ಮಹತ್ವದ ಅಧ್ಯಾಯಕ್ಕೆ ಮುನ್ನುಡಿ ರಾಜ್ಯ ಹೈಕೋರ್ಟಿನ ಗುಲ್ಬರ್ಗ ಮತ್ತು ಧಾರವಾಡ ಸಂಚಾರಿ ಪೀಠಗಳು ಕಾಯಂ ಪೀಠಗಳಾಗಿ ಪರಿವರ್ತನೆಗೊಳ್ಳುವ ಶುಭ ಗಳಿಗೆ ಸಮೀಪಿಸಿದೆ. ಸಂಚಾರಿ ಪೀಠಗಳನ್ನು ಕಾಯಂಗೊಳಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆದೇಶ ಹೊರಡಿಸಿದ್ದಾರೆ. ಈ ತಿಂಗಳಲ್ಲೇ ಎರಡೂ ಪೀಠಗಳು ಅಧಿಕೃತವಾಗಿ ಕಾಯಂಗೊಳ್ಳಲಿರುವುದು ಸಂತಸದ ಸಂಗತಿ. ಹಲವು ದಶಕಗಳ ಹೋರಾಟದ ಫಲವಾಗಿ ಈ ಸಂಚಾರಿ ಪೀಠಗಳು 2008ರಲ್ಲಿ ಹಬ್ಬದ ಸಡಗರದಲ್ಲಿ ಉದ್ಘಾಟನೆಗೊಂಡಿದ್ದವು. ಮುಂದಿನ ದಿನಗಳಲ್ಲಿ ಇವು ಕಾಯಂ ಪೀಠವಾಗಿ ಕೆಲಸ ಮಾಡಲಿವೆ ಎಂಬ ಆಶಾಭಾವ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜನರಲ್ಲಿ ಆಗಲೇ ಟಿಸಿಲೊಡೆದಿತ್ತು. ಆದರೆ, ಆ ಕನಸು ಇಷ್ಟುಬೇಗ ನನಸಾಗುತ್ತದೆ ಎಂದು ಆ ಭಾಗದ ವಕೀಲರೇ ಭಾವಿಸಿರಲಾರರು. ಏಕೆಂದರೆ ಕೇಂದ್ರದಲ್ಲಿ ಯಾವ ಪಕ್ಷವೇ ಅಧಿಕಾರದಲ್ಲಿರಲಿ, ರಾಜ್ಯಕ್ಕೆ ಯಾವುದೂ ತ್ವರಿತವಾಗಿ ಮತ್ತು ಸುಲಭವಾಗಿ ದಕ್ಕುವುದಿಲ್ಲ. ಹೋರಾಟ ಮಾಡಿಯೇ ಪಡೆದುಕೊಳ್ಳಬೇಕು. ಇದು ಕರ್ನಾಟಕದ ದುರ್ದೈವ. ಈ ಪರಿಪಾಠಕ್ಕೆ ಹೊರತಾಗಿ ಸಂಚಾರಿ ಪೀಠಗಳು ಕಾಯಂಗೊಳ್ಳುತ್ತಿರುವುದು ಸಂತೋಷದಾಯಕ. ಸಂಚಾರಿ ಪೀಠದಲ್ಲಿ ಕಾಯಂ ನ್ಯಾಯಮೂರ್ತಿಗಳು ಇರುವುದಿಲ್ಲ. ಹೈಕೋರ್ಟಿನಿಂದ ನಿಯೋಜಿತಗೊಂಡ ನ್ಯಾಯಮೂರ್ತಿಗಳು ಬೆಂಗಳೂರಿನಿಂದ ಸರದಿಯಂತೆ ಈ ಸಂಚಾರಿ ಪೀಠಗಳಿಗೆ ಹೋಗಿ ವಿಚಾರಣೆ ನಡೆಸಿ ಬರುತ್ತಾರೆ. ಕಾಯಂ ಪೀಠಗಳಾಗುವುದರಿಂದ ಈ ತಾತ್ಕಾಲಿಕ ವ್ಯವಸ್ಥೆ ಕೊನೆಗೊಳ್ಳಲಿದೆ. ಈ ಪೀಠಗಳಿಗಾಗಿಯೇ ಕಾಯಂ ಆಗಿ ನ್ಯಾಯಮೂರ್ತಿಗಳು ಮತ್ತು ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ. ಈ ಪ್ರದೇಶದ ಸಿವಿಲ್, ಕ್ರಿಮಿನಲ್ ಒಳಗೊಂಡಂತೆ ಎಲ್ಲ ಬಗೆಯ ದಾವೆಗಳು ತ್ವರಿತವಾಗಿ ವಿಲೇವಾರಿ ಆಗಲಿವೆ. ನ್ಯಾಯಮೂರ್ತಿಗಳ ಸಂಖ್ಯೆಯೂ ಅಗತ್ಯಕ್ಕೆ ತಕ್ಕಂತೆ ಹೆಚ್ಚಲಿದೆ. ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳ ವಿಚಾರಣೆಗೆ ಪ್ರತ್ಯೇಕ ಪೀಠಗಳ ರಚನೆ ಆಗಲಿದೆ ಎಂಬುದು ಹಿರಿಯ ವಕೀಲರ ಅಭಿಪ್ರಾಯ. ಕಂಪೆನಿ ವ್ಯವಹಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲು ಸಂಚಾರಿ ಪೀಠ ವ್ಯವಸ್ಥೆಯಲ್ಲಿ ಅವಕಾಶ ಇರಲಿಲ್ಲ. ಕಾಯಂ ಪೀಠ ಸ್ಥಾಪನೆಯಿಂದ ಈ ಎಲ್ಲ ಅನುಕೂಲಗಳು ಒದಗಿಬರಬಹುದು. ಸಂಚಾರಿ ಪೀಠ ಮೂಲತಃ ತಾತ್ಕಾಲಿಕ ಸ್ವರೂಪದ್ದು. ಹೈಕೋರ್ಟ್‌ಗೆ ಇರುವ ಎಲ್ಲ ಅಧಿಕಾರಗಳು ಸಂಚಾರಿ ಪೀಠಗಳಿಗೆ ಇರುವುದಿಲ್ಲ. ಕಾಯಂಗೊಂಡರೆ ಅದಕ್ಕೆ ನ್ಯಾಯಾಧಿಕರಣದ ವ್ಯಾಪ್ತಿ ನಿಗದಿಯಾಗುತ್ತದೆ. ಆ ವ್ಯಾಪ್ತಿಯ ಕಕ್ಷಿದಾರರು ಬೇರೆಲ್ಲೋ ಹೋಗಿ ಪ್ರಕರಣವನ್ನು ದಾಖಲಿಸುವಂತಿಲ್ಲ. ಇದರಿಂದ ಹೈಕೋರ್ಟ್ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಕಕ್ಷಿದಾರರ ಅನೂಕೂಲದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ನ್ಯಾಯದಾನವನ್ನು ಜನರ ಬಳಿಗೆ ಕೊಂಡೊಯ್ಯುವ ದಿಸೆಯಲ್ಲಿ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣ ಅಗತ್ಯ. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಮೂರ್ತಿಗಳ ಜತೆಗೆ ಕಕ್ಷಿದಾರರು ಮತ್ತು ವಕೀಲರು ಸಹಕರಿಸಬೇಕು. ತಮ್ಮಲ್ಲಿ ವಿಶ್ವಾಸವಿಟ್ಟು ಬರುವ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಿಕೊಡುವಲ್ಲಿ ವಕೀಲರ ಪಾತ್ರ ಮುಖ್ಯ. ಇದೇನೇ ಇರಲಿ, ಸಂಚಾರಿ ಪೀಠಗಳು ಕಾಯಂ ಪೀಠಗಳಾಗಿ ಪರಿವರ್ತನೆ ಆಗಲಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದಕ್ಕೆ ಮುನ್ನುಡಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.