್ಣುಗಳ ಮೌಲ್ಯ ವರ್ಷಕ್ಕೆ 13 ಸಾವಿರ ಕೋಟಿ ರೂಪಾಯಿ. ಇನ್ನುಳಿದವು ಅಕ್ಕಿ, ಗೋಧಿಯಂಥ ಧಾನ್ಯಗಳು, ಬೇಳೆಕಾಳುಗಳು, ಮಾಂಸ ಮತ್ತಿತರ ಪದಾರ್ಥಗಳು. ಇಡೀ ದೇಶವೇ ತಲೆತಗ್ಗಿಸಬೇಕಾದ ಸಂಗತಿ ಇದು. ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಹಂಬಲಿಸುತ್ತಿರುವ ಕೋಟ್ಯಂತರ ಜನ ದೇಶದಲ್ಲಿದ್ದಾರೆ. ಹಸಿವು, ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇನ್ನೊಂದೆಡೆ, ಹಸಿದವರ ಹೊಟ್ಟೆಗೆ ಸೇರಬೇಕಾದ ಆಹಾರ ಹಾಳಾಗುತ್ತಿದೆ. ಸೂಕ್ತವಾದ ಶೈತ್ಯಾಗಾರ, ದಾಸ್ತಾನು ಸೌಲಭ್ಯ ಇಲ್ಲದಿರುವುದೇ ಆಹಾರ ಪದಾರ್ಥಗಳು ಹಾಳಾಗಲು ಕಾರಣ ಎನ್ನುವುದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ವಿವರಣೆ. ಕೊಯ್ಲು ನಂತರ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸುವ ವ್ಯವಸ್ಥೆ, ಶೈತ್ಯಾಗಾರ ಸೌಕರ್ಯಗಳನ್ನು ಕಲ್ಪಿಸಿದರೆ ಈ ರೀತಿ ಆಹಾರ ಕೊಳೆಯುವುದನ್ನು ತಪ್ಪಿಸಬಹುದು ಎಂದು ಸಚಿವರು ಹೇಳಿದ್ದಾರೆ. ಅವರ ಮಾತು ಕೇಳಿದರೆ ನಗಬೇಕೋ, ಅಳಬೇಕೋ ತಿಳಿಯುವುದಿಲ್ಲ. ಏಕೆಂದರೆ ಆಹಾರ ಪದಾರ್ಥಗಳ ವೈಜ್ಞಾನಿಕ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಹೊಣೆ. ಇದು ರೈತರ ಬೇಡಿಕೆಯೂ ಹೌದು. ಇಂಥ ಏರ್ಪಾಟು ಮಾಡದಂತೆ ಸರ್ಕಾರಕ್ಕೆ ಯಾರು ಅಡ್ಡಿಪಡಿಸಿದ್ದಾರೆ? ಸಮರ್ಪಕ ಕ್ರಮ ಕೈಗೊಳ್ಳಲು ತೊಂದರೆ ಏನು? ದಾಸ್ತಾನು ಸೌಲಭ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯಗಳೂ ಪೂರಕವಾಗಿ ಸ್ಪಂದಿಸುತ್ತಿವೆ ಎಂಬ ಅವರ ಮಾತು ನಿಜವೇ ಆಗಿದ್ದರೆ ವರ್ಷಕ್ಕೆ 44 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಆಹಾರ ಧಾನ್ಯಗಳು ಏಕೆ ಹಾಳಾಗುತ್ತಿದ್ದವು? ಅಂದರೆ ಇದು ಮಾನವ ಎಸಗಿರುವ ಲೋಪ. ಅಕ್ಷಮ್ಯ ಅಪರಾಧ ಎಂದು ಕರೆದರೂ ತಪ್ಪಲ್ಲ. ದೇಶದಲ್ಲಿ ಉತ್ಪಾದನೆಯಾಗುವ ಹಣ್ಣು ಮತ್ತು ತರಕಾರಿಗಳಲ್ಲಿ ಶೇ 30ರಷ್ಟು ಭಾಗ, ಶೈತ್ಯಾಗಾರದ ಕೊರತೆಯಿಂದ ಕೊಳೆತು ಹಾಳಾಗುತ್ತಿವೆ. ಗೋದಾಮುಗಳಲ್ಲಿ ಸರಿಯಾದ ಸಂಗ್ರಹ ವ್ಯವಸ್ಥೆ ಇಲ್ಲದ ಕಾರಣ ಲಕ್ಷಾಂತರ ಟನ್ ಆಹಾರ ಧಾನ್ಯಗಳು ಕೆಟ್ಟು ಹೋಗುತ್ತಿವೆ. ಮದುವೆ ಮತ್ತಿತರ ಸಮಾರಂಭಗಳು ಹಾಗೂ ಹೋಟೆಲ್‌ಗಳಲ್ಲಿ ವ್ಯರ್ಥವಾಗುವ ಆಹಾರದ ಪ್ರಮಾಣ ಶೇ 15 ರಿಂದ 20ರಷ್ಟು ಎಂದು ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಈ ಹಿಂದೆ ಹೇಳಿದ್ದರು. ಯೋಜನಾ ಆಯೋಗ 2012ರಲ್ಲಿ ರಚಿಸಿದ್ದ ಸೌಮಿತ್ರ ಚೌಧರಿ ಸಮಿತಿಯ ಅಧ್ಯಯನದ ಪ್ರಕಾರ ನಮಗೆ 613 ಲಕ್ಷ ಟನ್ ಸಾಮರ್ಥ್ಯದ ಶೈತ್ಯಾಗಾರಗಳ ಅಗತ್ಯವಿದೆ. ಆದರೆ ನಮ್ಮಲ್ಲಿ ಒಟ್ಟು 290 ಲಕ್ಷ ಟನ್ ಆಹಾರ ಪದಾರ್ಥ ಸಂಗ್ರಹಿಸಲು ಮಾತ್ರ ವ್ಯವಸ್ಥೆ ಇದೆ. ಆದ್ದರಿಂದ ಇನ್ನಾದರೂ ಸರ್ಕಾರ ಗೋದಾಮುಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಅದನ್ನು ಅತ್ಯವಶ್ಯಕ ಮೂಲಸೌಕರ್ಯ ಎಂದು ಪರಿಗಣಿಸಿ ಖಾಸಗಿ ವಲಯವನ್ನೂ ಉತ್ತೇಜಿಸಬೇಕು. ರೈತರು ಮತ್ತು ಗ್ರಾಹಕರನ್ನು ಉದ್ಧಾರ ಮಾಡುವ ಬೊಗಳೆ ಮಾತು ಬಿಟ್ಟು ಬೆಳೆದ ಪ್ರತಿಯೊಂದು ಕಾಳಿನ ಸಂರಕ್ಷಣೆಗೆ ಬದ್ಧತೆ ಪ್ರದರ್ಶಿಸಬೇಕು. ಇಲ್ಲವಾದರೆ ಇವರ ಶಾಪಕ್ಕೆ ಗುರಿಯಾಗಬೇಕಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.