ಎಫ್‌ಡಿಐ ಮಿತಿ ಹೆಚ್ಚಳ ದೇಶದ ವಿಮೆ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಮಿತಿಯನ್ನು ಸದ್ಯದ ಶೇ 26 ರಿಂದ ಶೇ 49ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ವಿಮೆ ರಂಗದ ಆರೋಗ್ಯ ಖಂಡಿತ­ವಾಗಿಯೂ ಸುಧಾರಿಸಲಿದೆ. ಖಾಸಗಿ ವಿಮೆ ಸಂಸ್ಥೆಗಳು ಮತ್ತು ಗ್ರಾಹಕರಿಗೂ ಇದರಿಂದ ಪ್ರಯೋಜನ ಲಭಿಸಲಿದೆ. ಸಣ್ಣ – ಪುಟ್ಟ ಸಂಸ್ಥೆಗಳು ದೊಡ್ಡ ವಿಮೆ ಸಂಸ್ಥೆಗಳಲ್ಲಿ ವಿಲೀನಗೊಳ್ಳುವ ಸಾಧ್ಯತೆ­ಗಳೂ ಸೃಷ್ಟಿಯಾಗಲಿವೆ. ಸದ್ಯಕ್ಕೆ ನಿರಾ­ಶಾದಾಯಕ ಸ್ಥಿತಿಯಲ್ಲಿ ಇರುವ ವಿಮೆ ವಹಿವಾಟು ವಿಸ್ತರಣೆಗೆ ಅಗತ್ಯ­ವಾದ ಉತ್ತೇಜನ ಇನ್ನು ಮುಂದೆ ದೊರೆಯ­ಲಿದೆ. ಎಫ್‌ಡಿಐ ಮಿತಿ ಹೆಚ್ಚಿ­ಸುವ ಪ್ರಸ್ತಾವವು ಎಡಪಕ್ಷಗಳ ಸೈದ್ಧಾಂತಿಕ ಮತ್ತು ಬಿಜೆಪಿಯ ಪಕ್ಷ ರಾಜಕಾರ­ಣದಿಂದಾಗಿ ದೀರ್ಘಕಾಲದಿಂದ ನನೆ­ಗುದಿಗೆ ಬಿದ್ದಿತ್ತು. ಯುಪಿಎ ಸರ್ಕಾರದ ಅಧಿಕಾರಾವಧಿ ಉದ್ದಕ್ಕೂ ಬಿಜೆಪಿ ಆರ್ಥಿಕ ಸುಧಾರಣಾ ಕ್ರಮಗ­ಳನ್ನು ವಿರೋಧಿ­ಸುವ ಮೊಂಡುತನ ರೂಢಿಸಿ­ಕೊಂಡಿತ್ತು. ಎಫ್‌ಡಿಐ ಮಿತಿ ಹೆಚ್ಚಳವು ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡುತ್ತದೆ ಎಂಬ ವಿತಂಡವಾದವನ್ನೂ ಮುಂದಿ­ಟ್ಟಿತ್ತು. ಈ ಧೋರಣೆ ಅರ್ಥ­ವಿಲ್ಲದ್ದು ಎನ್ನುವುದು ವಿಶ್ವದ ಇತರ ದೇಶಗಳಲ್ಲಿನ ಪ್ರಯೋಗವು ಸಾಬೀತು­ಪಡಿಸಿದೆ. ಸ್ಪಷ್ಟ­ಬಹು­ಮತದಿಂದ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಯು ತನ್ನ ಮೊದಲಿನ ಅರ್ಥವಿಲ್ಲದ ಧೋರಣೆ ಸಡಿಲಿಸಿ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರು­ವುದು ಉತ್ತಮ ಬೆಳವಣಿಗೆ. ಬರೀ ಅಭಿವೃದ್ಧಿ ಮಂತ್ರ ಜಪಿಸಿದರೆ ಸಾಲದು, ಅದಕ್ಕೆ ವಿದೇಶಿ ಬಂಡವಾಳದ ಹರಿವಿನ ಅಗತ್ಯ ಇದೆ ಎನ್ನುವ ವಾಸ್ತವ ಬಿಜೆಪಿಗೆ ಮನ­ದಟ್ಟಾಗಿರುವಂತೆ ಕಂಡುಬರುತ್ತದೆ. ವಿಮೆ ವಹಿವಾಟಿಗೆ ಬೇಕಾದ ಭಾರಿ ಪ್ರಮಾ­ಣದ ಬಂಡವಾಳದ ಅಗತ್ಯವು ಈಗ ಈಡೇರಲಿದೆ. ದೇಶಿ ವಿಮೆ ವಹಿವಾಟು ಸಂಸ್ಥೆಗಳ ಬಳಿ ಅಗತ್ಯ ಬಂಡವಾಳದ ಕೊರತೆ ಇರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಈ ಸಂಸ್ಥೆಗಳು ವಿದೇಶಿ ಪಾಲುದಾರಿಕೆಯಡಿ ವಹಿವಾಟು ವಿಸ್ತರಣೆಗೆ ಹೆಣಗಾಡುತ್ತಿವೆ. ಇದುವ­ರೆಗಿನ ಮಿತಿಯಿಂದಾಗಿ ಬಂಡವಾಳದ ಹರಿವು ಸೀಮಿತ­ಗೊಂಡಿತ್ತು. ಈಗ ವಿದೇಶ­ಗಳಿಂದ ಹೆಚ್ಚಿನ ಪ್ರಮಾಣದ ಬಂಡವಾಳವು ಹರಿದು ಬರಲಿದೆ. ಅಲ್ಪಾವಧಿಯಲ್ಲಿ ₨ 25 ಸಾವಿರ ಕೋಟಿ ಸೇರಿದಂತೆ ಒಟ್ಟಾರೆ ₨ 1 ಲಕ್ಷ ಕೋಟಿ­ಗಳಷ್ಟು ಎಫ್‌ಡಿಐ ದೇಶದೊಳಗೆ ಹರಿದು ಬರಲಿರುವ ಅಂದಾಜಿದೆ. ಇದು ದೇಶಿ ಹೂಡಿಕೆ­ದಾರರ ಆತ್ಮವಿಶ್ವಾಸ ಹೆಚ್ಚಿಸಲಿದೆ. ನಮ್ಮಲ್ಲಿ ವಿಮೆ ವಹಿವಾಟು ನಿರೀಕ್ಷಿಸಿದ ಪ್ರಮಾಣ­ದಲ್ಲಿ ಇಲ್ಲ. ಒಟ್ಟು ಜನ­ಸಂಖ್ಯೆಯ ಶೇ 6ರಷ್ಟು ಮಾತ್ರ ಜನರು ವಿಮೆ ಸೌಲಭ್ಯ ಪಡೆದು­ಕೊಳ್ಳು­ತ್ತಿದ್ದಾರೆ. ಆರೋಗ್ಯ ವಿಮೆಯ ಚಿತ್ರಣ­ವಂತೂ ಇನ್ನೂ ನಿರಾ­ಶಾ­­ದಾಯಕ­ವಾಗಿದೆ. ಗ್ರಾಮೀಣ ಜನರೂ ಸಾಕಷ್ಟು ಪ್ರಮಾಣ­­ದಲ್ಲಿ ವಿಮೆ ವ್ಯಾಪ್ತಿಗೆ ಒಳಪಡ­ಬೇಕಾ­ಗಿದೆ. ವಹಿವಾಟು ವಿಸ್ತರಣೆಗೆ ಅಗತ್ಯ­ವಾದ ಬಂಡವಾಳ, ತಾಂತ್ರಿಕ ಪರಿಣತಿ ಮತ್ತಿತರ ನೆರವಿನಿಂದ ವಿಮೆ ಸೌಲಭ್ಯವನ್ನು ವಿಸ್ತರಿಸಲು ಸಾಧ್ಯವಾ­ಗಲಿದೆ. ಹೊಸ ವಿಮೆ ಸಂಸ್ಥೆಗಳ ಪ್ರವೇಶದಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚಿ, ಸೇವಾ ಗುಣಮಟ್ಟ ಸುಧಾರಿಸಿ, ಹೆಚ್ಚು ಉದ್ಯೋಗ ಅವಕಾಶಗಳು ಸೃಷ್ಟಿಯಾಗು­ವಂತಾಗಬೇಕು.ದೀರ್ಘಾ­ವಧಿ­ಯಲ್ಲಿನ ಬಂಡವಾಳ ಹರಿವು ಮೂಲ ಸೌಕ­ರ್ಯವೂ ಸೇರಿದಂತೆ ಆರ್ಥಿಕತೆಯ ಇತರ ವಲಯಗಳ ಬೆಳವಣಿಗೆಗೂ ನೆರವಾಗುವು­ದರಲ್ಲಿಯೇ ಈ ನಿರ್ಧಾ­ರದ ಯಶಸ್ಸು ಅಡಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.