ಖಂಡನೀಯ ನಡವಳಿಕೆ ಸಾಮಾಜಿಕ ಬಹಿಷ್ಕಾರ ಎಂಬುದು ಅನಿಷ್ಟ ಪ್ರವೃತ್ತಿ. ಅದು ಈಗಲೂ ಮುಂದುವರಿದಿದೆ. ಗ್ರಾಮೀಣ ಪ್ರದೇಶದ ಅಸ್ಪೃಶ್ಯ ಸಮುದಾಯಗಳ ಬಡಜನರು ಸ್ಥಳೀಯ ಬಲಿಷ್ಠರ ಕೆಂಗಣ್ಣಿಗೆ ಗುರಿಯಾಗಿ ಬಹಿಷ್ಕಾರದ ಶಿಕ್ಷೆ ಅನುಭವಿಸುತ್ತಲೇ ಬಂದಿರುವುದು ದುರದೃಷ್ಟಕರ. ಆದರೆ ಹಿಂದುಳಿದ ವರ್ಗಗಳ ಜನರೂ ಇಂತಹ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ! ಯಳಂದೂರು ತಾಲ್ಲೂಕಿನ ವೈ.ಕೆ. ಮೋಳೆ ಗ್ರಾಮದ ಒಂದು ಉಪ್ಪಾರ ಕುಟುಂಬ ಹಾಗೂ ಸೊರಬ ತಾಲ್ಲೂಕಿನ ಬರಗಿ ಗ್ರಾಮದ ಈಡಿಗ ಕುಟುಂಬವೊಂದು ವಿಚಿತ್ರ ಹಾಗೂ ಅತಾರ್ಕಿಕ ಕಾರಣಕ್ಕಾಗಿ ಬಹಿಷ್ಕಾರದ ಶಿಕ್ಷೆಗೆ ಒಳಗಾಗಿವೆ. ಈ ಎರಡೂ ಪ್ರಕರಣಗಳಲ್ಲಿ ಸ್ಥಳೀಯ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಭೂ ದಾಖಲೆ ನೀಡಲು ಲಂಚ ಕೊಡುವಂತೆ ಒತ್ತಾಯಿಸುತ್ತಿದ್ದ ಗ್ರಾಮ ಲೆಕ್ಕಿಗನೊಬ್ಬನನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬೀಳಿಸಿದ್ದೇ ವೈ.ಕೆ. ಮೋಳೆ ಗ್ರಾಮದ ಶಿವಣ್ಣ ಅವರ ಕುಟುಂಬದ ಬಹಿಷ್ಕಾರಕ್ಕೆ ಕಾರಣವಾಗಿದೆ. ಲಂಚಕೋರ ಗ್ರಾಮಲೆಕ್ಕಿಗ ನೀಡಿದ್ದ ದೂರಿನ ವಿಚಾರಣೆಗೆ ಮುಂದಾದ ಉಪ್ಪಾರ ಸಮಾಜ ಮುಖಂಡರ ಸಭೆಗೆ ಶಿವಣ್ಣ ಹೋಗಲಿಲ್ಲ ಎಂಬುದು ಬಹಿಷ್ಕಾರಕ್ಕೆ ಇನ್ನೊಂದು ಕಾರಣ! ಹಣಕಾಸಿನ ವ್ಯವಹಾರ ಮತ್ತು ಕಳೆದ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದೇ ಸೊರಬ ತಾಲೂಕ್ಕಿನ ಬರಗಿ ಗ್ರಾಮದ ರಾಮಚಂದ್ರಪ್ಪ ಅವರ ಕುಟುಂಬದ ಬಹಿಷ್ಕಾರಕ್ಕೆ ಕಾರಣವಾಯಿತು. ಈ ಎರಡೂ ಘಟನೆಗಳ ಹಿಂದೆ ಗ್ರಾಮ ಮಟ್ಟದ ಸ್ವಜನ ಪಕ್ಷಪಾತ ಮತ್ತು ಕ್ಷುಲ್ಲಕ ರಾಜಕಾರಣ ಕೆಲಸ ಮಾಡಿದೆ. ಸ್ಥಳೀಯ ರಾಜಕಾರಣಿಗಳು ತಮಗೆ ಇಲ್ಲದ ಅಧಿಕಾರ ಬಳಸಿಕೊಂಡು ದುರ್ಬಲರನ್ನು ಹಣಿಯಲು ಹುನ್ನಾರ ಮಾಡಿದ್ದಾರೆ. ಈ ಎರಡೂ ಘಟನೆಗಳ ಹಿಂದಿರುವ ಸ್ಥಳೀಯ ರಾಜಕಾರಣಿಗಳ ನಿರ್ಲಜ್ಜ ನಡವಳಿಕೆ ಖಂಡನೀಯ. ಜಾತಿಯ ಕಟ್ಟುಪಾಡುಗಳು ಮತ್ತು ಗ್ರಾಮದ ಒಗ್ಗಟ್ಟಿನ ಹೆಸರಿನಲ್ಲಿ ಸ್ಥಳೀಯ ರಾಜಕಾರಣಿಗಳು ನ್ಯಾಯ ಪಂಚಾಯ್ತಿಯಂತೆ ವರ್ತಿಸುವುದು ಕಾನೂನುಬಾಹಿರ. ಇದರಿಂದ ಬಡವರು ಮತ್ತು ಅಸಹಾಯಕರಿಗೆ ಅನ್ಯಾಯವಾಗುತ್ತಿದೆ. ಇಂತಹ ನಡವಳಿಕೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಭ್ರಷ್ಟಾಚಾರ ನಿಯಂತ್ರಿಸಲು ಮುಂದಾದವರಿಗೇ ಬಹಿಷ್ಕಾರ ಹಾಕುವ ಪ್ರವೃತ್ತಿಯನ್ನು ಸಹಿಸಲಾಗದು. ಭ್ರಷ್ಟರನ್ನು ಜಾತಿ ಸಂಘಟನೆಗಳು ರಕ್ಷಿಸಬಾರದು. ಹಾಗೆಯೇ ವ್ಯಕ್ತಿಯೊಬ್ಬನ ರಾಜಕೀಯ ಒಲವನ್ನು ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ. ಅದೇನೇ ಇರಲಿ, ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳಿಗೆ ಪ್ರಗತಿಪರ ಸಂಘಟನೆಗಳ ಬೆಂಬಲ ಅಗತ್ಯವಿದೆ. ಬಹಿಷ್ಕಾರದಂತಹ ಅನಿಷ್ಟ ಪ್ರವೃತ್ತಿ ಮತ್ತೆ ತಲೆ ಎತ್ತದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಎಲ್ಲ ವರ್ಗಗಳ ಮೇಲೂ ಇದೆ. ಚಾಮರಾಜನಗರ ಹಾಗೂ ಶಿವಮೊಗ್ಗ ಜಿಲ್ಲಾ ಆಡಳಿತಗಳು, ಬಹಿಷ್ಕಾರದ ಶಿಕ್ಷೆ ಎದುರಿಸುತ್ತಿರುವ ಕುಟುಂಬಗಳ ರಕ್ಷಣೆಗೆ ಧಾವಿಸಬೇಕು. ಬಹಿಷ್ಕಾರ ಹಾಕಿದ ರಾಜಕೀಯ ಮುಖಂಡರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ಮರುಕಳಿಸುತ್ತವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.