ಈ ವಿಳಂಬ ಅಕ್ಷಮ್ಯ ಸರಿಯಾದ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡದೇ ಇರುವ ವ್ಯಾಧಿ ನಮ್ಮ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಂಟಿ­ಕೊಂಡಿದೆ. ಅಲ್ಲಿ ಸಕಾಲಕ್ಕೆ ಪ್ರವೇಶಗಳು ನಡೆಯುವುದಿಲ್ಲ, ತರಗತಿಗಳು ನಡೆ­ಯು­ವುದಿಲ್ಲ, ಪಾಠ ಪ್ರವಚನಗಳು ನಡೆಯುವುದಿಲ್ಲ, ಪರೀಕ್ಷೆಗಳು ನಡೆಯು­ವುದಿಲ್ಲ, ಫಲಿತಾಂಶ ಹೊರಬೀಳುವುದಿಲ್ಲ. ಅಷ್ಟೇ ಏಕೆ ನೇಮಕಾತಿ­ಗಳೂ ಸಮರ್ಪಕವಾಗಿ ಆಗುವುದಿಲ್ಲ. ಈಗ ನೋಡಿದರೆ, ಈ ವಿಶ್ವವಿದ್ಯಾಲಯಗಳು ರಾಜ್ಯದ ಉನ್ನತ ಶಿಕ್ಷಣ ಇಲಾಖೆಗೆ ವಾರ್ಷಿಕ ವರದಿ ಮತ್ತು ಲೆಕ್ಕ ಪರಿ­ಶೋಧನಾ ವರದಿಯನ್ನೂ ನಿಯಮಿತವಾಗಿ ಸಲ್ಲಿಸಿಲ್ಲ ಎಂಬ ವಿಷಯ ಹೊರಬಿದ್ದಿದೆ. ಈ ಪಟ್ಟಿಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವಂತೂ ದಾಖಲೆಯನ್ನೇ ಮಾಡಿದೆ. ಅದು ಬರೋಬ್ಬರಿ 13 ವರ್ಷಗಳಿಂದ ವಾರ್ಷಿಕ ಮತ್ತು ಲೆಕ್ಕಪತ್ರ ತಪಾಸಣಾ ವರದಿ ಕೊಟ್ಟಿಲ್ಲ ಎಂದು ವಿಧಾನಮಂಡಲದ ಕಾಗದ ಪತ್ರ ಸಮಿತಿ ತಿಳಿಸಿದೆ. ಸೋಜಿಗದ ಸಂಗತಿ ಎಂದರೆ, ‘ವರದಿ ಸಲ್ಲಿ­ಸಲು ಯಾವುದೇ ಸ್ಪಷ್ಟ ನಿರ್ದೇಶನ ಇಲ್ಲ’ ಎಂದು ಅಧಿಕಾರಿಗಳು ಉತ್ತರಿ­ಸಿ­ದ್ದರಂತೆ. ಸರ್ಕಾರದ ಅನುದಾನದ ಮೇಲೆಯೇ ಉಸಿರಾಡುವ ವಿಶ್ವವಿದ್ಯಾ­ಲಯ­ಗಳು ಮತ್ತು ಅವುಗಳ ಅಧಿಕಾರಿಗಳ ಈ ಮೊಂಡುವಾದ ಅಕ್ಷಮ್ಯ. ಪ್ರತಿ ವರ್ಷ ಸರ್ಕಾರಕ್ಕೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂಬ ನಿಯಮ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿಯೇ ಇದೆ. ಆದರೆ ಇದು ಕುಲಪತಿಗಳು, ಕುಲಸಚಿವರು ಮತ್ತು ಅವರ ಅಧೀನ ಸಿಬ್ಬಂದಿಗೇ ಗೊತ್ತಿಲ್ಲ ಎನ್ನುವುದಂತೂ ಹಾಸ್ಯಾಸ್ಪದ. ಕಾಯ್ದೆಯೇ ಗೊತ್ತಿಲ್ಲದವರು ಅಧಿಕಾರದ ಉನ್ನತ ಹುದ್ದೆ­ಗಳಲ್ಲಿ ಕುಳಿತುಕೊಂಡಿದ್ದಾರೆ. ಅದರಿಂದಲೇ ಈ ಸಮಸ್ಯೆ. ‘ವಿಶ್ವವಿದ್ಯಾಲಯದ ಈ ಲೋಪಕ್ಕೆ ಕುಲಪತಿಗಳು ಮತ್ತು ಕುಲಸಚಿವರೇ ಕಾರಣ; ವರದಿ ಸಲ್ಲಿಕೆಯಲ್ಲಿನ ವಿಳಂಬಕ್ಕೆ ಕುಲಸಚಿವರು ಮತ್ತು ಹಣಕಾಸು ಅಧಿಕಾರಿ ಹೊಣೆ­ಗಾರರು’ ಎಂದು ಡಾ. ಎ.ಬಿ. ಮಾಲಕರಡ್ಡಿ ಅಧ್ಯಕ್ಷತೆಯ ಸಮಿತಿ ನಿಷ್ಠುರ­­ವಾಗಿ ಹೇಳಿದೆ. ಅನುದಾನದ ದುರ್ಬಳಕೆಯೂ ಆಗಿದೆ ಎಂಬುದನ್ನು ಅದು ಪತ್ತೆ ಹಚ್ಚಿದೆ. ಹೀಗಾಗಿ ಸರ್ಕಾರ ಈಗ ಸುಮ್ಮನೆ ಕೈಕಟ್ಟಿ ಕುಳಿತು­ಕೊಳ್ಳಬಾರದು. ವಿಶ್ವವಿದ್ಯಾಲಯಗಳ ಹೊಣೆಹೊತ್ತ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಹದ್ದುಬಸ್ತಿನಲ್ಲಿ ಇಡಬೇಕು. ವರದಿ ಸಲ್ಲಿಕೆ ವಿಳಂಬದಲ್ಲಿ ಹಂಪಿ ವಿ.ವಿ. ಮಾತ್ರವಲ್ಲದೆ ಗುಲ್ಬರ್ಗ, ಬೆಂಗ­ಳೂರು, ಮಂಗಳೂರು ವಿ.ವಿ.ಗಳು ಹಾಗೂ ಧಾರವಾಡ, ರಾಯಚೂರು ಕೃಷಿ ವಿ.ವಿ.ಗಳೂ ಸೇರಿವೆ ಎನ್ನುವುದು ಗಂಭೀರವಾದ ವಿಷಯ. ಸಾರ್ವಜನಿಕ ಬೊಕ್ಕಸದಿಂದ ಹಣ ಬಂದ ಮೇಲೆ ಸರ್ಕಾರಕ್ಕೆ ಮತ್ತು ಆ ಮೂಲಕ ಪ್ರಜೆ­ಗಳಿಗೆ ಉತ್ತರ ಕೊಡಬೇಕು ಎನ್ನುವ ಅರಿವು ಬೆಳೆಸಿಕೊಳ್ಳಲು ಭಾರಿ ಬುದ್ಧಿವಂತಿಕೆ­ಯೇನೂ ಬೇಕಾಗಿಲ್ಲ. ಅದು ಎಂಥವರಿಗೂ ಅರ್ಥವಾಗುವ ಸಂಗತಿ. ಆದರೆ ಇದು ವಿಶ್ವವಿದ್ಯಾಲಯಗಳ ಹೊಣೆ ಹೊತ್ತವರಿಗೆ ಗೊತ್ತಿಲ್ಲ ಎಂದರೆ ನಂಬಬೇಕೆ? ಇವರ ಕರ್ತವ್ಯವನ್ನು ಜನಪ್ರತಿನಿಧಿಗಳುಳ್ಳ ವಿಧಾನ ಮಂಡಲ ಸಮಿತಿ ಕಿವಿ ಹಿಂಡಿ ನೆನಪಿಸಬೇಕಾಗಿ ಬಂದಿದೆ. ವಿಶ್ವವಿದ್ಯಾಲಯ­ಗಳೆಂದರೆ ಜ್ಞಾನ ದೇಗುಲಗಳು. ಅಲ್ಲಿ ‘ನಿಯಮ ಗೊತ್ತಿಲ್ಲ, ನಿರ್ದೇಶನ ಬಂದಿಲ್ಲ’ ಎಂಬ ಅಜ್ಞಾನ ಪ್ರದರ್ಶನಕ್ಕೆ, ಸಾರ್ವಜನಿಕ ಹಣದ ಅವ್ಯವ­ಹಾರಕ್ಕೆ ಅವಕಾಶ ಇಲ್ಲ. ಅವು ಉತ್ತರದಾಯಿಯಾಗಿ, ಹೆಚ್ಚು ಜವಾಬ್ದಾರಿ­ಯಿಂದ ನಡೆದುಕೊಳ್ಳಬೇಕು. ಸಬೂಬು ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.