ಹಿಂಸೆ ಸಾಕು: ನೆಮ್ಮದಿ ಬೇಕು ಜಮ್ಮು ಕಾಶ್ಮೀರದ ಕಿಷ್ತ್‌ವಾರ್ ಪಟ್ಟಣದಲ್ಲಿ ಶುಕ್ರವಾರ ಆರಂಭವಾದ ಕೋಮು ಹಿಂಸಾಚಾರ ಸುತ್ತಲಿನ ಜಿಲ್ಲೆಗಳಿಗೂ ವ್ಯಾಪಿಸಿದೆ. ಅಮೂಲ್ಯ ಜೀವ ಹಾನಿ, ಅಪಾರ ಆಸ್ತಿ ಹಾನಿ ಸಂಭವಿಸಿದೆ. ಈದ್ ಉಲ್ ಫಿತ್ರ್ ಪ್ರಾರ್ಥನೆಗೆ ಹೋಗುತ್ತಿದ್ದ ಜನರ ಗುಂಪೊಂದು `ಸ್ವತಂತ್ರ ಕಾಶ್ಮೀರ' ಪರ ಘೋಷಣೆ ಕೂಗುವುದನ್ನು ಇನ್ನೊಂದು ಗುಂಪು ವಿರೋಧಿಸಿದಾಗ ಆರಂಭವಾದ ಘರ್ಷಣೆ ಕಾಳ್ಗಿಚ್ಚಿನಂತೆ ಹರಡಿದ್ದು, ಮೂರು ದಿನಗಳ ನಂತರವೂ ಪರಿಸ್ಥಿತಿ ತಹಬಂದಿಗೆ ಬರುತ್ತಿಲ್ಲ. ಕಿಡಿಗೇಡಿಗಳು ವದಂತಿ ಹರಡುವುದನ್ನು ತಡೆಯುವ ಉದ್ದೇಶದಿಂದ ಮೊಬೈಲ್, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಕಿಷ್ತ್‌ವಾರ್ ಮಾತ್ರವಲ್ಲದೇ ಸುತ್ತಲಿನ ಊರುಗಳಲ್ಲೂ ನಿರಂತರ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಈ ಹಿಂಸಾಚಾರ ಜಮ್ಮು ನಗರದಲ್ಲೂ ಪರಿಣಾಮ ಬೀರಿದೆ. ಅಲ್ಲಿಯೂ ಹಿಂಸೆ ನಡೆದಿದ್ದು ಸೇನೆಯನ್ನು ನಿಯೋಜಿಸಲಾಗಿದೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಆಡಳಿತ ಮತ್ತು ಪ್ರತಿಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಉರಿಯುವ ಮನೆಯ ಗಳ ಹಿರಿಯುವ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ರಾಜಕಾರಣಿಗಳು ಶ್ರೀಸಾಮಾನ್ಯರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುವ ಬಿಜೆಪಿ ನಾಯಕ ಅರುಣ್ ಜೇಟ್ಲಿ ಮತ್ತು ಪಿ.ಡಿ.ಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಶಾಂತಿಪಾಲನೆಗಾಗಿ ಕೈಗೊಳ್ಳುತ್ತಿರುವ ಇಂಥ ನಿರ್ಧಾರಗಳಲ್ಲಿ ರಾಜಕೀಯವನ್ನು ಹುಡುಕುವುದು ದುರದೃಷ್ಟಕರ. ಜಮ್ಮು ಕಾಶ್ಮೀರ ವಿಧಾನಸಭೆಗೆ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಬೇಕಿದೆ. ಲೋಕಸಭೆ ಚುನಾವಣೆಯೂ ಹತ್ತಿರ ಬರುತ್ತಿದೆ, ಭಾರತ- ಪಾಕ್ ಗಡಿ ಸಂಘರ್ಷ ಉಲ್ಬಣಿಸಿದೆ. ಇಂಥ ಹೊತ್ತಿನಲ್ಲಿಯೇ ಕೋಮು ಹಿಂಸೆ ಕಾಕತಾಳೀಯ ಇರಲಾರದು. 90ರ ದಶಕದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಮತ್ತು ಕಾಶ್ಮೀರದಲ್ಲಿ ಪ್ರಬಲರಾಗಿರುವ ಪ್ರತ್ಯೇಕತಾವಾದಿ ಗುಂಪುಗಳು ನೀಡಿದ ಹಿಂಸಾತ್ಮಕ ಕಿರುಕುಳ ತಡೆಯಲಾಗದೆ ಅಲ್ಪಸಂಖ್ಯಾತ ಹಿಂದೂಗಳು ಕಾಶ್ಮೀರ ಪ್ರದೇಶದಿಂದ ಮನೆಮಠ ತೊರೆದು ಓಡಿಬಂದಿದ್ದರು. `ಈಗ ಮತ್ತೆ ಅದೇ ರೀತಿ ಯಾರನ್ನೇ ಬಲವಂತವಾಗಿ ಓಡಿಸಲು ಕೇಂದ್ರ ಸರ್ಕಾರ ಅವಕಾಶ ಕೊಡುವುದಿಲ್ಲ' ಎಂದು ಗೃಹ ಸಚಿವ ಪಿ. ಚಿದಂಬರಂ ಸಂಸತ್ತಿನಲ್ಲಿ ಭರವಸೆ ಕೊಟ್ಟಿದ್ದಾರೆ. ಇಡೀ ಘಟನೆ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆದೇಶಿಸಿದ್ದಾರೆ. `ಹಿಂಸೆ ಆರಂಭವಾದಾಗ ಕಿಷ್ತ್‌ವಾರ್‌ನಲ್ಲಿ ಇದ್ದರು' ಎಂಬ ಆರೋಪ ಎದುರಿಸುತ್ತಿರುವ ಜಮ್ಮು ಕಾಶ್ಮೀರದ ಗೃಹ ಸಚಿವ ಸಜ್ಜಾದ್ ಕಿಚ್ಲೂ ರಾಜೀನಾಮೆ ನೀಡಿದ್ದಾರೆ. ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಜನರನ್ನು ಕೆರಳಿಸುವ ಹೇಳಿಕೆಗಳಿಗೆ ವಿರಾಮ ಹಾಕಬೇಕು. ಎರಡು ಕೋಮುಗಳ ಜನರನ್ನು ಪರಸ್ಪರ ಎತ್ತಿಕಟ್ಟುವ ಸಂಚಿಗೆ ಆ ರಾಜ್ಯ ದುಬಾರಿ ಬೆಲೆ ತೆತ್ತಿದೆ. ಸಂದರ್ಭದ ಲಾಭ ಪಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಸಾಕು. ಜನರಿಗೆ ಶಾಂತಿ, ನೆಮ್ಮದಿ ಬೇಕಾಗಿದೆ. ಅದನ್ನು ಕೊಡಬೇಕು. ಅದರ ಜತೆಜತೆಗೇ, ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.