ಚಿನ್ನ ಆಮದು ನಿರ್ಬಂಧ ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸಿ, ರೂಪಾಯಿ ಅಪಮೌಲ್ಯಕ್ಕೆ ಮೂಗುದಾರ ಹಾಕಲು ಕೇಂದ್ರ ಸರ್ಕಾರವು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳ ಮೇಲಿನ ಆಮದು ಸುಂಕವನ್ನು ಮತ್ತೆ ಹೆಚ್ಚಿಸಿ ಅವುಗಳ ಆಮದನ್ನು ಇನ್ನಷ್ಟು ನಿರ್ಬಂಧಿಸಲು ಮುಂದಾಗಿದೆ. ರೂ 54 ಸಾವಿರ ಕೋಟಿಗಳಷ್ಟಾಗಿರುವ ಚಾಲ್ತಿ ಖಾತೆ ಕೊರತೆಯು (ಡಾಲರ್‌ಗಳಲ್ಲಿ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಮೊತ್ತದಲ್ಲಿನ ವ್ಯತ್ಯಾಸ) ಅರ್ಥವ್ಯವಸ್ಥೆಯ ಸ್ಥಿರತೆಗೇ ಬೆದರಿಕೆ ಒಡ್ಡಿದೆ. ಈ ಅಂತರ ತುಂಬಿಕೊಳ್ಳುವ ಉದ್ದೇಶದಿಂದ ಬಂಡವಾಳ ಹರಿವು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿದ ಬೆನ್ನಲ್ಲೇ, ಚಿನ್ನದ ಆಮದನ್ನು ಇನ್ನಷ್ಟು ನಿರ್ಬಂಧಿಸುವ ನಿರ್ಧಾರ ಹೊರಬಿದ್ದಿದೆ. 20 ತಿಂಗಳಲ್ಲಿ ನಾಲ್ಕನೇ ಬಾರಿಗೆ ಮತ್ತು ಜನವರಿಯಿಂದ ಈಚೆಗೆ ಮೂರನೇ ಬಾರಿ ಸೀಮಾಸುಂಕ ಹೆಚ್ಚಿಸಿದಂತಾಗಿದೆ. ರೂಪಾಯಿ ಬೆಲೆ ಇನ್ನೂ ಸ್ಥಿರಗೊಳ್ಳದ ಕಾರಣಕ್ಕೆ ಚಿನ್ನ ಖರೀದಿಸುವ ಹಸಿವು ತಣಿಯುತ್ತಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್, ನಗದು ಲಭ್ಯತೆ ಕಠಿಣಗೊಳಿಸಿದ ಕ್ರಮಕ್ಕೆ ಪೂರಕವಾಗಿ ಸಿಎಡಿ ತಗ್ಗಿಸಲು ಇಂತಹ ಕ್ರಮ ಅನಿವಾರ್ಯವೂ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಲೆ ಕಡಿಮೆಯಾಗಿ ಕೊಳ್ಳುವವರಲ್ಲಿ ನೆಮ್ಮದಿ ಮೂಡಿಸಿದ್ದ ಚಿನ್ನ, ಈಗ ಮತ್ತೆ ಹಬ್ಬಹರಿದಿನಗಳಲ್ಲಿ ದುಬಾರಿ ಹಾದಿಗೆ ಮರಳುವಂತಾಗಿದೆ. ಜತೆಗೆ ಕಳ್ಳಸಾಗಣೆ ಹೆಚ್ಚಳ ಆತಂಕವನ್ನೂ ಹೆಚ್ಚಿಸಿದೆ. ರೂಪಾಯಿ ಅಪಮೌಲ್ಯ ನಿರಂತರವಾಗಿ ನಡೆಯುತ್ತಿರುವುದು ಅರ್ಥವ್ಯವಸ್ಥೆಯಲ್ಲಿನ ಒಳಗುದಿಯ ತೋರಿಕೆಯ ಲಕ್ಷಣದಂತೆ ಕಾಣುತ್ತಿದೆ. ಹೀಗಾಗಿ ಬರೀ ರೂಪಾಯಿ ಮೌಲ್ಯ ಸ್ಥಿರಗೊಳಿಸುವ ಕ್ರಮಗಳಷ್ಟೇ ಮೂಲ ಜಾಡ್ಯಕ್ಕೆ ರಾಮಬಾಣವಾಗಲಾರವು. ಆಮದು ಸುಂಕ ಹೆಚ್ಚಳವು ಅಲ್ಪಾವಧಿಯಲ್ಲಿ ಚಿನ್ನದ ಬೇಡಿಕೆ ಮೇಲೆ ಪರಿಣಾಮ ಬೀರಿದರೂ ದೀರ್ಘಾವಧಿಯಲ್ಲಿ ಬೇಡಿಕೆ ನಿರ್ಬಂಧಿಸಲಾರದು. ಈ ಕ್ರಮವು ದೇಶಿ ಚಿನಿವಾರಪೇಟೆಯ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಸಮಸ್ಯೆಗಳಿಗೂ ಕಾರಣವಾಗಲಿದೆ. ಕಚ್ಚಾ ಚಿನ್ನ ಮತ್ತು ಸಿದ್ಧ ಆಭರಣಗಳ ನಡುವಣ ಬೆಲೆ ವ್ಯತ್ಯಾಸ ತಗ್ಗಿಸಿ, ಚಿನ್ನಾಭರಣಗಳ ಆಮದು ಹೆಚ್ಚಿಸಿ, ದೇಶಿ ಚಿನ್ನಾಭರಣ ತಯಾರಿಕಾ ಉದ್ದಿಮೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಚಿನ್ನಾಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕುಶಲ ಕರ್ಮಿಗಳ ಜೀವನಾಧಾರದ ಮೇಲೂ ಇದು ಅಡ್ಡಪರಿಣಾಮ ಬೀರಲಿದೆ. ಬಾಹ್ಯ ಸಾಲ ಮತ್ತು ವಿದೇಶಿ ಬಂಡವಾಳ ಹೂಡಿಕೆ ಉದಾರೀಕರಣಗೊಳಿಸಿರುವುದು ಒಳ್ಳೆಯ ನಿರ್ಧಾರ. ಮೂಲ ಸೌಕರ್ಯ ಯೋಜನೆಗಳಿಗೆ ಚಾಲನೆ ನೀಡದಿದ್ದರೆ ಈ ಬಾಹ್ಯ ಬಂಡವಾಳವು ದೇಶದ ಒಳಗೆ ಹರಿದು ಬಂದ ಉದ್ದೇಶವೇ ಫಲಿಸದು. ಮೂಲ ಸೌಕರ್ಯ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳ್ಳದೇ ಬ್ಯಾಂಕ್‌ಗಳ ವಸೂಲಾಗದ ಸಾಲದ ಪ್ರಮಾಣ ಹೆಚ್ಚುತ್ತಿರುವುದು ಇನ್ನೊಂದು ತಲೆನೋವಾಗಲಿದೆ. ಈ ಕ್ರಮಗಳು ಉದ್ದೇಶಿತ ಫಲ ನೀಡದಿದ್ದರೆ, ಬೃಹತ್ ಮೂಲ ಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಅವಕಾಶ ನೀಡುವುದು, ಡೀಸೆಲ್, ಸೀಮೆಎಣ್ಣೆ ಮೇಲಿನ ಸಬ್ಸಿಡಿ ಕಡಿತ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಕಚ್ಚಾ ತೈಲ ಮೇಲಿನ ಶೇ 2ರಷ್ಟು ಆಮದು ಸುಂಕ, ಪೆಟ್ರೋಲ್ ಮೇಲಿನ ವಿಶೇಷ ಅಬಕಾರಿ ಸುಂಕ ಮತ್ತು ಡೀಸೆಲ್ ಮೇಲಿನ ಸಬ್ಸಿಡಿ ರದ್ದುಪಡಿಸುವುದರಿಂದಷ್ಟೇ ವಿತ್ತೀಯ ಕೊರತೆ ಕಡಿಮೆಯಾಗಿ, ಚಾಲ್ತಿ ಖಾತೆ ಕೊರತೆ ಮೇಲಿನ ಒತ್ತಡವೂ ಕ್ರಮೇಣ ಕಡಿಮೆಯಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.