ಸ್ವಾಮಿಗಳಿಗೆ ಶೋಭೆ ಅಲ್ಲ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಇಪ್ಪತ್ತೈದು ಮಂದಿ ಮಠಾಧೀಶರು ಇತ್ತೀಚೆಗೆ ತುಮಕೂರಿನಲ್ಲಿ ಸಭೆ ಸೇರಿ ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದ್ದಾರೆ. ಈ ಮಠಾಧಿಪತಿಗಳ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಹುಟ್ಟಿಸಿದೆ. ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಮಠಾಧಿಪತಿಗಳೂ ಅದಕ್ಕೆ ಹೊರತಲ್ಲ. ಆದರೆ ಅವರು ರಾಜಕೀಯದಿಂದ ದೂರವಿರಬೇಕು ಮತ್ತು ಸದಾ `ಪಕ್ಷಾತೀತ' ನಿಲುವು ತಾಳಬೇಕು ಎಂದೇ ಜನ ಬಯಸುತ್ತಾರೆ. ಮಠಾಧೀಶರು, ಪರಮೇಶ್ವರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದೆಡೆ ಸೇರಿ ಅವರಿಗೆ ಉನ್ನತ ಸ್ಥಾನಮಾನ ಸಿಗಲಿ ಎಂದು ಹಾರೈಸುವುದು ತಪ್ಪಲ್ಲ. ಆದರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದ್ದೇ ಅಲ್ಲದೆ ಅದಕ್ಕೆ ಗಡುವು ನೀಡಿದ್ದು ಅವರಿಗೆ ಶೋಭೆ ತರುವುದಿಲ್ಲ. ಅಷ್ಟೇ ಅಲ್ಲ, ಅದು ಅಪ್ರಬುದ್ಧ ನಡವಳಿಕೆ. ಪರಮೇಶ್ವರ್ ಅವರಿಗೆ ಅಧಿಕಾರ ಕೊಡದಿದ್ದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ಸ್ವಾಮಿಗಳು ನೀಡಿದ್ದಾರೆ. ಇದು ಒತ್ತಡ ತಂತ್ರವಷ್ಟೇ. ಇದರ ಹಿಂದೆ ಪರಮೇಶ್ವರ್ ಅವರೇ ಇದ್ದಿರಬಹುದು ಎಂದು ಗುಮಾನಿಪಡುವ ಮಟ್ಟಿಗೆ ಈ ಒತ್ತಡ ತಂತ್ರ ಮರುಕಳಿಸುತ್ತಿದೆ. ಆಡಳಿತ ಪಕ್ಷದ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿಸಿಕೊಡುವುದು ಮಠಾಧಿಪತಿಗಳ ಕೆಲಸ ಅಲ್ಲ. ಅವರ ಕೆಲಸ ಬೇರೆಯೇ ಇದೆ. ಅದನ್ನು ನಿರ್ವಹಿಸುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂದು ಜನರು ಭಾವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರ ಅನೇಕ ಮಠ ಮಾನ್ಯಗಳಿಗೆ ಕೋಟಿಗಟ್ಟಲೆ ಹಣ ನೀಡಿತ್ತು. ಆನಂತರ ಕೆಲವು ಮಠಾಧೀಶರು ರಾಜಕಾರಣದಲ್ಲಿ ನೇರವಾಗಿ ಮೂಗು ತೂರಿಸುವ ಪ್ರಯತ್ನ ಆರಂಭಿಸಿದರು. ಆ ಪ್ರವೃತ್ತಿ ಈಗಲೂ ಮುಂದುವರಿಯುತ್ತಿರುವುದು ದುರದೃಷ್ಟಕರ. ಸರ್ಕಾರದಲ್ಲಿ ಎಲ್ಲ ಜಾತಿ, ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂಬುದು ಸಂವಿಧಾನದ ಆಶಯ. ಆಡಳಿತ ಪಕ್ಷದ ಮುಖಂಡರು ಮತ್ತು ಮುಖ್ಯಮಂತ್ರಿ ಅದನ್ನು ನಿಭಾಯಿಸುತ್ತಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಪರಮಾಧಿಕಾರ ಮುಖ್ಯಮಂತ್ರಿಯವರದು. ಅದು ಮಠಾಧಿಪತಿಗಳಿಗೂ ಗೊತ್ತಿರುವ ವಿಚಾರವೇ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೆಪಿಸಿಸಿ ಅಧ್ಯಕ್ಷರು ವಹಿಸಿದ ಪಾತ್ರವನ್ನು ಅವರ ಪಕ್ಷ ಮರೆಯಲಾರದು. ಪಕ್ಷದ ಅಧ್ಯಕ್ಷರಾಗಿ ಪರಮೇಶ್ವರ್ ಅವರ ಕೆಲಸ ಕಾರ್ಯಗಳು ಬೇರೆಯೇ ಇವೆ. ಅದನ್ನು ಅವರು ನಿರ್ವಹಿಸಬೇಕು. ಎರಡು ಲೋಕಸಭಾ ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆ ಹಾಗೂ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಅವರ ಮುಂದಿರುವ ದೊಡ್ಡ ಸವಾಲು. ಅದನ್ನು ನಿರ್ವಹಿಸುವತ್ತ ಅವರು ತಮ್ಮ ಗಮನಹರಿಸಬೇಕು. ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಸಚಿವರಾಗಬೇಕೆಂದು ಅವರು ಪ್ರಯತ್ನಿಸುತ್ತಲೇ ಇದ್ದಾರೆ. ಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡ ತರುತ್ತಿದ್ದಾರೆ. ಹಿರಿಯ ನಾಯಕರಾದವರಿಗೆ ಇದು ಶೋಭಿಸುವುದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.