ದಶಕದ `ಶಿಕಾರಿ' ಕುಖ್ಯಾತ ಉಗ್ರ ಅಬ್ದುಲ್ ಕರೀಂ ತುಂಡಾ ದೆಹಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೇಪಾಳ ಗಡಿಯಲ್ಲಿ ಈತನನ್ನು ಬಂಧಿಸಲಾಗಿದೆ. ಬಾಂಬ್ ತಯಾರಿಕೆಯಲ್ಲಿ ಪರಿಣತನಾದ ತುಂಡಾ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಉಗ್ರರ ಪೈಕಿ ಒಬ್ಬನಾಗಿದ್ದ. 26/11ರ ಮುಂಬೈ ಸರಣಿ ಸ್ಫೋಟದ ಬಳಿಕ ಪಾಕಿಸ್ತಾನಕ್ಕೆ ಭಾರತ ಬೇಡಿಕೆ ಸಲ್ಲಿಸಿದ್ದ ಉಗ್ರರ ಪಟ್ಟಿಯಲ್ಲಿ ಈತನ ಹೆಸರೂ ಇತ್ತು. ಎರಡು ದಶಕದಿಂದಲೂ ಪೊಲೀಸರು ಹೊಂಚು ಹಾಕಿದ್ದ `ಬೇಟೆ' ಇದು. ಈತನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ದೆಹಲಿ ಪೊಲೀಸರ ಕಾರ್ಯ ಶ್ಲಾಘನೀಯ. ಎರಡು ದಶಕದ ಹಿಂದೆ ನಡೆದ ಮುಂಬೈ ರೈಲು ಸ್ಫೋಟ ಒಳಗೊಂಡಂತೆ 40ಕ್ಕೂ ಅಧಿಕ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು 70 ವರ್ಷದ ತುಂಡಾ ಎದುರಿಸುತ್ತಿದ್ದಾನೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ. ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಗೆ ಹಣ ಹೊಂದಿಸಿಕೊಡುವ ಹೊಣೆಗಾರಿಕೆ ನಿರ್ವಹಿಸಿದ್ದಾನೆ. ಲಷ್ಕರ್ ಇ ತೈಯಬಾ, ಇಂಡಿಯನ್ ಮುಜಾಹಿದ್ದೀನ್ ಅಂತಹ ಭಯೋತ್ಪಾದನಾ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಕಡುಬಡವ ಯುವಕರನ್ನು ಗುರುತಿಸಿ ಉಗ್ರಗಾಮಿ ಸಂಘಟನೆಗಳಿಗೆ ಸೇರುವಂತೆ ಪ್ರಚೋದಿಸಿದ ಆಪಾದನೆಗೂ ಒಳಗಾಗಿದ್ದಾನೆ. ಈ ಉದ್ದೇಶಕ್ಕಾಗಿ ಸೌದಿ ಅರೇಬಿಯಾ, ಯುಎಇ, ಬಾಂಗ್ಲಾದೇಶ ಮತ್ತು ನೇಪಾಳ ಸುತ್ತಾಡಿ ಬಂದಿದ್ದಾನೆ. `ಪೆನ್ಸಿಲ್ ಬ್ಯಾಟರಿ'ಗಳನ್ನು ಉಪಯೋಗಿಸಿ ಬಾಂಬ್‌ಗಳನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈತ ಅಬ್ದುಲ್ ಖುದ್ದೂಸ್ ಎಂಬ ಖೊಟ್ಟಿ ಹೆಸರಿನಲ್ಲಿ ಪಾಸ್ ಪೋರ್ಟ್ ಹೊಂದಿದ್ದಾನೆ. ಈತನ ಬಳಿ ಪಾಕಿಸ್ತಾನದ ಪಾಸ್‌ಪೋರ್ಟ್ ಸಿಕ್ಕಿದೆ. ಭಯೋತ್ಪಾದಕರಿಗೆ ನೆಲೆ ನೀಡುವ ನೆರೆರಾಷ್ಟ್ರದ ಕುಯುಕ್ತಿ ಇದರಿಂದ ಮತ್ತೆ ಬಯಲಾಗಿದೆ. 1993ಕ್ಕೆ ಮೊದಲು ದೆಹಲಿ ಪೊಲೀಸರು ದರೋಡೆ ಪ್ರಕರಣವೊಂದರ ಸಂಬಂಧ ತುಂಡಾನನ್ನು ಬಂಧಿಸಿದ್ದರೆಂದು ಹೇಳಲಾಗುತ್ತಿದೆ. ಈತ ಬಾಂಗ್ಲಾದೇಶದಲ್ಲಿ ಸತ್ತಿದ್ದಾನೆ ಎಂದು ಭಾವಿಸಿ ಶೋಧ ಕಾರ್ಯವನ್ನು ಒಂದು ಹಂತದಲ್ಲಿ ಸ್ಥಗಿತಗೊಳಿಸಲಾಗಿತ್ತು. ಲಷ್ಕರ್ ಉಗ್ರನೊಬ್ಬ ವಿಚಾರಣೆ ವೇಳೆ, ತುಂಡಾ ಲಾಹೋರ್ ಬಳಿ ನೆಲೆಸಿದ್ದಾನೆ ಎಂದು ಮಾಹಿತಿ ನೀಡಿದ ಬಳಿಕ ಪುನಃ ಶೋಧ ಕಾರ್ಯ ಚುರುಕುಗೊಂಡಿತ್ತು. ಭಾರತದ ಮೇಲೆ ಮತ್ತೊಂದು ಸುತ್ತು ಭಯೋತ್ಪಾದನಾ ದಾಳಿ ನಡೆಸುವುದಾಗಿ ಲಷ್ಕರ್ ಇ ತೈಯಬಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಇತ್ತೀಚೆಗಷ್ಟೇ ಬೆದರಿಕೆಯ ಬಾಂಬ್ ಸಿಡಿಸಿದ್ದ. ಅದರ ಬೆನ್ನಿಗೇ ತುಂಡಾ ನೇಪಾಳಕ್ಕೆ ಭೇಟಿ ನೀಡಿದ್ದ ಎಂಬುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಹಫೀಜ್ ಹಾಗೂ ಜೈಷ್ ಇ ಮೊಹಮ್ಮದ್ ಸಂಘಟನೆಯ ಮೌಲಾನ ಮಸೂದ್ ಅಜರ್‌ಗಿಂತಲೂ ಅಪಾಯಕಾರಿ ಉಗ್ರ ತುಂಡಾ ಎಂದೇ ಪೊಲೀಸರು ಭಾವಿಸಿದ್ದಾರೆ. ಇವರ ಜತೆ ಸಂಬಂಧ ಹೊಂದಿದ್ದಾನೆಂದು ಶಂಕಿಸಲಾಗಿರುವ ತುಂಡಾನನ್ನು ವಿಚಾರಣೆಗೆ ಒಳಪಡಿಸಿದರೆ ಭಯೋತ್ಪಾದಕ ಸಂಘಟನೆಗಳು ರೂಪಿಸಿರುವ ಪಿತೂರಿ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ ರಹಸ್ಯಗಳು ಬಯಲಿಗೆ ಬರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.