ರಕ್ಷಣಾ ತಂತ್ರಜ್ಞಾನದಲ್ಲಿ ಮೈಲಿಗಲ್ಲು ಹಲವು ಯುದ್ಧ ವಿಮಾನಗಳನ್ನು ಹೊತ್ತು ಹೋಗುವ ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ದೇಸಿ ತಂತ್ರಜ್ಞಾನ ಬಳಸಿ ತಯಾರಿಸುವ ಮೂಲಕ ಭಾರತವು ರಕ್ಷಣಾ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. 40 ಸಾವಿರ ಟನ್ ತೂಕದ ಇಂತಹ ನೌಕೆಯ ತಯಾರಿಕಾ ಸಾಮರ್ಥ್ಯ ಎಲ್ಲಾ ರಾಷ್ಟ್ರಗಳಿಗೂ ಇಲ್ಲ. ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಚೀನಾ ದೇಶಗಳಿಗೆ ಮಾತ್ರವೇ ಯುದ್ಧ ವಿಮಾನಗಳನ್ನು ಕೊಂಡೊಯ್ಯುವ ಹಡಗುಗಳ ನಿರ್ಮಾಣ ತಂತ್ರಜ್ಞಾನ ಮತ್ತು ತಯಾರಿಕಾ ಸಾಮರ್ಥ್ಯವಿತ್ತು. ಇಂತಹ ಕೆಲವೇ ಬಲಿಷ್ಠ ದೇಶಗಳ ಸಾಲಿಗೆ ಇದೀಗ ಭಾರತವೂ ಸೇರಿದಂತಾಗಿದೆ. ಇದು ಸರ್ಕಾರಿ ಸ್ವಾಮ್ಯದ ಕೊಚ್ಚಿಯ ಹಡಗುಕಟ್ಟೆಯ್ಲ್ಲಲೇ ನಿರ್ಮಾಣವಾಗಿದ್ದು, ಭಾರತದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಇದರಿಂದಾಗಿ ಭಾರತದ ಕಡಲ ಗಡಿ ರಕ್ಷಣೆಗೆ ಪ್ರಬಲ ಅಸ್ತ್ರ ದೊರಕಿದಂತಾಗಿದೆ. ವಿಕ್ರಾಂತ್ ಹೆಸರು ನೌಕಾಪಡೆಗೆ ಹೊಸದೇನಲ್ಲ. 1961ರಲ್ಲಿ ವಿಕ್ರಾಂತ್ ಎನ್ನುವ ವಿಮಾನ ವಾಹಕ ಯುದ್ಧ ನೌಕೆಯಿತ್ತು. ಭಾರತ-ಪಾಕ್ ಯುದ್ಧದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದ ಅದಕ್ಕೆ 1997ರಲ್ಲಿ ನಿವೃತ್ತಿ ಘೋಷಿಸಲಾಯಿತು. ಅದೇ ಹೆಸರನ್ನು ಮತ್ತೆ ಬಳಸಲಾಗಿದೆ. ಅದೇ ನೌಕೆಯಲ್ಲಿ ಇದ್ದ `ಅರೆಸ್ಟರ್ ವೈರ್' ತಂತ್ರಜ್ಞಾನವನ್ನು ಹೊಸ ನೌಕೆಯಲ್ಲೂ ಬಳಸಲಾಗಿದೆ. ಯುದ್ಧನೌಕೆಯೆಂದರೆ ಅದೊಂದು ಪುಟ್ಟ ಪಟ್ಟಣವಿದ್ದಂತೆ. ವಿಕ್ರಾಂತ್ ಉದ್ದ ಎರಡು ಫುಟ್‌ಬಾಲ್ ಕ್ರೀಡಾಂಗಣದಷ್ಟು ದೊಡ್ಡದು. ಅದರಲ್ಲಿ ಕೊಚ್ಚಿ ಪಟ್ಟಣಕ್ಕೆ ವಿದ್ಯುತ್ ನೀಡುವಷ್ಟು, ಅಂದರೆ 24 ಕಿಲೊ ವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಮೂವತ್ತರಷ್ಟು ಯುದ್ಧ ವಿಮಾನ ಅಥವಾ ಹೆಲಿಕಾಪ್ಟರ್‌ಗಳನ್ನು ಸಾಗಿಸುವ ಸಾಮರ್ಥ್ಯ ಅದಕ್ಕೆ ಇದೆ. ಇದನ್ನು ರಷ್ಯಾದ ಮಿಗ್ 29 ಕೆ, ಭಾರತದ ಎಲ್‌ಸಿಎ ಯುದ್ಧ ವಿಮಾನಗಳು, ಹಗುರ ಹೆಲಿಕಾಪ್ಟರ್ ಸಾಗಿಸುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಒಂದೇ ಸಮನೆ 7,500 ನಾಟಿಕಲ್ ಮೈಲು ಸಾಗುವ ಸಾಮರ್ಥ್ಯವಿದೆ. 2003ರಲ್ಲೇ ನೌಕೆಯ ನಿರ್ಮಾಣಕ್ಕೆ ಅಂಗೀಕಾರ ದೊರಕಿದರೂ, ಯೋಜನೆಗೆ ಚಾಲನೆ ದೊರಕಿದ್ದೇ 2009ರಲ್ಲಿ. ಈಗ ಉದ್ಘಾಟನೆಯಾದರೂ 2016ರ ವರೆಗೆ ನೌಕೆಯನ್ನು ಹಲವು ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ. ಇದರಲ್ಲಿ ಯುದ್ಧವಿಮಾನಗಳ ಟೇಕಾಫ್, ಲ್ಯಾಂಡಿಂಗ್ ಮತ್ತು ಕ್ಷಿಪಣಿ ಬಳಕೆಯ ಪ್ರಯೋಗವೂ ನಡೆಯಲಿದೆ.2018ರಲ್ಲಿ ಇದನ್ನು ನೌಕಾಪಡೆಗೆ ಸೇರಿಸಲಾಗುತ್ತದೆ. ಈ ವರ್ಷದ ಅಂತ್ಯದಲ್ಲಿ ರಷ್ಯಾ ಮೂಲದ ಇದೇ ಮಾದರಿಯ ವಿಕ್ರಮಾದಿತ್ಯ ಸಹ ಭಾರತಕ್ಕೆ ಬರಲಿದೆ. ಕಳೆದ ವಾರವಷ್ಟೇ ಅಣುಶಕ್ತಿ ಚಾಲಿತ ಸಬ್‌ಮೆರಿನ್ ಅರಿಹಂತದ ರಿಯಾಕ್ಟರ್ ಕಾರ್ಯಾರಂಭ ಮಾಡಿದೆ. ಈ ಎಲ್ಲಾ ಯೋಜನೆಗಳು ಭಾರತದ ರಕ್ಷಣೆಗೆ ಬಲ ತುಂಬಲಿವೆ. ಬಹುದೂರ ಹಾರುವ ಸುಖೋಯ್, ಮಿಗ್ ಯುದ್ಧವಿಮಾನಗಳು ಭಾರತದ ಬತ್ತಳಿಕೆಯಲ್ಲಿ ಇದ್ದರೂ ನೆರೆಯ ಚೀನಾವನ್ನು ಪ್ರವೇಶಿಸಿ ವಾಪಸಾಗುವುದು ತ್ರಾಸದಾಯಕ. ಇಂತಹ ಸಂದರ್ಭದಲ್ಲಿ ಬಹುದೂರ ಪ್ರಯಾಣ ಮಾಡುವ ವಿಕ್ರಾಂತ್ ಅಂತಹ ನೌಕೆಗಳು ಇದ್ದರೆ ಸಹಜವಾಗಿಯೇ ಭಾರತ ಪ್ರಭಾವಿಯಾಗುತ್ತದೆ. ನೆರೆಯ ಚೀನಾ ಹಾಗೂ ಪಾಕಿಸ್ತಾನ ಪದೇ ಪದೇ ಗಡಿತಂಟೆ ತೆಗೆಯುತ್ತಿರುವ ಸಂದರ್ಭದಲ್ಲಿ ಸಾಗರದ ರಕ್ಷಣೆಗೆ ಈ ಕ್ರಮಗಳು ನೆರವಾಗುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.