ಭರವಸೆ ಮೂಡಿಸಿದ ನೇಮಕ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಹೊಸ ಗವರ್ನರ್ ಆಗಿ ರಘುರಾಂ ಗೋವಿಂದ ರಾಜನ್ ಅವರು ನೇಮಕಗೊಂಡಿರುವುದು ದೇಶದ ಸದ್ಯದ ಅರ್ಥ ವ್ಯವಸ್ಥೆಯ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಮಹತ್ವ ಪಡೆದಿದೆ. ನಿರಾಶಾದಾಯಕ ಕೈಗಾರಿಕೆ ಬೆಳವಣಿಗೆ, ಗರಿಷ್ಠ ಮಟ್ಟದ ಹಣದುಬ್ಬರ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ, ಆತಂಕ ಮೂಡಿಸಿರುವ ಚಾಲ್ತಿ ಖಾತೆ ಕೊರತೆ ಹೆಚ್ಚಳ ಮತ್ತಿತರ ಸವಾಲುಗಳನ್ನು ಜಾಗತಿಕ ಖ್ಯಾತಿಯ ಈ ಹಣಕಾಸು ತಜ್ಞ ಹೇಗೆ ಪರಿಹರಿಸುತ್ತಾರೆ ಎನ್ನುವ ಕುತೂಹಲದ ಜತೆಗೆ ಹೊಸ ಭರವಸೆಯನ್ನೂ ಮೂಡಿಸಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಜತೆ ಕೆಲಸ ಮಾಡಿರುವ ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಹಾಲಿ ಮುಖ್ಯ ಆರ್ಥಿಕ ಸಲಹೆಗಾರರೂ ಆಗಿರುವ ರಾಜನ್, ಆರ್‌ಬಿಐನ ಅತ್ಯಂತ ಕಿರಿಯ ವಯಸ್ಸಿನ ಗವರ್ನರ್‌ಗಳಲ್ಲಿ ಒಬ್ಬರಾಗಿರುವುದು ಅವರ ಇನ್ನೊಂದು ಹೆಗ್ಗಳಿಕೆಯಾಗಿದೆ. ಸದ್ಯದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಮನ್ವಯ ಇಲ್ಲದಿರುವಾಗಲೇ ನಡೆದ ಈ ಹೊಸ ನೇಮಕವು, ಕೇಂದ್ರೀಯ ಬ್ಯಾಂಕ್ ಮತ್ತು ಹಣಕಾಸು ಸಚಿವಾಲಯದ ಮಧ್ಯೆ ಬಿಗಡಾಯಿಸಿರುವ ಸಂಬಂಧ ಸುಧಾರಣೆಯ ಮೊದಲ ಹೆಜ್ಜೆಯಾಗಿರಲಿ. ಗವರ್ನರ್ ಹುದ್ದೆಯಿಂದ ನಿವೃತ್ತರಾಗಲಿರುವ ದುವ್ವೆರಿ ಸುಬ್ಬರಾವ್ ಅವರು ತಮ್ಮ ಆಕ್ರಮಣಕಾರಿ ಧೋರಣೆಗೆ ಖ್ಯಾತರಾಗಿದ್ದರು. ಅವರ ಉತ್ತರಾಧಿಕಾರಿಯಾಗಲಿರುವ ರಘುರಾಂ ಅವರೂ ಆರ್‌ಬಿಐನ ಆದ್ಯತೆ ಮತ್ತು ಬದ್ಧತೆಗಳಿಗೆ ತಕ್ಕಂತೆಯೇ ಕಾರ್ಯನಿರ್ವಹಿಸಬೇಕಾಗುವ ಅನಿವಾರ್ಯ ಇದ್ದರೂ, ಆರ್ಥಿಕ ಬಿಕ್ಕಟ್ಟು ಪರಿಹರಿಸುವಲ್ಲಿ ಇವರ ದೂರದೃಷ್ಟಿ, ಜಾಗತಿಕ ಅನುಭವ ಮತ್ತು ಪ್ರಬುದ್ಧತೆ ನೆರವಿಗೆ ಬರಲಿವೆ. ಆರ್ಥಿಕ ಸ್ಥಿರತೆ ಸಾಧಿಸಲು ಹಣದ ಚಲಾವಣೆ ಮೇಲೆ ನಿಯಂತ್ರಣ ಹೇರಬೇಕು ಎನ್ನುವ ಸಾಂಪ್ರದಾಯಿಕ ಚಿಂತನೆಗಿಂತ ಇವರು ಹೇಗೆ ಭಿನ್ನವಾಗಿರುತ್ತಾರೆ ಎನ್ನುವುದನ್ನೂ ಕಾದು ನೋಡಬೇಕಾಗಿದೆ. ಸದ್ಯಕ್ಕೆ ಹಣದುಬ್ಬರ ಯಾರ ಅಂಕೆಗೂ ಸಿಗುತ್ತಿಲ್ಲ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಗರಿಷ್ಠ ಪ್ರಮಾಣದ ಕುಸಿತ ದಾಖಲಿಸಿದೆ. ಆರ್ಥಿಕ ಪ್ರಗತಿ ದರ ಕುಂಠಿತಗೊಂಡಿದೆ. ಇಂತಹ ಬಿಕ್ಕಟ್ಟಿನ ಮತ್ತು ನಿರಾಶಾದಾಯಕ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಹಣದ ಹರಿವು ನಿಯಂತ್ರಿಸಿ ಅಲ್ಪಾವಧಿಯಲ್ಲಿ ಬಡ್ಡಿ ದರಗಳನ್ನು ಹೆಚ್ಚಿಸುವ ಕ್ರಮಗಳೂ ನಿರೀಕ್ಷಿತ ಫಲ ನೀಡುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ಸಡಿಲ ಹಣಕಾಸು ನೀತಿ ಮತ್ತು ಕಠಿಣ ವಿತ್ತೀಯ ನೀತಿ ಅಳವಡಿಕೆಯ ಅಗತ್ಯ ಇದೆ. ಕುಂಠಿತಗೊಂಡಿರುವ ಅರ್ಥ ವ್ಯವಸ್ಥೆಯ ಎಂಜಿನ್‌ಗೆ ಶಕ್ತಿ ತುಂಬಲು ಮೂಲ ಸೌಕರ್ಯ ರಂಗದಲ್ಲಿ ಸರ್ಕಾರಿ ಬಂಡವಾಳ ಹೂಡಿಕೆಯೂ ಹೆಚ್ಚಬೇಕಾಗಿದೆ. ಇದಕ್ಕೆ ಪೂರಕವಾಗಿ ಬೇಕಾಗಿರುವ ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ರಘುರಾಂ ಕಾರ್ಯಪ್ರವೃತ್ತರಾಗಿ ಸಫಲರಾಗಬೇಕಾಗಿದೆ. ಇಂತಹ ಸಮನ್ವಯ, ಹೊಂದಾಣಿಕೆ ಸೂತ್ರದ ಮೂಲಕವೇ ದೇಶದ ಅರ್ಥ ವ್ಯವಸ್ಥೆಯನ್ನು ಬಿಕ್ಕಟ್ಟುಗಳಿಂದ ಪಾರು ಮಾಡಲು ಸಾಧ್ಯ. ಈ ಹೊಣೆಗಾರಿಕೆಯನ್ನು ಅವರು ಯಶಸ್ವಿಯಾಗಿ ನಿಭಾಯಿಸಬಲ್ಲರು ಎಂದು ಆಶಿಸಬಹುದು. ಇವರು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಸರಿಯಾಗಿ ಮುಂಗಾರು ಫಸಲು ಮಾರುಕಟ್ಟೆಗೆ ಬಂದು ಆರ್‌ಬಿಐನ ಅತಿದೊಡ್ಡ `ಗುಮ್ಮ' ಆಗಿರುವ ಆಹಾರ ಹಣದುಬ್ಬರ ತಗ್ಗಿಸಲು ಕಾರಣವಾಗಿ, ಬ್ಯಾಂಕ್ ಬಡ್ಡಿ ದರಗಳನ್ನು ತಗ್ಗಿಸಲು ನೆರವಾಗಬಹುದು ಎಂದೂ ನಿರೀಕ್ಷಿಸಬಹುದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.