ಮಳೆ ನೀರು ಸಂಗ್ರಹ ಆಗಲೇಬೇಕು ಮಳೆ ನೀರು ಸಂಗ್ರಹವನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಆಡಳಿತ ಕೇಂದ್ರ ವಿಧಾನಸೌಧದಲ್ಲೇ ಈ ಯೋಜನೆ ಮಣ್ಣು ಮುಕ್ಕಿದೆ! ಇದು, ಯೋಜನೆಯ ಒಟ್ಟಾರೆ ವೈಫಲ್ಯದ ದ್ಯೋತಕ. ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ದಿನನಿತ್ಯ ಓಡಾಡುವ ಜಾಗದಲ್ಲೇ ಅನುಷ್ಠಾನ ಆಗಿಲ್ಲ ಎಂಬುದು ಸರ್ಕಾರದ ಬದ್ಧತೆ ಕೊರತೆಯನ್ನು ಎತ್ತಿತೋರಿಸುತ್ತದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತಿದೆ. ಅಂತರ್ಜಲ ಕೆಳಗೆ ಇಳಿಯುತ್ತಿದೆ. ನೀರಿನ ದುರ್ಬಳಕೆ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಅಂತರ್ಜಲ ಸಂಪತ್ತು ಬತ್ತಿ ಹೋದರೂ ಹೋಗಬಹುದು. ಬೆಂಗಳೂರು ಮಹಾನಗರದ ಜನಸಂಖ್ಯೆ ಕೋಟಿ ಸಮೀಪಿಸಿದೆ. ನಗರದ ನಿವಾಸಿಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಸುವುದು ಸವಾಲಿನ ಕೆಲಸ. 120 ಕಿ.ಮೀ. ದೂರದಿಂದ ನೀರು ಪೂರೈಕೆ ಆಗುತ್ತಿದೆ. ಅದನ್ನು ಪೋಲು ಮಾಡುವುದೆಂದರೆ ನಮ್ಮ ಭವಿಷ್ಯವನ್ನು ನಾವೇ ಕರಾಳವಾಗಿಸಿಕೊಂಡಂತೆಯೇ ಸರಿ. ಒಂದು ಅಂದಾಜಿನ ಪ್ರಕಾರ ನಗರದಲ್ಲಿ ವರ್ಷವಿಡೀ ಸುರಿಯುವ ಮಳೆ ನೀರಿನ ಪ್ರಮಾಣ 27 ಟಿ.ಎಂ.ಸಿ ಅಡಿ. ಈ ನೀರನ್ನು ಸಂಗ್ರಹಿಸಿದರೆ ನಗರದ ನೀರಿನ ಸಮಸ್ಯೆ ತಾನಾಗಿಯೇ ನಿವಾರಣೆ ಆಗುತ್ತದೆ. ಬೆಂಗಳೂರಿನಲ್ಲಿ 40/60 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಮನೆ ಹೊಂದಿದವರು ಕಡ್ಡಾಯವಾಗಿ ಮಳೆ ನೀರು ಸಂಗ್ರಹಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಇದಕ್ಕೆ ವಿಧಿಸಿದ್ದ ಗಡುವು ಕೂಡ ಮುಗಿದಿದೆ. ಸಂಗ್ರಹ ವ್ಯವಸ್ಥೆ ಅಳವಡಿಸದಿದ್ದರೆ ಕುಡಿಯವ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ. ಕೆಲವು ಮನೆಗಳಿಗೆ ಜಲಮಂಡಳಿಯಿಂದ ನೋಟಿಸ್ ಕೂಡಾ ಹೋಗಿದೆ. ಚಾಟಿ ಹಿಡಿದರೆ ಮಾತ್ರ ಸರ್ಕಾರದ ನಿಯಮಗಳಿಗೆ ಮಣಿಯುತ್ತೇವೆ ಎನ್ನುವ ಧೋರಣೆ ಸರ್ವಥಾ ಸಲ್ಲದು. ಜನರು ತಮ್ಮ ಜವಾಬ್ದಾರಿ ಅರಿತು ವರ್ತಿಸಬೇಕು. ಸ್ವಯಂ ಪ್ರೇರಣೆಯಿಂದ ಮಳೆ ನೀರು ಸಂಗ್ರಹಕ್ಕೆ ಮುಂದಾಗಬೇಕು. ಇದರ ಅಗತ್ಯವನ್ನು ಸರ್ಕಾರ ಮನವರಿಕೆ ಮಾಡಿಕೊಡಬೇಕು. ನೀರಿನ ಮಿತವ್ಯಯ ಮತ್ತು ಮಳೆ ನೀರು ಸಂಗ್ರಹ ಜನಸಂಸ್ಕೃತಿಯ ಭಾಗವಾಗಬೇಕು. ಸರ್ಕಾರವಾದರೂ ಅಷ್ಟೇ; ಜನಪ್ರಿಯ ಕಾರ್ಯಕ್ರಮಗಳ ಜಾರಿಗೆ ತೋರುವ ಕಾಳಜಿ, ಉತ್ಸಾಹವನ್ನು ಅತ್ಯಗತ್ಯವಾಗಿ ಆಗಬೇಕಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತೋರುವುದಿಲ್ಲ. ಗಂಭೀರ ಕೆಲಸಗಳನ್ನು ಲಘುವಾಗಿ ಪರಿಗಣಿಸಿದರೆ ಪರಿಣಾಮಗಳೂ ಗಂಭೀರವಾಗಿಯೇ ಇರುತ್ತವೆ. ನೀರಿನ ಕೊರತೆ ನೀಗಲು ಸೂಕ್ತ ಮತ್ತು ಸಮರ್ಥ ಪರಿಹಾರವೆಂದರೆ ಮಳೆ ನೀರು ಸಂಗ್ರಹ. ನೈಸರ್ಗಿಕವಾಗಿ ಲಭ್ಯವಿರುವ ಈ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಲ್ಲೇ ನಮ್ಮ ಭವಿಷ್ಯ ಅಡಗಿದೆ. ತನ್ನ ಅಧೀನದ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸುವ ಮೂಲಕ ನಾಗರಿಕ ಸಮಾಜಕ್ಕೆ ಸರ್ಕಾರ ಮಾದರಿ ಆಗಬೇಕು. ಅಂತರ್ಜಲ ಮರುಪೂರಣಕ್ಕೂ ಆದ್ಯತೆ ನೀಡಬೇಕು. ಪೌರ ಸಂಸ್ಥೆಗಳು ಜಡತ್ವ ಕೊಡವಿಕೊಂಡು ಇಂತಹ ಉಪಯುಕ್ತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚ ಮುತುವರ್ಜಿ ವಹಿಸಬೇಕು. ಇಚ್ಛಾಶಕ್ತಿ ಮತ್ತು ಬದ್ಧತೆ ಇದ್ದರೆ ಯಾವುದೂ ಅಸಾಧ್ಯ ಅಲ್ಲ. ಸರ್ಕಾರ ಅದನ್ನು ಪ್ರದರ್ಶಿಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.