ಹಾಸ್ಟೆಲ್: ಕಲಿಕೆಗೆ ಪೂರಕವಾಗಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಉಸ್ತುವಾರಿಯಲ್ಲಿರುವ ಹಾಸ್ಟೆಲ್‌ಗಳ ಅವ್ಯವಸ್ಥೆ ಸರಿಪಡಿಸುವ ಪ್ರಯತ್ನಕ್ಕೆ ಚಾಲನೆ ಸಿಕ್ಕಿದಂತಿದೆ. ಇದು ಆಶಾದಾಯಕ ಬೆಳವಣಿಗೆ. ಆರು ತಿಂಗಳಲ್ಲಿ ಹಾಸ್ಟೆಲ್‌ಗಳ ಅವ್ಯವಸ್ಥೆ ಸರಿಪಡಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್, ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪೂರೈಸುತ್ತಿರುವ ಊಟದ ರುಚಿ ನೋಡಿ ಗುಣಮಟ್ಟ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬೀದರ್, ಗುಲ್ಬರ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿರುವ ಕೆಲವು ಹಾಸ್ಟೆಲ್‌ಗಳಿಗೆ ಖುದ್ದು ಭೇಟಿ ನೀಡಿ ಬಂದಿರುವ ಲೋಕಾಯುಕ್ತರು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲ, ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚೆಯನ್ನೂ ನಡೆಸಿದ್ದಾರೆ. ಸರ್ಕಾರಿ ಹಾಸ್ಟೆಲ್‌ಗಳ ಅವ್ಯವಸ್ಥೆ ಈ ಜಿಲ್ಲೆಗಳಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಲೋಕಾಯುಕ್ತರು ಮತ್ತು ಮುಖ್ಯಮಂತ್ರಿಯವರ ಕಾಳಜಿ ಮೆಚ್ಚುವಂಥದ್ದಾದರೂ ಹಾಸ್ಟೆಲ್‌ಗಳ ಸ್ಥಿತಿ ಸುಧಾರಣೆ ಅವರು ಭಾವಿಸಿದಷ್ಟು ಸರಳವಾಗಿಲ್ಲ. ಅವ್ಯವಸ್ಥೆ ದಿಢೀರನೆ ಸೃಷ್ಟಿಯಾದದ್ದಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲೂ ಇತ್ತು. ವಿದ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಹೆಚ್ಚಿಸುವತ್ತ ಸರ್ಕಾರಗಳು ಗಮನ ನೀಡಿಲ್ಲ. ಅದಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಸರ್ಕಾರ ಈಗ ಕೊಡುತ್ತಿರುವ ಹಣ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಮತ್ತು ಇತರ ಸೌಕರ್ಯಗಳನ್ನು ಒದಗಿಸುವ ಕೆಲಸ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದರ ಪರಿಶೀಲನೆಯೂ ಸರಿಯಾಗಿ ನಡೆಯುತ್ತಿಲ್ಲ. ಅವ್ಯವಸ್ಥೆ ಕುರಿತು ಮಾಧ್ಯಮಗಳು ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತಲೇ ಇವೆ. ಅನೇಕ ಕಡೆ ವಿದ್ಯಾರ್ಥಿಗಳೇ ಪ್ರತಿಭಟನೆ ನಡೆಸಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ. ಹಾಸ್ಟೆಲ್‌ಗಳಿಗೆ ಕಳಪೆ ಆಹಾರಧಾನ್ಯ, ತರಕಾರಿ ಇತ್ಯಾದಿ ಪೂರೈಕೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳೇ ಅದಕ್ಕೆ ಹೊಣೆ. ಲೋಪಗಳನ್ನು ಪತ್ತೆಹಚ್ಚಿ, ಸೂಕ್ತ ಕ್ರಮ ಜರುಗಿಸುವ ಮೂಲಕವೇ ಹದಗೆಟ್ಟ ಸ್ಥಿತಿಯನ್ನು ಸರಿಪಡಿಸಬೇಕು. ಇದು ಸವಾಲಿನ ಕೆಲಸ. ಅನೇಕ ಕಡೆ ಹಾಸ್ಟೆಲ್‌ಗಳ ಪರಿಸರ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿಲ್ಲ. ಗುಣಮಟ್ಟದ ಆಹಾರವಂತೂ ಕನಸಿನ ಮಾತು. ರಿಪೇರಿ ಕಾಣದ ಹಳೆಯ ಕಟ್ಟಡಗಳು, ಕೊಠಡಿಗಳ ಅಭಾವ, ಶೌಚಾಲಯಗಳ ಕೊರತೆ, ಶುದ್ಧ ಕುಡಿಯುವ ನೀರಿನ ಅಲಭ್ಯತೆ, ಕೊಳಕು ಹಾಸಿಗೆ, ಹೊದಿಕೆ... ಅವ್ಯವಸ್ಥೆ ಒಂದೆರಡಲ್ಲ. ಇಂತಹ ಪರಿಸರದಲ್ಲೇ ಇದ್ದುಕೊಂಡು ಓದುವಂತಹ ವಿದ್ಯಾರ್ಥಿಗಳ ಅಸಹಾಯಕತೆ ದುರದೃಷ್ಟಕರ. ವಿದ್ಯಾರ್ಥಿನಿಯರ ಕೆಲವು ಹಾಸ್ಟೆಲ್‌ಗಳ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಅವುಗಳಿಗೆ ಸೂಕ್ತ ಭದ್ರತೆ ಇಲ್ಲ. ಅವರು ಸದಾ ಆತಂಕದಲ್ಲೇ ಕಾಲಕಳೆಯುವ ಸ್ಥಿತಿ ಇದೆ. ಹಾಸ್ಟೆಲ್‌ಗಳ ಸ್ಥಿತಿ ಸುಧಾರಿಸುವುದಾಗಿ ಸರ್ಕಾರ ಭರವಸೆ ನೀಡಿದರೆ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕು. ಸುಧಾರಣೆಗೆ ಕಾಲಮಿತಿಯ ಕಾರ್ಯಕ್ರಮ ಹಾಕಿಕೊಳ್ಳಬೇಕು. ಆಯಾ ಜಿಲ್ಲೆಗಳ ಸಚಿವರು ಮತ್ತು ಶಾಸಕರು ತಿಂಗಳಿಗೊಮ್ಮೆ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆಗಳನ್ನು ಕೇಳಿ ಪರಿಹರಿಸಬೇಕು. ಈ ಕೆಲಸ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿ ಕಾರ್ಯೋನ್ಮುಖವಾದರೆ ಪರಿಸ್ಥಿತಿ ಸುಧಾರಿಸೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.