ದೂರದೃಷ್ಟಿಯ ಕಂಪೆನಿ ಕಾಯ್ದೆ ಕಂಪೆನಿ ಮಸೂದೆಗೆ ಸಂಸತ್ ಅನುಮೋದನೆ ನೀಡುವುದರೊಂದಿಗೆ ಸರಿಸುಮಾರು ಆರು ದಶಕಗಳಷ್ಟು ಹಳೆಯ `ಕಂಪೆನಿ ಕಾಯ್ದೆ- 1956' ರದ್ದಾಗಿ, ಉದ್ದಿಮೆ ಸಂಸ್ಥೆಗಳ ಕಾರ್ಯನಿರ್ವಹಣೆ, ನಿಯಂತ್ರಣ ವಿಷಯದಲ್ಲಿ ವ್ಯಾಪಕ ಬದಲಾವಣೆಗಳಿಗೆ ಹಾದಿ ಸುಗಮವಾಗಲಿದೆ. 57 ವರ್ಷಗಳಲ್ಲಿ 25 ಬಾರಿ ತಿದ್ದುಪಡಿಯಾಗಿರುವ ಮತ್ತು ಈಗಿನ ಪರಿಸ್ಥಿತಿಗೆ ಹೊಂದಾಣಿಕೆಯಾಗದ ಕಾಯ್ದೆ ಕೊನೆಗೂ ಹೊಸ ರೂಪ ಪಡೆದುಕೊಂಡಿರುವುದು ನಿಜಕ್ಕೂ ಐತಿಹಾಸಿಕ. ಕಂಪೆನಿಗಳ ಕಾರ್ಯವೈಖರಿಯ ಬಲವರ್ಧನೆ ಮತ್ತು ದಕ್ಷ ಆಡಳಿತ ನೀಡುವಲ್ಲಿ ಇದ್ದ ದೊಡ್ಡ ಕೊರತೆಯೊಂದು ದೂರವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಕಾರ್ಪೊರೇಟ್ ಜಗತ್ತು ಸ್ಫೋಟಕ ಬಗೆಯಲ್ಲಿ ಬೆಳವಣಿಗೆ ಕಂಡಿದ್ದರೂ, ಕಂಪೆನಿ ಕಾಯ್ದೆ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಗಿರಲಿಲ್ಲ. ರಾಷ್ಟ್ರಪತಿ ಅಂಕಿತ ಬೀಳುತ್ತಿದ್ದಂತೆಯೇ ಕಂಪೆನಿ ವ್ಯವಹಾರ ಸಚಿವಾಲಯವು ಅಧಿಸೂಚನೆ ಹೊರಡಿಸಿ ಹೊಸ ಕಾಯ್ದೆ ಜಾರಿಗೆ ಅನುವು ಮಾಡಿಕೊಡಲಿದೆ. ಇದರಿಂದ ಕಂಪೆನಿಗಳ ಕಾರ್ಯವೈಖರಿಯಲ್ಲಿ ಸುಧಾರಣೆಯ ಹೊಸ ಗಾಳಿ ಬೀಸಲಿದೆ. 21ನೇ ಶತಮಾನದಲ್ಲಿ ಉದ್ದಿಮೆ ವಹಿವಾಟು ಕಾಣುತ್ತಿರುವ ಆಮೂಲಾಗ್ರ ಬದಲಾವಣೆಗೆ ಈ ಹೊಸ ಕಾಯ್ದೆ ಪೂರಕವಾಗಿರಲಿದೆ ಎಂದೂ ನಿರೀಕ್ಷಿಸಬಹುದಾಗಿದೆ. ಆರ್ಥಿಕ ಪ್ರಗತಿಗೆ ಪೂರಕ ಆಗುವಂತೆ ತಮ್ಮ ವಹಿವಾಟಿನಲ್ಲಿ ಕಂಪೆನಿಗಳು ಪಾರದರ್ಶಕತೆ ಹೆಚ್ಚಿಸುವುದು ಈಗ ಅನಿವಾರ್ಯವಾಗಲಿದೆ. ಮುಂದಿನ ಎರಡರಿಂದ ಮೂರು ದಶಕಗಳ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಈ ಹೊಸ ಕಾಯ್ದೆ ಸಕಾರಾತ್ಮಕ ಬದಲಾವಣೆಗಳನ್ನು ತರುವ ಆಶಯ ಸಾಕಾರಗೊಳ್ಳಲು ದೇಶಿ ಉದ್ಯಮ ಕೂಡ ಹೊಸ ಕಾಯ್ದೆಯ ಆಶಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದೆ. ಉದ್ದಿಮೆಗಳ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ಸಾಮಾಜಿಕ ಹೊಣೆಗಾರಿಕೆ ಪಾಲನೆ ಕಡ್ಡಾಯ, ಹೂಡಿಕೆದಾರರ ವಂಚನೆಗೆ ಕಡಿವಾಣ, ನಿರ್ದೇಶಕ ಮಂಡಳಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಮುಂತಾದವುಗಳು ಈ ಕಾಯ್ದೆಯ ಹೆಗ್ಗಳಿಕೆಗಳಾಗಿವೆ. ಕಂಪೆನಿಗಳ ಪ್ರವರ್ತಕರು ಎಸಗುವ ಯಾವುದೇ ಬಗೆಯ ವಂಚನೆ ವಿರುದ್ಧ ದನಿ ಎತ್ತಲು, ಮೊಕದ್ದಮೆ ಹೂಡಲು ಹೂಡಿಕೆದಾರರಿಗೆ ಈಗ ಅವಕಾಶ ದೊರೆಯಲಿದೆ. ನಿವ್ವಳ ಲಾಭದಲ್ಲಿ ಶೇಕಡ ಎರಡರಷ್ಟನ್ನು ಸಾಮಾಜಿಕ ಹೊಣೆಗಾರಿಕೆಗೆ ಕಡ್ಡಾಯವಾಗಿ ವೆಚ್ಚ ಮಾಡುವುದರಿಂದ ದೇಶದಲ್ಲಿ ಕಂಪೆನಿಗಳ ಸೇವಾ ಕಾರ್ಯಗಳೂ ಹೆಚ್ಚಲಿವೆ. ಇದು ರಾಜಕೀಯ ಉದ್ದೇಶಕ್ಕೆ ದುರ್ಬಳಕೆಯಾಗುವುದನ್ನು ತಡೆಯುವ ಅಗತ್ಯವೂ ಇದೆ. ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿ ಇರುವ ಕಾರ್ಪೊರೇಟ್ ಆಡಳಿತ ಸ್ವರೂಪವನ್ನೂ ಹೊಸ ಕಾಯ್ದೆ ಉತ್ತೇಜಿಸಲಿದೆ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಉದ್ದಿಮೆ ಸಂಸ್ಥೆಗಳು ಆಡಳಿತ ಮಂಡಳಿ ಸದಸ್ಯರಲ್ಲಿ ಮೂರನೇ ಒಂದು ಅಂಶದಷ್ಟು ಸ್ವತಂತ್ರ ನಿರ್ದೇಶಕರು (ಕುಟುಂಬ ಸದಸ್ಯರಲ್ಲದವರು/ ಪ್ರವರ್ತಕರ ಜತೆ ಹಣಕಾಸಿನ ವಹಿವಾಟು ಹೊಂದದವರು) ಇರುವುದನ್ನು ಕಡ್ಡಾಯ ಮಾಡಿರುವುದರಿಂದ ನಿರ್ದೇಶಕ ಮಂಡಳಿಗೆ ಕಾಯಕಲ್ಪ ನೀಡಲು ಸಾಧ್ಯವಾಗಲಿದೆ. ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿದ `ಸತ್ಯಂ ಹಗರಣ' ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ನಡೆಯುವ ಲೆಕ್ಕವಿಲ್ಲದಷ್ಟು ಸಣ್ಣ ಪುಟ್ಟ ಹಗರಣಗಳಿಗೆ ಈ ಕಾಯ್ದೆ ಕಡಿವಾಣ ಹಾಕುವಂತಾಗಿ, ಹೂಡಿಕೆದಾರರ ವಿಶ್ವಾಸ ವೃದ್ಧಿಸುವಂತಾದರೆ ಹೊಸ ಕಾಯ್ದೆಯ ಉದ್ದೇಶ ಸಫಲಗೊಳ್ಳಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.