ಇನ್ನಾದರೂ ಕಣ್ಣು ತೆರೆಯಲಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರದ ವಾರ್ಷಿಕ ಸಿನಿಮಾ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆ ವಿವಾದಕ್ಕೆ ಕಾರಣವಾಗುತ್ತಿದೆ. ಪ್ರಶಸ್ತಿ ಪ್ರಕಟವಾದಾಗ ಕೆಲವರಿಗೆ ನಿರಾಸೆ ಆಗುವುದು ಸಹಜ. ಅಂಥವರು ಆಯ್ಕೆ ಪ್ರಕ್ರಿಯೆಯನ್ನೇ ಟೀಕಿಸುವುದೂ ಸಹಜವೇ. ಆಯ್ಕೆ ಸಮಿತಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂಬುದು ಎಲ್ಲರ ನಿರೀಕ್ಷೆ. ದುರದೃಷ್ಟದ ಸಂಗತಿ ಎಂದರೆ 2010-11ರ ಸಾಲಿನ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟಿನ ಮೆಟ್ಟಿಲೇರಿದ್ದು. ವಿಚಾರಣೆ ಸಂದರ್ಭದಲ್ಲಿ ಆಯ್ಕೆ ಸಮಿತಿಯ ನಿರ್ಧಾರ ಹಾಗೂ ಸರ್ಕಾರದ ಬೇಜವಾಬ್ದಾರಿತವನ್ನು ಕೋರ್ಟ್ ಕಟುವಾಗಿ ಟೀಕಿಸಿದೆ. ಆಯ್ಕೆ ಪ್ರಕ್ರಿಯೆಯ ತನಿಖೆಯನ್ನೇ ಸಿಬಿಐಗೆ ವಹಿಸಬೇಕಾದೀತು ಎಂದೂ ಎಚ್ಚರಿಸಿದೆ. ಇದೀಗ ಆಯ್ಕೆ ಪಟ್ಟಿಯನ್ನು ಹಿಂದಕ್ಕೆ ಪಡೆಯುವುದಾಗಿ ಸರ್ಕಾರ, ನ್ಯಾಯಾಲಯಕ್ಕೆ ತಿಳಿಸಿದೆ. ಹೊಸ ಆಯ್ಕೆ ಸಮಿತಿ ರಚಿಸುವಂತೆ ಕೋರ್ಟ್ ಆದೇಶಿಸಿದೆ. ಈ ವೇಳೆ, ಕನ್ನಡ ಸಿನಿಮಾಗಳ ಗುಣಮಟ್ಟ ಕುಸಿದಿದೆ ಎಂಬ ಆತಂಕವನ್ನು ಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ನ್ಯಾಯಾಲಯದ ಆಕ್ಷೇಪಗಳನ್ನು ಸರ್ಕಾರ ಮತ್ತು ಸಿನಿಮಾರಂಗ ಗಂಭೀರವಾಗಿ ಪರಿಗಣಿಸಬೇಕು. ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸುವ ಜವಾಬ್ದಾರಿ ಚಿತ್ರೋದ್ಯಮದ ಮೇಲಿದೆ. ಅದಕ್ಕೆ ಪೂರಕವಾಗಿ ಉತ್ತಮ ಸಿನಿಮಾಗಳಿಗೆ ಪ್ರಶಸ್ತಿ, ಸಬ್ಸಿಡಿ ಸಿಗುವಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ್ದು. ಪ್ರಶಸ್ತಿ ಮತ್ತು ಸಹಾಯಧನಕ್ಕೆ ಚಿತ್ರಗಳ ಆಯ್ಕೆಗಾಗಿ ರೂಪಿಸಿದ ನಿಯಮಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಆತಂಕದ ಸಂಗತಿ ಎಂದರೆ ಸರ್ಕಾರ ಆಯ್ಕೆ ಸಮಿತಿ ರಚಿಸುವಾಗಲೇ ಎಡವುತ್ತದೆ. ರಾಜಕಾರಣಿಗಳು ಸಮಿತಿಯ ಮೇಲೆ ಪ್ರಭಾವ ಬೀರುತ್ತಾರೆ. ಲಂಚ, ಸ್ವಜನ ಪಕ್ಷಪಾತ ಇತ್ಯಾದಿಗಳೂ ಆಯ್ಕೆಗೆ ಮಾನದಂಡಗಳಾಗುತ್ತಿವೆ. ಇಂತಹ ಕೆಟ್ಟ ಉಪಕ್ರಮಗಳಿಂದಾಗಿ, ಇದ್ದುದರಲ್ಲಿ ಉತ್ತಮವಾದ ಚಿತ್ರಗಳಿಗೆ ಸಹಾಯಧನ ಮತ್ತು ಪ್ರಶಸ್ತಿ ಎರಡೂ ತಪ್ಪಿಹೋಗುತ್ತವೆ. ಈ ಬೆಳವಣಿಗೆ ಚಿತ್ರೋದ್ಯಮಕ್ಕೆ ಪೂರಕ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಿನಿಮಾಗಳ ಗುಣಮಟ್ಟ ಕುಸಿಯುತ್ತಲೇ ಇದೆ. ಸಮಾಜಕ್ಕೆ ಸಂದೇಶ ನೀಡದ, ಅಗ್ಗದ ಮನರಂಜನೆಯ ಚಿತ್ರಗಳನ್ನು ಪ್ರಶಸ್ತಿ, ಸಹಾಯಧನಕ್ಕೆ ಪರಿಗಣಿಸುವುದರಿಂದ ಗುಣಮಟ್ಟ ಕುಸಿಯುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಅದೇನೇ ಇರಲಿ, ಹೈಕೋರ್ಟಿನ ಅಭಿಪ್ರಾಯ ಕುರಿತು ಚಿತ್ರೋದ್ಯಮ ಚಿಂತನೆ ನಡೆಸಬೇಕು. ವರ್ಷಕ್ಕೆ ನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ನಿರ್ಮಾಣವಾಗುತ್ತವೆ. ಅವುಗಳ ಪೈಕಿ ಆರ್ಥಿಕವಾಗಿ ಲಾಭ ತಂದುಕೊಡುವ ಸಿನಿಮಾಗಳ ಸಂಖ್ಯೆ ಹತ್ತಕ್ಕಿಂತ ಹೆಚ್ಚಿಲ್ಲ. ಪರಭಾಷೆಗಳಲ್ಲಿ ಯಶಸ್ವಿಯಾದ ಸಿನಿಮಾಗಳನ್ನು ಕನ್ನಡಕ್ಕೆ ರಿಮೇಕ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ರಿಮೇಕ್ ಚಿತ್ರಗಳಿಗೆ ಉತ್ತೇಜನ ನೀಡುವ ಸರ್ಕಾರದ ಧೋರಣೆ ಬದಲಾಗಬೇಕು. ಭಾಷೆ, ಸಂಸ್ಕೃತಿ ಮತ್ತು ಸಿನಿಮಾ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೆ ಇಂತಿಷ್ಟು ಹಣ ಖರ್ಚು ಮಾಡುವುದಷ್ಟೇ ಸರ್ಕಾರದ ಕೆಲಸ ಅಲ್ಲ. ಪ್ರಶಸ್ತಿ, ಸಹಾಯಧನ ಇತ್ಯಾದಿಗಳು ಕಳಪೆ ಚಿತ್ರಗಳಿಗೆ ಸಂದಾಯವಾಗದಂತೆ ನೋಡಿಕೊಳ್ಳುವುದೂ ಸರ್ಕಾರದ ಹೊಣೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.