ಈಜಿಪ್ಟ್‌ನಲ್ಲಿ ಹಿಂಸಾದಳ್ಳುರಿ ಎರಡು ವರ್ಷಗಳ ಹಿಂದೆ ಈಜಿಪ್ಟ್‌ನ ಚುನಾವಣೆಯಲ್ಲಿ ಗೆದ್ದು ದೇಶದಲ್ಲಿ ಮೊದಲ ಬಾರಿಗೆ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸಿದ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಪದಚ್ಯುತಗೊಳಿಸಿದ ಅಲ್ಲಿನ ಸೇನೆ, ಮುಸ್ಲಿಂ ಬ್ರದರ್‌ಹುಡ್ ನೇತೃತ್ವದ ಪ್ರತಿಭಟನೆಕಾರರ ಹುಟ್ಟಡಗಿಸಲು ಅತ್ಯಂತ ಕ್ರೂರ ಕ್ರಮಗಳನ್ನು ಕೈಗೊಂಡಿದೆ. ಪ್ರತಿಭಟನೆ ನಡೆಸುತ್ತಿರುವ ಮೊರ್ಸಿ ಬೆಂಬಲಿಗರ ಮೇಲೆ ಮನಬಂದಂತೆ ದಾಳಿ ನಡೆಸಲು ಮಿಲಿಟರಿ, ಪೊಲೀಸರಿಗೆ ಮುಕ್ತ ಅವಕಾಶ ನೀಡಿದೆ. `ಹಿಂಸೆ ಯಾವತ್ತೂ ರಾಜಕೀಯ ಪರಿಹಾರವನ್ನು ಒದಗಿಸುವುದಿಲ್ಲ' ಎನ್ನುವುದನ್ನು ಅಲ್ಲಿನ ಮಿಲಿಟರಿಯಿಂದ ಸ್ಥಾಪಿತವಾದ ಮಧ್ಯಂತರ ಸರಕಾರ ಎಷ್ಟು ಬೇಗ ಅರಿತುಕೊಂಡರೆ ಅಷ್ಟು ಒಳಿತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ದೇಶದಲ್ಲಿ ನಡೆದಿರುವ ಅಂತಃಕಲಹಕ್ಕೆ ಅಲ್ಲಿನ 8.4 ಕೋಟಿ ಜನ ದುಬಾರಿ ಬೆಲೆಯನ್ನೇ ತೆರುವ ಸಂಭವ ಕಾಣಿಸುತ್ತಿದೆ. ದೇಶ ಅರಾಜಕತೆಯತ್ತ ಮುಖ ಮಾಡಿದೆ. ಮಿಲಿಟರಿ ಮತ್ತು ಮುಸ್ಲಿಂ ಬ್ರದರ್‌ಹುಡ್ ಕಾರ್ಯಕರ್ತರ ನಡುವಣ ಬೀದಿಕಾಳಗದಲ್ಲಿ ನೂರಾರು ಅಮಾಯಕ ಪ್ರಜೆಗಳು, ಅದರಲ್ಲೂ ಮುಖ್ಯವಾಗಿ ಹೆಂಗಸರು, ಮಕ್ಕಳು ಜೀವ ಕಳೆದುಕೊಳ್ಳುತ್ತಿರುವುದು ಬಹಳ ನೋವಿನ ಸಂಗತಿ. ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದ ಹೊಸ್ನಿ ಮುಬಾರಕ್ ವಿರುದ್ಧ ಜನರೇ ತಿರುಗಿಬಿದ್ದು ಅವರನ್ನು ಪದಚ್ಯುತಗೊಳಿಸಿದ ಬಳಿಕ ಈಜಿಪ್ಟ್‌ನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆದಾಗ ಜಗತ್ತಿನಾದ್ಯಂತ ಪ್ರಜಾಪ್ರಭುತ್ವವಾದಿಗಳು ಹರ್ಷಪಟ್ಟಿದ್ದರು. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಮೊರ್ಸಿ, ಸಂವಿಧಾನವನ್ನು `ಮುಸ್ಲಿಂ ಬ್ರದರ್‌ಹುಡ್'ನ ಆಶಯದಂತೆ ತಿದ್ದಲು ಹೋಗಿ ಸೇನೆಯ ಮತ್ತು ಅಮೆರಿಕದ ಅವಕೃಪೆಗೆ ಒಳಗಾದರು. ಹೊಸ್ನಿ ಮುಬಾರಕ್ ಪದಚ್ಯುತಿಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಇತರ ಉದಾರವಾದಿ ಪ್ರತಿಪಕ್ಷಗಳನ್ನು ಮೊರ್ಸಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಇವತ್ತಿನ ಈ ದುರಂತ ಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ ಹಾಗೆಂದು ಈಜಿಪ್ಟ್‌ನ ಆಂತರಿಕ ವಿಷಯದಲ್ಲಿ ಅಮೆರಿಕ ಹಸ್ತಕ್ಷೇಪ ನಡೆಸುವುದನ್ನು ಒಪ್ಪಲಾಗದು. ಮತದಾನದ ಮೂಲಕ ಆಯ್ಕೆಯಾದ ಮೊರ್ಸಿ ಸರ್ಕಾರದ ಪತನವನ್ನು `ಮಿಲಿಟರಿ ದಂಗೆ' ಎಂದು ಅಮೆರಿಕ ಈವರೆಗೆ ಒಪ್ಪಿಕೊಂಡಿಲ್ಲ. ಹಾಗೆ ಒಪ್ಪಿಕೊಂಡಾಕ್ಷಣ ಅಮೆರಿಕದ ಕಾನೂನಿನ ಪ್ರಕಾರ ಆ ದೇಶ ಈಜಿಪ್ಟ್‌ಗೆ ನೀಡುತ್ತಿರುವ ವಾರ್ಷಿಕ 1.5 ಶತಕೋಟಿ ಡಾಲರ್ ನೆರವು ತನ್ನಿಂದತಾನೇ ನಿಲ್ಲುತ್ತದೆ. ಸದ್ಯಕ್ಕೆ ಅಮೆರಿಕದ ಈ ನೆರವಿನ ಬಲದಿಂದಲೇ ಈಜಿಪ್ಟ್‌ನ ಮಿಲಿಟರಿ ಕೊಬ್ಬಿದ ಗೂಳಿಯಂತೆ ವರ್ತಿಸುತ್ತಿದೆ ಎನ್ನುವುದು ಸ್ಪಷ್ಟ. ಪ್ರಜಾಪ್ರಭುತ್ವದ ಮರುಸ್ಥಾಪನೆಯ ಹೆಸರಿನಲ್ಲಿ ಅಲ್ಲಿನ ಮಿಲಿಟರಿ ಪ್ರಭುತ್ವ ಜನರ ದಮನ ನೀತಿಯನ್ನು ಕೈಗೊಂಡಿರುವುದು ವಿಪರ್ಯಾಸವೇ ಸರಿ. ವಿಶ್ವಸಂಸ್ಥೆ ಮತ್ತು ಇತರ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳು ಈಜಿಪ್ಟ್‌ನ ರಕ್ತಪಾತವನ್ನು ನಿಲ್ಲಿಸುವ ನಿಟ್ಟಿನಲ್ಲಿ ಪ್ರಬಲ ಒತ್ತಡ ಹೇರಬೇಕಾದ ತುರ್ತು ಅಗತ್ಯವಿದೆ. ಮಧ್ಯಂತರ ಸರ್ಕಾರವು ಮುಸ್ಲಿಂ ಬ್ರದರ್‌ಹುಡ್ ಅನ್ನು ನಿಷೇಧಿಸುವ ಬದಲು, ಮಾತುಕತೆಯ ಮೂಲಕ ರಾಜಕೀಯ ಪರಿಹಾರವೊಂದನ್ನು ಕಂಡುಕೊಳ್ಳಲು ಯತ್ನಿಸಬೇಕು. ಇಲ್ಲವಾದಲ್ಲಿ ಇಡೀ ದೇಶ ದೀರ್ಘಾವಧಿ ಹಿಂಸಾದಳ್ಳುರಿಯಲ್ಲಿ ಬೆಂದು, ಸಾವಿರಾರು ಅಮಾಯಕ ಪ್ರಜೆಗಳು ಜೀವ ಕಳೆದುಕೊಳ್ಳುವ ಅಪಾಯವಿದೆ. ಮಾತ್ರವಲ್ಲ, ಪ್ರಜಾಪ್ರಭುತ್ವ ಮರೀಚಿಕೆಯಾಗಿಯೇ ಉಳಿಯುವ ಸಂಭವವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.