ಆಹಾರ ಆರೋಗ್ಯಕರವಾಗಿರಲಿ ಶಾಲೆಗಳ ಸುತ್ತಮುತ್ತ ‘ಜಂಕ್ ಫುಡ್’ ನಿಷೇಧಕ್ಕೆ ವಿಜ್ಞಾನ ಹಾಗೂ ಪರಿಸರ ಕೇಂದ್ರದ (ಸಿಎಸ್ಇ) ಹೊಸ ವರದಿ ಕರೆ ನೀಡಿದೆ. ಉಪ್ಪು, ಸಕ್ಕರೆ ಹಾಗೂ ಕೊಬ್ಬಿನಂಶ ಹೆಚ್ಚಿರುವಂತಹ ಈ ಬಗೆಯ ಆಹಾರ ಪದಾರ್ಥ­ಗಳು ಮಕ್ಕಳ ಆರೋಗ್ಯಕ್ಕೆ ಉಂಟು ಮಾಡುವ ಅಪಾಯಗಳನ್ನು ಈ ವರದಿ ವಿವರಿಸಿದೆ. ಇಂತಹ ಆಹಾರಸೇವನೆ ಹಾಗೂ ಮಕ್ಕಳಲ್ಲಿ ಹೆಚ್ಚುತ್ತಿ­ರುವ ಮಧುಮೇಹ, ಹೈಪರ್ ಟೆನ್ಷನ್ ಹಾಗೂ ಹೃದಯ ಕಾಯಿಲೆಗಳ ಮಧ್ಯೆ ಇರುವ ಸಂಬಂಧವನ್ನು ಇದು ಎತ್ತಿ ಹೇಳಿದೆ. ಹಿಂದೆಲ್ಲಾ ಇಂತಹ ಕಾಯಿಲೆ­ಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದುದು ಮಧ್ಯ ವಯಸ್ಸು ಹಾಗೂ ವೃದ್ಧಾಪ್ಯ­ದಲ್ಲಿ. ಆದರೆ ಆಧುನಿಕ ಕಾಲದ ಕೊಡುಗೆಯಾಗಿರುವ ದಿಢೀರ್ ಆಹಾರ ಹಾಗೂ ಕುರುಕಲು ತಿಂಡಿಗಳ ನಿರಂತರ ಸೇವನೆಯಿಂದಾಗಿ ಸ್ಥೂಲಕಾಯದ ಸಮಸ್ಯೆ ದೊಡ್ಡ ನಗರಗಳಲ್ಲಿ ಚಿಕ್ಕ ಮಕ್ಕಳಲ್ಲೂ ಹೆಚ್ಚುತ್ತಿರುವುದು ಆತಂಕ­ಕಾರಿ. ನಂತರ ಇದು ಮಧುಮೇಹ ಹಾಗೂ ಹೈಪರ್ ಟೆನ್ಷನ್‌ಗೆ ಮುಖ್ಯ ಕಾರಣ­ವಾಗುತ್ತಿದೆ. ವ್ಯಾಯಾಮ ಮಾಡು­ವುದೂ ಮುಖ್ಯ. ಆದರೆ ಅದು ಸಮ­ತೋಲನದ ಆಹಾರಕ್ಕೆ ಪರ್ಯಾಯ­ವಾಗದು. ಸಮತೋಲಿತ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಮಕ್ಕಳಿಗೆ ಪ್ರೊಟೀನ್, ವಿಟಮಿನ್ ಹಾಗೂ ಖನಿಜಯುಕ್ತ ಆಹಾರ ನೀಡುವುದು ಅಗತ್ಯ ಎಂದು ಈ ವರದಿ ಹೇಳಿದೆ. ಕಾರ್ಬೊನೇಟೆಡ್ ಪೇಯ, ನೂಡಲ್ಸ್ ಮುಂತಾದ ಆಹಾರಪದಾರ್ಥಗಳ ಜಾಹೀರಾತುಗಳು ಮಕ್ಕಳನ್ನೇ ಕೇಂದ್ರೀಕರಿಸಿ ತಯಾರಾಗಿರುತ್ತವೆ. ಇಂತಹ ತಿನಿಸು­ಗಳು ಶಾಲೆಗಳಲ್ಲಿ ಲಭ್ಯವಾದಾಗ ಮಕ್ಕಳು ಆಮಿಷಕ್ಕೊಳಗಾಗುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಹಾಗೂ ಶಾಲೆಗಳಿಂದ ಅರ್ಧ ಕಿ.ಮೀ. ಅಂತರದಲ್ಲಿ ಇಂತಹ ಆಹಾರ ಸಿಗಬಾರದು ಎಂಬಂಥ ಶಿಫಾರಸು ಕೂಡ ಈ ವರದಿಯ­ಲ್ಲಿದೆ. ಎಲ್ಲಾ ಶಾಲೆಗಳು ಕ್ಯಾಂಟೀನ್ ನೀತಿಯನ್ನು ಹೊಂದಿರಬೇಕು. ಇಲ್ಲಿ ಲಭ್ಯವಿರುವ ಶೇ 80ರಷ್ಟು ಆಹಾರದ ಆಯ್ಕೆಗಳು ಆರೋಗ್ಯಕರ­ವಾಗಿರ­ಬೇಕು ಎಂಬುದೂ ವರದಿಯಲ್ಲಿದೆ. ಈಗಾಗಲೇ ಅಮೆರಿಕ, ಇಂಗ್ಲೆಂಡ್, ಕೆನಡಾ ಸೇರಿದಂತೆ ಅನೇಕ ರಾಷ್ಟ್ರಗಳ ಶಾಲೆಗಳಲ್ಲಿ ಇಂತಹ ಆಹಾರ­ಪದಾ­ರ್ಥ­­ಗಳನ್ನು ನಿಷೇಧಿಸಿರುವುದನ್ನೂ ಗಮನಿಸಬೇಕು. ಸಿಎಸ್ಇ ವರದಿಯ ಮೌಲ್ಯಯುತ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದು­ಕೊಳ್ಳಬೇಕು. ಅಲ್ಲದೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡುವ ಪದಾರ್ಥಗಳ ಬಗೆಗೂ ಸರ್ಕಾರ ಮರುಚಿಂತನೆಗಳನ್ನು ನಡೆಸು­ವುದು ಅಗತ್ಯ. ಬಿಸಿಯೂಟದಲ್ಲಿ ಆಹಾರ ಗುಣಮಟ್ಟದ ಬಗ್ಗೆ ಟೀಕೆಗಳಿವೆ. ಕೆಲವು ರಾಜ್ಯ ಸರ್ಕಾರಗಳು, ಬಿಸ್ಕತ್ ಹಾಗೂ ಕರಿದ ತಿಂಡಿಗಳಿರುವ ಪ್ಯಾಕೇಜ್ ಆಹಾರ ಒದಗಿಸುತ್ತಿವೆ. ಇಂತಹ ದಿಢೀರ್ ಆಹಾರಪದಾರ್ಥ­ಗಳಿ­ಗಿಂತ ಮಕ್ಕಳಿಗೆ ಬೇಕಾ­­ಗಿರುವುದು ಬಿಸಿಯಾದ ಪೌಷ್ಟಿಕ ಆಹಾರ. ಈ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಮನೆ­ಗಳಲ್ಲಿ ಆರಂಭದಿಂದಲೇ ಆರೋಗ್ಯಕರ ಆಹಾರಾಭ್ಯಾಸ ರೂಢಿಸುವುದು ಪೋಷಕರ ಕರ್ತವ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.