ಅಕ್ರಮಕ್ಕೆ ಅಂಕುಶ ಅಗತ್ಯ ನಿರ್ಮಾಣ ಹಂತದಲ್ಲೇ ದೊಡ್ಡ ಕಟ್ಟಡಗಳು ಕುಸಿದು ಅಮಾಯಕರು ಪ್ರಾಣ ಕಳೆದುಕೊಳ್ಳುವ ಹಾಗೂ ಅಂಗವಿಕಲರಾಗುವ ದುರಂತಗಳಿಗೆ ಕೊನೆಯೇ ಇಲ್ಲ. ಸೋಮವಾರ ಬೆಂಗಳೂರಿನ ಕೆಂಗೇರಿ ಸಮೀಪದ ಬಂಡೆಮಠ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಲ್ಯಾಣಮಂಟಪದ ಎರಡನೇ ಅಂತಸ್ತಿನ ಛಾವಣಿಗಾಗಿ ಹಾಕಿದ್ದ ಸೆಂಟ್ರಿಂಗ್ ಕುಸಿದು ಮೂವರು ಮೃತಪಟ್ಟು, ಹತ್ತು ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕಟ್ಟಡ ನಿರ್ಮಾಣದ ಹೊಣೆಹೊತ್ತ ಗುತ್ತಿಗೆದಾರನ ಬೇಜವಾಬ್ದಾರಿತನಕ್ಕೆ ಅಮಾಯಕ ಜೀವಗಳು ಬಲಿಯಾಗಿವೆ. ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದ ಬಂಡೆಮಠದ ಆಡಳಿತ ಮಂಡಳಿ, ಪಾಲಿಕೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ. ಖಾತೆಯೇ ಆಗದ ಕೃಷಿ ಭೂಮಿಯಲ್ಲಿ ಕಟ್ಟಡದ ನಿರ್ಮಾಣ ನಡೆಯುತ್ತಿತ್ತು ಎಂಬ ಸಂಗತಿಯೇ ಆಘಾತಕಾರಿ. ಈ ಕಟ್ಟಡ ಅಕ್ರಮ ಎನ್ನುವುದು ಗೊತ್ತಾದ ಮೇಲೂ ಕಾಮಗಾರಿಯನ್ನು ಅಕ್ಷರಶಃ ನಿಲ್ಲಿಸುವ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಿಲ್ಲ. ಈ ಅಕ್ರಮಕ್ಕೆ ತಾವು ಹೊಣೆಯಲ್ಲ ಎಂಬುದನ್ನು ಸಾಬೀತುಪಡಿಸಲು ಅಧಿಕಾರಿಗಳು ಕಾಮಗಾರಿ ಸ್ಥಗಿತಕ್ಕೆ ಕೇವಲ ನೊಟೀಸ್ ಜಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳ ಈ ವರ್ತನೆ ಹಲವು ಸಂದೇಹಗಳಿಗೆ ದಾರಿ ಮಾಡಿಕೊಡುತ್ತದೆ. ಕಲ್ಯಾಣಮಂಟಪದ ನಿರ್ಮಾಣಕ್ಕೆ ಪ್ರಭಾವಿ ವ್ಯಕ್ತಿಗಳ ಕುಮ್ಮಕ್ಕು ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಪಾಲಿಕೆ ಅಧಿಕಾರಿಗಳು ತಮ್ಮ ಹೊಣೆಯನ್ನು ಸರಿಯಾಗಿ ನಿರ್ವಹಿಸಿದ್ದರೆ ಈ ದುರ್ಘಟನೆಯನ್ನು ತಪ್ಪಿಸಬಹುದಿತ್ತು. ಅದೇನೇ ಇರಲಿ, ಪಾಲಿಕೆಯ ಕಣ್ಗಾವಲಿನಲ್ಲೂ ಅಕ್ರಮ ಕಟ್ಟಡಗಳ ನಿರ್ಮಾಣ ಅಬಾಧಿತವಾಗಿ ಮುಂದುವರಿದಿರುವುದು ನಿಜಕ್ಕೂ ದುರದೃಷ್ಟಕರ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಅಲ್ಲಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ನಿರ್ಮಾಣ ಹಂತದ್ಲ್ಲಲಿ ಏನಾದರೂ ಎಡವಟ್ಟುಗಳಾದರೆ ಅಕ್ರಮಗಳು ಬೆಳಕಿಗೆ ಬರುತ್ತವೆ. ಇಲ್ಲವಾದರೆ ಅವು ಸಕ್ರಮವಾಗಿ ಬಿಡುತ್ತವೆ! ಕಟ್ಟಡಗಳ ನಿರ್ಮಾಣ ಹಂತದಲ್ಲೇ ನಿಯಮಗಳ ಪಾಲನೆ ಆಗಿದೆಯೇ, ಕಾಮಗಾರಿ ಗುಣಮಟ್ಟ ಸರಿಯಾಗಿದೆಯೇ ಎಂಬುದನ್ನು ಸಂಬಂಧಪಟ್ಟವರು ಪರಿಶೀಲಿಸಬೇಕು. ಈ ವಿಷಯದಲ್ಲಿ ವಿಳಂಬ ಅಥವಾ ಉದಾಸೀನ ಸಲ್ಲದು. ಬಂಡೆಮಠ ಆಡಳಿತ ಮಂಡಳಿಯ ಸದಸ್ಯರು ಮಾತ್ರವಲ್ಲದೆ ಕಟ್ಟಡದ ಕಾಮಗಾರಿ ನಿಲ್ಲಿಸಲು ವಿಫಲರಾದ ಪಾಲಿಕೆ ಅಧಿಕಾರಿಗಳನ್ನು ತಕ್ಷಣವೇ ಬಂಧಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅಮಾಯಕರು ಜೀವ ಕಳೆದುಕೊಳ್ಳುತ್ತಲೇ ಇರುತ್ತಾರೆ. ಕಟ್ಟಡ ದುರಂತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಷ್ಟೋ ಇಷ್ಟೋ ಪರಿಹಾರ ಕೊಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಮಾಲೀಕರ ಧೋರಣೆಗೆ ಸರ್ಕಾರ ಇನ್ನಾದರೂ ಕಡಿವಾಣ ಹಾಕಬೇಕು. ಈ ದುರಂತದಲ್ಲಿ ಸತ್ತವರ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು. ಬೆಂಗಳೂರು ನಗರದಲ್ಲಿ ಎಲ್ಲೆಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ ಎನ್ನುವುದು ನಗರಪಾಲಿಕೆಗೆ ಚೆನ್ನಾಗಿ ಗೊತ್ತಿದೆ. ಅವುಗಳನ್ನು ನಿರ್ಮಿಸುತ್ತಿರುವವರು ಎಷ್ಟೇ ಪ್ರಭಾವಿಗಳಾದರೂ ಅವರ ಒತ್ತಡಗಳಿಗೆ ತಲೆಬಾಗದೆ ದಿಟ್ಟ ಕ್ರಮಕ್ಕೆ ಮುಂದಾಗುವ ಮೂಲಕವೇ ದುರ್ಘಟನೆಗಳಿಗೆ ಕಡಿವಾಣ ಹಾಕಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.