ನೌಕಾಪಡೆಗೆ ಆಘಾತ ಕಳೆದ ವಾರವಷ್ಟೇ ಅಣುಶಕ್ತಿ ಆಧಾರಿತ ಜಲಾಂತರ್ಗಾಮಿ ಅರಿಹಂತದ ರಿಯಾಕ್ಟರ್ ಪರೀಕ್ಷೆಯ ಯಶಸ್ಸು, ವಿಮಾನ ವಾಹಕ ಯುದ್ಧನೌಕೆ ವಿಕ್ರಾಂತ್ ನಿರ್ಮಾಣ ಪೂರ್ಣವಾದ ಯಶಸ್ಸಿನಿಂದ ಭಾರತೀಯ ನೌಕಾಪಡೆ ಬೀಗುತ್ತಿತ್ತು. ಆದರೆ ರಷ್ಯಾ ನಿರ್ಮಿತ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಮಂಗಳವಾರ ಮಧ್ಯರಾತ್ರಿ ಉಂಟಾದ ಸ್ಫೋಟ ನೌಕಾಪಡೆಯನ್ನು ಚಿಂತೆಗೆ ಈಡುಮಾಡಿದೆ. ಇದರಿಂದ ಕಡಲಿನ ರಕ್ಷಣಾ ವ್ಯವಸ್ಥೆಗೆ ಹಿನ್ನಡೆ ಆಗಿದೆ. ಮುಂಬೈನ ಕೊಲಾಬಾ ಹಡಗುಕಟ್ಟೆಯಲ್ಲಿ ನಿಂತಿದ್ದ ಡೀಸೆಲ್ ಮತ್ತು ವಿದ್ಯುತ್‌ಚಾಲಿತ ಜಲಾಂತರ್ಗಾಮಿಯಲ್ಲಿ ಆದ ಸ್ಫೋಟಕ್ಕೆ ನಿಖರ ಕಾರಣ ಗೊತ್ತಾಗದಿದ್ದರೂ ಮೂವರು ಅಧಿಕಾರಿಗಳು ಮತ್ತು ಹದಿನೈದು ನಾವಿಕರ ಅಮೂಲ್ಯ ಜೀವವನ್ನು ಈ ದುರಂತ ಕಸಿದುಕೊಂಡಿದೆ. ಇದು ತುಂಬಲಾಗದ ನಷ್ಟವೇ ಸರಿ. 1997ರಲ್ಲಿ ರಷ್ಯಾದ ಯೂನಿಫೈಡ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಷನ್‌ನಿಂದ 11.30 ಕೋಟಿ ಡಾಲರ್ ನೀಡಿ ಈ ಜಲಾಂತರ್ಗಾಮಿಯನ್ನು ಖರೀದಿಸಲಾಗಿತ್ತು. 2013ರ ಜನವರಿಯಲ್ಲಿ ರಷ್ಯಾದ ಜ್ವಿಂಜ್ಡೊಚ್ಕಾ ಹಡಗು ನಿರ್ಮಾಣ ಕೇಂದ್ರದಲ್ಲಿ 15.60 ಕೋಟಿ ಡಾಲರ್ ವೆಚ್ಚದಲ್ಲಿ ಆಧುನೀಕರಿಸಲಾಗಿತ್ತು. ಆ ಸಂದರ್ಭದಲ್ಲಿ, ಸಾಗರದಿಂದ ಭೂಮಿಗೆ ಹಾರಿಸಬಹುದಾದ ಕ್ಷಿಪಣಿ ವ್ಯವಸ್ಥೆಯನ್ನು ಹೊಸದಾಗಿ ಸೇರಿಸಲಾಗಿತ್ತು. ನವೀಕರಣವೆಂದರೆ ಯಂತ್ರದ ಸವೆದ ಭಾಗಗಳನ್ನು ತೆಗೆದು ಹೊಸದನ್ನು ಜೋಡಿಸಿ ಜಲಾಂತರ್ಗಾಮಿಯ ಆಯಸ್ಸನ್ನು ಹೆಚ್ಚಿಸುವುದೇ ಆಗಿದೆ. ನವೀಕರಣವಾದರೂ ದುರಂತ ನಡೆದಿದೆ. ಇದರಿಂದಾಗಿ ನೌಕಾಪಡೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಿಂಧುರಕ್ಷಕ್‌ದಲ್ಲಿ ಅಗ್ನಿದುರಂತ ಹೊಸದೇನಲ್ಲ. ಈ ಹಿಂದೆ ಎರಡು ಸಲ ದುರಂತಗಳು ಸಂಭವಿಸಿವೆ. 2010ರ ಫೆಬ್ರುವರಿಯಲ್ಲಿ ನಡೆದ ಅವಘಡದಲ್ಲಿ ಒಬ್ಬ ನಾವಿಕ ಸತ್ತು, ಇಬ್ಬರು ಗಾಯಗೊಂಡಿದ್ದರು. ಮಂಗಳವಾರ ದುರಂತ ಸಂಭವಿಸಿದಾಗ ಜಲಾಂತರ್ಗಾಮಿಯ ಮೇಲೆ ನಿಂತಿದ್ದ ಮೂವರು ನಾವಿಕರು ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇಲ್ಲದಿದ್ದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು. ದುರಂತಕ್ಕೆ ಮೇಲ್ನೋಟಕ್ಕೆ ಹಲವು ಕಾರಣಗಳು ಗೋಚರಿಸಿವೆ. ಮೂರು ದಿನಗಳ ಹಿಂದೆಯಷ್ಟೇ ಬ್ಯಾಟರಿಯನ್ನು ಚಾರ್ಜ್ ಮಾಡಲಾಗಿತ್ತು. ಚಾರ್ಜ್ ಮಾಡುವಾಗ ಶೇ 4ಕ್ಕಿಂತ ಹೆಚ್ಚು ಪ್ರಮಾಣದ ಜಲಜನಕ ಸೋರಿಕೆಯಾದರೆ ಸ್ಫೋಟ ಸಂಭವಿಸುವ ಸಾಧ್ಯತೆ ಇದೆ ಎಂಬುದು ತಜ್ಞರ ಅನಿಸಿಕೆ. ಇದನ್ನು ತಡೆಯಲು ಹಲವು ಸಾಧನಗಳಿವೆ. ಅಲ್ಲದೇ, ಜಲಾಂತರ್ಗಾಮಿಯಲ್ಲಿ ಇರುವ ಇಂಧನ, ವಿವಿಧ ಬಗೆಯ ಶಸ್ತ್ರಗಳು, ಕೊಳವೆಯಲ್ಲಿರುವ ಆಮ್ಲಜನಕದ ಸೋರಿಕೆಯಿಂದಲೂ ಸ್ಫೋಟ ಉಂಟಾಗಬಹುದು ಎಂದು ನೌಕಾಪಡೆಯ ಅಡ್ಮಿರಲ್ ಡಿ.ಕೆ.ಜೋಷಿ ಹೇಳಿದ್ದಾರೆ. ವಿಧ್ವಂಸಕ ಕೃತ್ಯದ ಸಾಧ್ಯತೆಯನ್ನೂ ಅವರು ಅಲ್ಲಗಳೆದಿಲ್ಲ. ಏಪ್ರಿಲ್‌ನಲ್ಲಿ ಸಿಂಧುರಕ್ಷಕ್‌ನ ಸುರಕ್ಷಾ ಪರೀಕ್ಷೆ ನಡೆಸಿದಾಗ ಅತ್ಯಂತ ತೃಪ್ತಿಕರ ಎನ್ನುವ ವರದಿ ದೊರಕಿತ್ತು. ಆದರೂ ಈ ದುರಂತದ ಬಗ್ಗೆ ನಾಲ್ಕು ವಾರಗಳಲ್ಲಿ ಸಮಗ್ರ ತನಿಖಾ ವರದಿ ನೀಡಬೇಕು ಎಂದು ಆದೇಶಿಸಲಾಗಿದೆ. ಅವಘಡ ನಡೆದಾಗ ಎಚ್ಚರಿಕೆ ನೀಡಲು ಜಲಾಂತರ್ಗಾಮಿಯಲ್ಲಿ ಸ್ವಯಂಚಾಲಿತ ಮತ್ತು ಮಾನವಚಾಲಿತ ಎಚ್ಚರಿಕೆ ಗಂಟೆಗಳನ್ನು ಅಳವಡಿಸಲಾಗಿತ್ತು. ಅಚ್ಚರಿಯೆಂದರೆ ಅಗ್ನಿದುರಂತ ನಡೆದಾಗ ಅವು ಸದ್ದು ಮಾಡಿಲ್ಲ ಎನ್ನಲಾಗಿದೆ! ಇದು ನಾನಾ ಗುಮಾನಿಗಳಿಗೆ ಕಾರಣವಾಗಿದೆ. ನೌಕಾಪಡೆಯಲ್ಲಿ ಜಲಾಂತರ್ಗಾಮಿಗಳ ಕೊರತೆ ಇದೆ. ಕೆಲವು ನೆರೆ ರಾಷ್ಟ್ರಗಳು ಭಾರತದೊಂದಿಗೆ ಹೆಚ್ಚು ಸ್ನೇಹಪೂರ್ವಕ ಸಂಬಂಧ ಹೊಂದಿಲ್ಲ. ಇಂತಹ ಸಂದರ್ಭದಲ್ಲೇ ಈ ದುರಂತ ನಡೆದಿರುವುದು ವಿಷಾದಕರ. ಸ್ಫೋಟಕ್ಕೆ ನಿಖರ ಕಾರಣ ಪತ್ತೆಯಾಗಬೇಕು ಹಾಗೂ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.