ಮತ್ತೆ ಪಾಕ್ ದುಷ್ಕೃತ್ಯ ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕಿಸ್ತಾನದ ಸೈನಿಕರು ಮತ್ತು ಪಾಕ್ ಬೆಂಬಲಿತ ಉಗ್ರಗಾಮಿಗಳು, ಗಸ್ತು ತಿರುಗುತ್ತಿದ್ದ ಭಾರತದ ಐವರು ಸೈನಿಕರನ್ನು ಸಾಯಿಸಿದ ಹೇಯ ಕೃತ್ಯ ತೀವ್ರ ಕಳವಳಕ್ಕೆ ಕಾರಣವಾಗಿದೆ. ಶ್ರೀನಗರದ ವರದಿಗಳ ಪ್ರಕಾರ, ಈ ಕೃತ್ಯದಲ್ಲಿ ಪಾಕಿಸ್ತಾನದ ಸೇನಾ ಕಮಾಂಡೊಗಳು ಹಾಗೂ ಲಷ್ಕರ್ ಎ ತೈಯಬಾ, ಹಿಜ್ಬುಲ್ ಮುಜಾಹಿದ್ದೀನ್, ಜೈಷ್ ಎ ಮೊಹಮದ್ ಭಯೋತ್ಪಾದನೆ ಸಂಘಟನೆಗಳಿಗೆ ಸೇರಿದವರು ಭಾಗಿಯಾಗಿದ್ದಾರೆ. ನಮ್ಮ ರಕ್ಷಣಾ ಸಚಿವರು ಸಂಸತ್ತಿಗೆ ನೀಡಿದ ಮಾಹಿತಿಯ ಪ್ರಕಾರ, `ಈ ಹೀನ ಕೃತ್ಯ ಎಸಗಿದವರು ಪಾಕ್ ಯೋಧರ ಸಮವಸ್ತ್ರ ಧರಿಸಿದ ಭಯೋತ್ಪಾದಕರು'. ಆದರೆ, ಸೇನೆಯ ಪ್ರಕಾರ `ದುಷ್ಕರ್ಮಿಗಳೆಲ್ಲ ಪಾಕ್ ಯೋಧರು'. ಇಂಥ ವೈರುಧ್ಯದ ಹೇಳಿಕೆಗಳು ಪರಿಸ್ಥಿತಿಯ ಗಂಭೀರತೆಯನ್ನು ಕಡಿಮೆ ಮಾಡುತ್ತವೆ. ಈ ವರ್ಷದ ಆರಂಭದಲ್ಲಿ ನಮ್ಮ ಇಬ್ಬರು ಸೈನಿಕರ ಕತ್ತು ಕತ್ತರಿಸಿದ ಪಾಕ್ ಸೇನೆಯ ಹೀನ ಕೃತ್ಯ ಇಡೀ ವಿಶ್ವದ ಖಂಡನೆಗೆ ಒಳಗಾಗಿತ್ತು. ಅದರ ಬೆನ್ನಲ್ಲೇ, ಮೇ ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಸೇನಾ ನೆಲೆಗಳತ್ತ ಗುಂಡು ಹಾರಿಸಿದ ಘಟನೆ ನಡೆದಿತ್ತು. ಇದಾದ ಬಳಿಕ ನವಾಜ್ ಷರೀಫ್ ಆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಉಭಯ ದೇಶಗಳ ಬಾಂಧವ್ಯ ಮತ್ತೆ ಸುಧಾರಿಸಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಎರಡೇ ದಿನದಲ್ಲಿ ಆ ವಾತಾವರಣ ಕೆಡಿಸಲು, ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಮ್ಮ ಸೇನೆಯ ಕಿರಿಯ ದರ್ಜೆಯ ಅಧಿಕಾರಿಯನ್ನು ಸಾಯಿಸಿದ್ದರು. ಜುಲೈ ತಿಂಗಳಿನಲ್ಲಿ ಮೂರು ಸಲ ಭಾರತದ ಯೋಧರ ಮೇಲೆ ಗುಂಡು ಹಾರಿಸಿದ್ದರು. ಭಾರತ-ಪಾಕ್ ಪರಸ್ಪರ ಮಾತುಕತೆಗೆ ಮುಂದಾದಾಗಲೆಲ್ಲ ಪಾಕ್ ಸೇನೆ ಅಥವಾ ಅಲ್ಲಿನ ಭಯೋತ್ಪಾದಕರು ಇಂತಹ ದುಷ್ಕೃತ್ಯ ಎಸಗಿ ಮಾತುಕತೆ ಪ್ರಕ್ರಿಯೆಯ ಹಳಿ ತಪ್ಪಿಸಲು ಮುಂದಾಗುವುದು ಹೊಸತೇನಲ್ಲ. ಷರೀಫ್ ಕೂಡ `ಭಾರತದ ಜತೆಗೆ ಮಾತುಕತೆಗೆ ಮುಂದಾಗುವುದಾಗಿ' ಮೇಲಿಂದ ಮೇಲೆ ಹೇಳಿಕೆ ನೀಡಿದ್ದರು. ಆದರೆ ಈ ಹೀನ ಕೃತ್ಯ, ಭಾರತದ ಜತೆ ಮೈತ್ರಿ ಹೊಂದಲು ಬಯಸಿರುವ ಅವರ ಪ್ರಾಮಾಣಿಕತೆಯನ್ನೇ ಶಂಕಿಸುವಂತೆ ಮಾಡಿದೆ. ಅಲ್ಲಿನ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಏಕೆಂದರೆ ಗಡಿಯನ್ನು ದೊಡ್ಡ ಗುಂಪೊಂದು ದಾಟಿ ಬರುವುದು ಅಲ್ಲಿನ ಸೇನೆಯ ನೆರವು ಇಲ್ಲದೆ ಸಾಧ್ಯವೇ ಇಲ್ಲ. ಈ ದಾಳಿಯಿಂದಾಗಿ ಮುಂದಿನ ತಿಂಗಳು ನ್ಯೂಯಾರ್ಕ್‌ನಲ್ಲಿ ಉಭಯ ದೇಶಗಳ ಪ್ರಧಾನಿಗಳ ಮಧ್ಯೆ ನಡೆಯಲಿರುವ ಮಾತುಕತೆಯ ಮೇಲೆ ಕರಾಳ ಛಾಯೆ ಬೀಳಲಿದೆ. ಮುಂಬೈ ದಾಳಿಗೆ ಕಾರಣರಾದವರ ವಿಚಾರಣೆಗೆ ಮುಂದಾಗುವಂತೆ ಭಾರತ ಮಾಡಿಕೊಂಡ ಮನವಿಗೆ ಅಲ್ಲಿನ ಸರ್ಕಾರ ಸರಿಯಾಗಿ ಸ್ಪಂದಿಸಲೇ ಇಲ್ಲ. ಮಾತುಕತೆ ಪ್ರಕ್ರಿಯೆಯ ದಿಕ್ಕುತಪ್ಪಿಸುವ ಶಕ್ತಿಗಳು ಸಕ್ರಿಯವಾಗಿರುವವರೆಗೆ ಷರೀಫ್ ಸರ್ಕಾರದ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ವಿಶ್ವಾಸಾರ್ಹ ಮತ್ತು ಸ್ನೇಹಮಯ ವಾತಾವರಣದಲ್ಲಿ ಮಾತ್ರ ಮಾತುಕತೆ ಸಾಧ್ಯ ಎಂದು ಮುಲಾಜಿಲ್ಲದೆ ಆ ದೇಶಕ್ಕೆ ಹೇಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.