ಜನರ ಕಷ್ಟಕ್ಕೆ ಮಿಡಿಯುವರೇ? ರಾಜ್ಯದಲ್ಲಿ ಜಲಾಶಯಗಳು ತುಂಬಿ ತುಳುಕಿವೆ. ಜನಪ್ರತಿನಿಧಿಗಳು ಬಾಗಿನ ಅರ್ಪಿಸುವ ಸಂಭ್ರಮದಲ್ಲಿ ಮೀಯುತ್ತಿದ್ದಾರೆ. ಮೊರೆವ ಹೆಚ್ಚುವರಿ ನೀರು ಕ್ರೆಸ್ಟ್‌ಗೇಟ್‌ಗಳಿಂದ ಹೊರಬರುತ್ತಿದೆ. ಜಲಸುಗ್ಗಿಯ ಈ ನೋಟ ನಾಡಿನ ಜನರಲ್ಲಿ ಹಿಗ್ಗು ಮೂಡಿಸಿದೆ. ಅಂತಹದೊಂದು ಖುಷಿ ಭಾವ ಸಹಜವೇ. ಆದರೆ, ಜಲಾಶಯಗಳು ತುಂಬಿದ್ದನ್ನೇ ಸಕಲ ಜನರ, ಎಲ್ಲಾ ಜಿಲ್ಲೆ, ಪ್ರದೇಶಗಳ ಸಮೃದ್ಧಿ ಎಂದು ಭಾವಿಸಲಾದೀತೇ? ರಾಜ್ಯದ ಆಡಳಿತ ಪಾಳೆಯದಲ್ಲಿ ಅಂತಹದೊಂದು ಭ್ರಮೆ ಆವರಿಸಿದ ಶಂಕೆ ಮೂಡಿದೆ. ಭ್ರಮೆಯ ಈ ಪೊರೆಗೆ ಅತಿವೃಷ್ಟಿ, ಅನಾವೃಷ್ಟಿಯ ಕಷ್ಟಕೋಟಲೆಗಳೇ ಕಾಣುತ್ತಿಲ್ಲ. ದಾಖಲೆ ಮಳೆಗೆ ಮಲೆನಾಡು ಹಾಗೂ ಕರಾವಳಿ ಭಾಗದ ಕೃಷಿಕರು ತತ್ತರಿಸಿದ್ದಾರೆ. ಕೊಳೆ ರೋಗಕ್ಕೆ ಅಡಿಕೆ ಬೆಳೆ ಹಾಳಾಗಿದೆ. ಶುಂಠಿ, ಮೆಣಸು ಮತ್ತಿತರ ಬೆಳೆಗಳದೂ ಅದೇ ವ್ಯಥೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಮಳೆಗೆ ರಸ್ತೆಗಳು ಕೊಚ್ಚಿಹೋಗಿವೆ. ಕೆಲವೆಡೆ ರಸ್ತೆ ಜತೆಗೆ ವಿದ್ಯುತ್ ಸಂಪರ್ಕವೂ ತುಂಡರಿಸಿದೆ. ಇದು ಅತಿವೃಷ್ಟಿ ತಂದ ಅನಾಹುತ. ಮಳೆ ಕೊರತೆಯ ತಲ್ಲಣ ಮತ್ತೂ ಭೀಕರ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಧಾರವಾಡ, ಯಾದಗಿರಿ, ಗದಗ ಮತ್ತಿತರ ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ. ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಮಳೆಯೇ ಕೃಷಿಗೆ ಮೂಲ ಆಧಾರ. ಸತತ ಎರಡು ವರ್ಷಗಳಿಂದ ಬರ ಬವಣೆಗೆ ಸಿಲುಕಿದ ಅಲ್ಲಿನ ಜನ, ಅದರಿಂದ ಈ ಸಲವಾದರೂ ಬಿಡುಗಡೆ ಇದೆಯೋ ಇಲ್ಲವೋ ಎಂದು ಭಯಭೀತರಾಗಿದ್ದಾರೆ. ಕೆರೆಕುಂಟೆಗಳು ಬತ್ತಿವೆ. ಕೊಳವೆ ಬಾವಿಗಳು ಏದುಸಿರು ಬಿಡುತ್ತಿವೆ. ಮಳೆಗಾಲದ ಎರಡೂವರೆ ತಿಂಗಳು ಕಳೆದುಹೋಗಿವೆ. ಕೆಲವು ಕಡೆ ಚದುರಿದಂತೆ ಮಾತ್ರ ಮಳೆ ಆಗಿದೆ. ಈ ಪ್ರದೇಶಗಳಲ್ಲಿ ಬಿತ್ತನೆ ಆಗಿದ್ದರೂ, ಮಳೆಯಿಲ್ಲದೆ ಬೆಳೆ ಒಣಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಬಿತ್ತನೆಯೂ ಪೂರ್ತಿ ಆಗಿಲ್ಲ. ಇಂತಹ ಕಡೆಗಳಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಇದೆ. ಇತ್ತ ಕೆಆರ್‌ಎಸ್‌ನಿಂದ ಬಿಟ್ಟ ಲಕ್ಷಾಂತರ ಕ್ಯೂಸೆಕ್ ನೀರು ತಮಿಳುನಾಡಿನ ಮೆಟ್ಟೂರು ಜಲಾಶಯ ತಲುಪಿದೆ. ಆದರೆ ನಮ್ಮ ನಾಲೆಗಳ ಕೊನೆ ಭಾಗಕ್ಕೆ ನೀರು ತಲುಪಿಲ್ಲ. ಕೆರೆಗಳಿಗೆ ನೀರು ತುಂಬಿಸಬಹುದಿತ್ತು. ಅದೂ ಆಗಿಲ್ಲ. ಪರ್ಯಾಯ ಬೆಳೆ, ಪರಿಹಾರ ಕಾರ್ಯಗಳ ಕುರಿತು ಕ್ರಿಯಾ ಯೋಜನೆಗಳು ರೂಪುಗೊಂಡಂತೆಯೂ ಕಾಣುತ್ತಿಲ್ಲ. ತುರ್ತಾಗಿ ಆಗಬೇಕಿರುವ ಇಂತಹ ಕೆಲಸಗಳ ಕಡೆ ಗಮನಹರಿಸಲು ಮತ್ತು ಜನರ ಕಷ್ಟ ಕೇಳಲು ನಮ್ಮ ನಾಯಕರಿಗೆ ಬಿಡುವು ಇದ್ದಂತಿಲ್ಲ. ಲೋಕಸಭೆಯ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಗುಂಗು ಹತ್ತಿಸಿಕೊಂಡು ಮಂಡ್ಯ ಕಡೆ `ಮೆರವಣಿಗೆ' ಹೊರಟಿದ್ದಾರೆ. ಸಚಿವರಿಗೆ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಲಾಗಿದ್ದು, ಜನರ ಸಮಸ್ಯೆಗಳಿಗೆ ಬೆನ್ನುಹಾಕಲು ಇದೂ ಒಂದು ನೆಪವಾಗಿದೆ. ಇದನ್ನೆಲ್ಲ ಪ್ರಶ್ನಿಸಬೇಕಾಗಿದ್ದ ವಿರೋಧ ಪಕ್ಷಗಳು `ಕೂಡಿಕೆ'ಯ ಕೊಸರಾಟದಲ್ಲಿ ನಿರತವಾಗಿವೆ. ಎಲ್ಲರೂ ಸೇರಿ ಜನರಲ್ಲಿ ಅನಾಥ ಭಾವ ಮೂಡಿಸಿದ್ದಾರೆ. ನಾಯಕರೆನಿಸಿಕೊಂಡವರು ಈಗಲಾದರೂ ಅವರ ಕಷ್ಟಗಳಿಗೆ ಮಿಡಿಯುವರೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.