ಕೆರೆಗಳಿಗೆ ಕಾಯಕಲ್ಪ ಅಗತ್ಯ ಕೆರೆಗಳ ಸಮೀಕ್ಷೆ ನಡೆಸಿ, ಅವುಗಳ ಒತ್ತುವರಿ ತೆರವುಗೊಳಿಸಲು ತೀರ್ಮಾನಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ರಾಜ್ಯದಲ್ಲಿ ಒಟ್ಟು 37,200 ಕೆರೆಗಳಿವೆ. ಈ ಪೈಕಿ 12 ಸಾವಿರ ಕೆರೆಗಳು ಬತ್ತಿಹೋಗಿವೆ ಎಂಬುದು ಕಳವಳಕಾರಿ. ಕೆರೆಗಳಲ್ಲಿ ಒಂದೋ ಹೂಳು ತುಂಬಿಕೊಂಡಿದೆ ಇಲ್ಲವೇ ಅಕ್ಕಪಕ್ಕ ಜಮೀನು ಹೊಂದಿರುವ ರೈತರಿಂದ ಅವು ಒತ್ತುವರಿಗೆ ಒಳಗಾಗಿವೆ. ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಪುನಶ್ಚೇತನಗೊಳಿಸುವುದಾಗಿ ಸರ್ಕಾರ ಮೇಲಿಂದ ಮೇಲೆ ಭರವಸೆ ನೀಡುತ್ತಲೇ ಇದೆ. ಆದರೆ ಇಲ್ಲಿಯವರೆಗೂ ಈ ಭರವಸೆ ಈಡೇರಿಲ್ಲ. ಹೊಸ ಸರ್ಕಾರವಾದರೂ ಇದನ್ನು ಈಡೇರಿಸಿದರೆ ರಾಜ್ಯದ ಜನತೆಗೆ ಮಹದುಪಕಾರ ಆದೀತು. ಕೆರೆಗಳು ಕೃಷಿಗೆ ಮೂಲ ಆಧಾರ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆಯೂ ಹೌದು. ಕೆರೆಗಳ ನಾಶದಿಂದ ಪರಿಸರದ ಮೇಲೆ ದುಷ್ಪರಿಣಾಮ ಆಗುತ್ತಿದೆ. ನದಿ-ನಾಲೆಗಳ ಆಸರೆ ಇಲ್ಲದ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಪಾತಾಳ ಮುಟ್ಟಿದೆ. ಇದರಿಂದಾಗಿ ಕೊಳವೆಬಾವಿಗಳು ಏದುಸಿರು ಬಿಡುತ್ತಿವೆ. ಅದನ್ನೇ ನೆಚ್ಚಿಕೊಂಡ ಕೃಷಿಕರು ಕಂಗಾಲಾಗಿದ್ದಾರೆ. ಬೆಂಗಳೂರು ಸೇರಿದಂತೆ ನಗರ, ಪಟ್ಟಣಗಳಲ್ಲಿನ ಕೆರೆ ಅಂಗಳವನ್ನು ಪ್ರಭಾವಿಗಳು ಕಬಳಿಸಿದ್ದಾರೆ. ಅಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಇದನ್ನು ತೆರವುಗೊಳಿಸುವ ಧೈರ್ಯವನ್ನು ಯಾವ ಸರ್ಕಾರವೂ ತೋರಿಲ್ಲ. ಹಲವೆಡೆ ಬಸ್ ನಿಲ್ದಾಣಗಳಿಗೂ ಕೆರೆಗಳೇ ಆಹುತಿಯಾಗಿವೆ. `ಬಸ್ ನಿಲ್ದಾಣ ಮತ್ತು ಕ್ರೀಡಾಂಗಣಗಳನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ ಕೆರೆಗಳನ್ನು ಹಾಗೆ ನಿರ್ಮಿಸಲು ಸಾಧ್ಯವಿಲ್ಲ' ಎಂದು ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಹೇಳಿರುವುದರಲ್ಲಿ ಬಹುದೊಡ್ಡ ಅರ್ಥವಿದೆ. ಕೆರೆ ಕುಂಟೆಗಳನ್ನು ನುಂಗಿದ ದುಷ್ಟಕೂಟದ ಒತ್ತಡಗಳಿಗೆ ಸೊಪ್ಪು ಹಾಕದೆ ಒತ್ತುವರಿ ತೆರವಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬದುಕು ಇನ್ನಷ್ಟು ಅಸಹನೀಯ ಆಗುವುದರಲ್ಲಿ ಅನುಮಾನ ಇಲ್ಲ. ರಾಜ್ಯದಲ್ಲಿ 4500 ಕೆರೆಗಳು ಒತ್ತುವರಿಗೆ ಒಳಗಾಗಿವೆ ಎಂದು ಅಂದಾಜಿಸಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯೂ ಇದೆ. ಯಾರ ಮುಲಾಜಿಗೂ ಒಳಗಾಗದೆ ಈ ಒತ್ತುವರಿಯನ್ನು ಕಾಲಮಿತಿಯಲ್ಲಿ ತೆರವುಗೊಳಿಸಬೇಕು. ಜಲತಜ್ಞ ರಾಜೇಂದ್ರ ಸಿಂಗ್ ಅವರು ರಾಜಸ್ತಾನದಲ್ಲಿ ಸಾಧಿಸಿದ ಮೌನ ಕ್ರಾಂತಿಯನ್ನು ಕರ್ನಾಟಕದಲ್ಲೂ ಅನುಸರಿಸಬಹುದೇ ಎಂಬ ಕುರಿತು ಸರ್ಕಾರ ಚಿಂತಿಸಬೇಕು. ಡಾ. ಸಿಂಗ್ ಪ್ರಯತ್ನದ ಫಲವಾಗಿ ರಾಜಸ್ತಾನದಲ್ಲಿ ಹತ್ತು ಸಾವಿರ ಕೆರೆಗಳು, ಏಳು ನದಿಗಳು ಪುನಶ್ಚೇತನ ಕಂಡಿವೆ ಎಂಬ ಸಂಗತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲರೇ ತಿಳಿಸಿದ್ದಾರೆ. ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ 12 ಸಾವಿರ ಕೆರೆಗಳು ಎರಡು ವರ್ಷಗಳಲ್ಲಿ ಪುನಶ್ಚೇತನಗೊಳ್ಳಲಿವೆ ಎಂದು ಸಚಿವರು ಹೇಳಿದ್ದಾರೆ. ಸರ್ಕಾರದ ಸಂಕಲ್ಪ ದೃಢವಾಗಿದ್ದರೆ ಅಧಿಕಾರಿಗಳಿಂದ ಕೆಲಸ ತೆಗೆಸುವುದು ಕಷ್ಟವೇನೂ ಅಲ್ಲ. ಅಂತಹ ದೃಢ ಸಂಕಲ್ಪವನ್ನು ಸರ್ಕಾರ ತೋರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.