ಮರಳು ಮಾಫಿಯಾಕ್ಕೆ ಚಾಟಿಯೇಟು ಅಂಕೆ ಮೀರಿ ವರ್ತಿಸುತ್ತಿದ್ದ ಮರಳು ಮಾಫಿಯಾಗಳು ಮತ್ತು ಅವುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಅಧಿಕಾರಶಾಹಿಗೆ ಸುಪ್ರೀಂಕೋರ್ಟ್‌ನ ರಾಷ್ಟ್ರೀಯ ಹಸಿರು ನ್ಯಾಯಪೀಠ ಸರಿಯಾಗಿಯೇ ಚಾಟಿ ಬೀಸಿದೆ. ಕೇಂದ್ರ ಪರಿಸರ ಇಲಾಖೆ ಅಥವಾ ರಾಜ್ಯಗಳ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರಗಳ ಅನುಮೋದನೆ ಹಾಗೂ ಸಂಬಂಧಿಸಿದ ಇಲಾಖೆಗಳ ಪರವಾನಗಿ ಇಲ್ಲದೆ ನದಿ ಪಾತ್ರದಲ್ಲಿ ಮರಳು ತೆಗೆಯುವುದನ್ನು, ಸಾಗಿಸುವುದನ್ನು ಅದು ನಿಷೇಧಿಸಿದೆ. ಈ ಆದೇಶ ಪಾಲನೆಗೆ ಕಟ್ಟುನಿಟ್ಟು ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಇಡೀ ದೇಶಕ್ಕೆ ಅನ್ವಯವಾಗುವ ಈ ಆದೇಶ ಸ್ವಾಗತಾರ್ಹ ಮತ್ತು ಚರಿತ್ರಾರ್ಹ. ನದಿಗಳ ಒಡಲನ್ನು ಬೇಕಾಬಿಟ್ಟಿ ಬಗೆದು ಮರಳು ಸಾಗಿಸುವ ದಂಧೆ ಎಲ್ಲೆಡೆ ಅವ್ಯಾಹತವಾಗಿ ನಡೆದಿತ್ತು. ಉತ್ತರ ಪ್ರದೇಶದಲ್ಲಂತೂ ಮರಳು ಮಾಫಿಯಾಕ್ಕೆ ಲಗಾಮು ಹಾಕಲು ಮುಂದಾದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿ ಅಮಾನತಿಗೆ ಒಳಗಾಗಿದ್ದಾರೆ. ನಮ್ಮ ರಾಜ್ಯದಲ್ಲೂ ಮರಳು ಮಾಫಿಯಾ ಹಾವಳಿ ಕಮ್ಮಿಯೇನಿಲ್ಲ. ಮರಳು ಗಣಿಗಾರಿಕೆಯಲ್ಲಿ ಪ್ರಭಾವಿ ರಾಜಕಾರಣಿಗಳ ಪಾತ್ರ, ನೈಸರ್ಗಿಕ ಸಂಪತ್ತಿನ ಲೂಟಿಯನ್ನು ತಡೆಯಬೇಕಾದ ಅಧಿಕಾರಿಗಳ ನಿಷ್ಕ್ರಿಯತೆ ಕಣ್ಣಿಗೆ ರಾಚುತ್ತದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಮುಂದಾದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಸಂಗಗಳೂ ನಡೆದಿವೆ. ಅಕ್ರಮ ಮರಳು ದಂಧೆಯಿಂದ ಕೊಬ್ಬಿದವರ ವರ್ತನೆ ಅತಿರೇಕಕ್ಕೆ ಹೋಗಿತ್ತು. ಅದಕ್ಕೆಲ್ಲ ಈಗ ಕಡಿವಾಣ ಹಾಕುವ ಪರಿಣಾಮಕಾರಿ ಅಸ್ತ್ರ ಸಿಕ್ಕಿದೆ. ನದಿ ಮತ್ತು ಹಳ್ಳಗಳಿಂದ ಯರ್ರಾಬಿರ್ರಿ ಮರಳು ತೆಗೆಯುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇದೆ. ಪರಿಸರದ ಮೇಲೆ, ನೀರಿನ ಹರಿವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದರಿಂದ ಅನೇಕ ಕಡೆ ನದಿ ಪಾತ್ರಗಳೇ ಬದಲಾಗಿವೆ. ಇದರ ವೈಜ್ಞಾನಿಕ ಅಧ್ಯಯನವಂತೂ ನಡೆದೇ ಇಲ್ಲ. ಈ ಸಂಗತಿ ಗಮನಕ್ಕೆ ಬಂದಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಐದು ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶದಲ್ಲಿ ಮರಳು ತೆಗೆಯಲು ಪರಿಸರ ಇಲಾಖೆ ಪರವಾನಗಿ ಕಡ್ಡಾಯ ಎಂದು ಆದೇಶಿಸಿತ್ತು. ಆದರೆ ಅದನ್ನೂ ಧಿಕ್ಕರಿಸಿ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ಮರಳು ಗಣಿಗಾರಿಕೆ ಮುಂದುವರಿದಿದೆ. ಕರ್ನಾಟಕವೂ ಇದರಿಂದ ಹೊರತಲ್ಲ. ಮರಳು ನೀತಿಯೊಂದನ್ನು ರೂಪಿಸುವುದಾಗಿ ಕಾಲಕಾಲಕ್ಕೆ ಮಂತ್ರಿಗಳು ಹೇಳುತ್ತಲೇ ಬಂದಿದ್ದಾರೆ. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೇರಳ ಸೇರಿದಂತೆ ಒಂದೆರಡು ರಾಜ್ಯಗಳನ್ನು ಬಿಟ್ಟರೆ ಇನ್ನೆಲ್ಲೂ ಮರಳು ನೀತಿ ಎಂಬುದೇ ಇಲ್ಲ. ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ಕ್ಷೇತ್ರದಲ್ಲಿ ಮರಳು ಅತ್ಯಗತ್ಯವಾಗಿ ಬೇಕಾದ ಕಚ್ಚಾ ಸಾಮಗ್ರಿ. ಮರಳಿಲ್ಲದಿದ್ದರೆ ಅಭಿವೃದ್ಧಿಯೇ ನಿಂತು ಹೋಗುತ್ತದೆ. ಹೀಗಾಗಿ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆಯ ಮಧ್ಯೆ ಸಮತೋಲನ ಕಾಯ್ದುಕೊಳ್ಳುವುದು ಮರಳು ನೀತಿಗೆ ಆಧಾರವಾಗಬೇಕು. ಅಕ್ರಮ ಮರಳು ಗಣಿಗಾರಿಕೆಯಿಂದ ಖಜಾನೆಗೆ ಹಲವು ಲಕ್ಷ ಕೋಟಿ ರೂಪಾಯಿ ವರಮಾನ ತಪ್ಪಿದೆ ಎಂಬ ನ್ಯಾಯಪೀಠದ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.