ಭಗ್ನ ‘ಅಮೆರಿಕ ಕನಸು’: ಅಕ್ರಮ ಮಾನವ ಸಾಗಣೆ ನಿಯಂತ್ರಿಸಿ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದ ‍ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಕಾನೂನಿಗೆ ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂತೆಗೆದುಕೊಂಡಿದ್ದಾರೆ. ಅಮೆರಿಕಕ್ಕೆ ಅಕ್ರಮವಾಗಿ ಬರುತ್ತಿರುವ ವಲಸಿಗರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ನಿಯಮಗಳು ಹಾಗೂ ಅವುಗಳ ವ್ಯಾಖ್ಯಾನಗಳನ್ನು ಟ್ರಂಪ್ ಆಡಳಿತ ಕಠಿಣಗೊಳಿಸಿದ ನಂತರ ಸಮಸ್ಯೆಗಳು ಇನ್ನೂ ಹೆಚ್ಚುತ್ತಿವೆ. ಸೂಕ್ತ ದಾಖಲೆಗಳಿಲ್ಲದೆ ಅಮೆರಿಕ ಪ್ರವೇಶಿಸುವವರು ಲ್ಯಾಟಿನ್ ಅಮೆರಿಕ ರಾಷ್ಟ್ರಗಳವರು ಮಾತ್ರವಲ್ಲ, ಭಾರತದವರೂ ಸೇರಿದ್ದಾರೆ. ಮೆಕ್ಸಿಕೊ, ಎಲ್ ಸಾಲ್ವಡಾರ್ ಹಾಗೂ ಗ್ವಾಟೆಮಾಲ ರಾಷ್ಟ್ರಗಳ ನಂತರ ಅಮೆರಿಕವನ್ನು ಪ್ರವೇಶಿಸುವ ಅತಿಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ಭಾರತದವರು ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಇತ್ತೀಚೆಗೆ ಮತ್ತೆ ಸುಮಾರು 100 ಮಂದಿ ಭಾರತೀಯರು ಅಕ್ರಮ ವಲಸೆಗಾಗಿ ಬಂಧನಕ್ಕೊಳಗಾಗಿ ಅಮೆರಿಕದ ಎರಡು ಬಂಧನ ಕೇಂದ್ರಗಳಲ್ಲಿದ್ದಾರೆ. ಅಕ್ರಮವಾಗಿ ಅಮೆರಿಕ ‍ಪ್ರವೇಶಿಸಿದ ಸಾವಿರಾರು ಮಂದಿ ಭಾರತೀಯರು ಅಮೆರಿಕದ ವಿವಿಧ ಜೈಲುಗಳಲ್ಲಿ ಇದ್ದಾರೆ. ಅವರು ಬಂಧನಕ್ಕೊಳಪಟ್ಟ ಪರಿಸ್ಥಿತಿಯೂ ವಿಷಾದನೀಯವಾದದ್ದು. ದೀರ್ಘಕಾಲದ ಬಂಧನ, ಬಂಧನದ ಸಂದರ್ಭದಲ್ಲಿನ ಸಮಸ್ಯೆಗಳು ಅಮಾನವೀಯವಾದ ಸ್ಥಿತಿಗಳಿಗೆ ಕಾರಣವಾಗುತ್ತವೆ. ಸದ್ಯಕ್ಕೆ ಅಮೆರಿಕದಲ್ಲಿ ಪ್ರತಿಕೂಲಕರ ವಾತಾವರಣ ಇದ್ದರೂ ಅಮೆರಿಕ ಎಂದರೆ ‘ಅವಕಾಶಗಳ ನಾಡು’ ಎಂಬುದಾಗಿ ಅಲ್ಲಿಗೆ ವಲಸೆ ಹೋಗಲು ಪ್ರೇರಣೆ ಆಗುತ್ತಿರುವುದು ವಿಪರ್ಯಾಸ. ಅದರಲ್ಲೂ ವಿದೇಶದ ನೆಲದಲ್ಲಿ ಉತ್ತಮ ಬದುಕು ಅರಸಿ ಹೋಗುವ ಪಂಜಾಬಿಗಳು ಬಹಳ ಬೆಲೆ ತೆತ್ತಿರುವ ಪ್ರಕರಣಗಳೂ ಇವೆ. ದಲ್ಲಾಳಿಗಳಿಗೆ ಅಪಾರ ದುಡ್ಡು ತೆತ್ತು ಹೋಗುವವರಿಗೆ ಅನೇಕ ಬಾರಿ ಈ ಪಯಣ ಸುಖಕರವಾಗಿರದೆ ದಾರುಣವಾಗಿ ಅಂತ್ಯ ಕಂಡಿರುವ ಪ್ರಸಂಗಗಳೂ ಇವೆ. ಆಶ್ರಯ ಬೇಡಿಬರುವವರಿಗೆ ಒಂದು ಬೆಳಕಿಂಡಿಯಂತೂ ಅಮೆರಿಕದಲ್ಲಿ ತೆರೆದೇ ಇದೆ. ದೀರ್ಘಾವಧಿ ಕಾಯುವಿಕೆಯ ನಂತರ ಕೆಲವರಿಗೆ ಆಶ್ರಯ ಸಿಗುತ್ತದೆ. ಇದು, ಜೈಲುಗಳಲ್ಲಿ ಕಾಲ ಕಳೆಯುವವರಿಗೆ ಭರವಸೆಯ ಕಿರಣವಾಗಿರುತ್ತದೆ. ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋದವರಲ್ಲಿ ಹೆಚ್ಚಿನವರು ಪಂಜಾಬ್‌ನವರಲ್ಲದೆ ಆಂಧ್ರದ ಕೆಲವು ಕ್ರೈಸ್ತರೂ ಸೇರಿದ್ದಾರೆ. ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗಿರುವ ಕಾರಣ ನೀಡಿ ಆಶ್ರಯಕ್ಕಾಗಿ ಮನವಿ ಸಲ್ಲಿಸಿದವರೂ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2013ರಿಂದ 2015ರ ತನಕ ಅಮೆರಿಕ ಗಡಿಯೊಳಗೆ 27 ಸಾವಿರ ಮಂದಿ ಭಾರತೀಯರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎನ್ನುತ್ತವೆ ಅಂಕಿಅಂಶಗಳು. ಅಕ್ರಮ ವಲಸಿಗರ ವಿರುದ್ಧ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿದ ನಂತರ ಭಾರತೀಯರ ಬಂಧನ ಪ್ರಕರಣಗಳೂ ಹೆಚ್ಚಾಗುತ್ತಿವೆ. ಅತಿಕ್ರಮವಾಗಿ ಗಡಿ ಪ್ರವೇಶಿಸುವವರನ್ನು ಬಂಧನದಲ್ಲಿಡಲು ನ್ಯೂ ಮೆಕ್ಸಿಕೊ ಬಳಿತಾತ್ಕಾಲಿಕ ಬಂಧನ ಕೇಂದ್ರಗಳನ್ನೂ ನಿರ್ಮಿಸಲಾಗಿದೆ. ಬಂಧನದಲ್ಲಿರುವವರಿಗೆ ಆಪ್ತಸಮಾಲೋಚನೆ, ಸಹಕಾರಗಳ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಕ್ರಮ ವಲಸೆ ನಿಯಂತ್ರಿಸಬೇಕಾದದ್ದೂ ಅಗತ್ಯ. ಹೊರ ದೇಶಗಳಲ್ಲಿ ಸ್ವರ್ಗವನ್ನು ಅರಸಿ ಹೋಗುವವರನ್ನು ತಡೆಯಲಾಗದು. ಆದರೆ ಮಾನವ ಸಾಗಣೆ ವ್ಯವಸ್ಥೆಯೊಳಗಿರುವ ವಂಚನೆ ನಿಯಂತ್ರಣಕ್ಕೆ ಪ್ರಯತ್ನಿಸುವುದು ಅಗತ್ಯ. ಅನೇಕ ಸಂದರ್ಭಗಳಲ್ಲಿ ದಲ್ಲಾಳಿಗಳಿಗೆ ಭಾರಿ ಹಣ ತೆತ್ತು ವಂಚನೆ ಸುಳಿಯಲ್ಲಿ ಸಿಲುಕುತ್ತಾರೆ. ಕಾನೂನುಬದ್ಧ ಹಾಗೂ ಅಕ್ರಮ ವಲಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ವಂಚನೆ ಜಾಲಗಳನ್ನು ಕಟ್ಟುನಿಟ್ಟಿನ ನಿಯಮಗಳ ಮೂಲಕ ನಿಯಂತ್ರಿಸಬೇಕು. ಪಂಜಾಬ್‌ನಲ್ಲಿ ಅಕ್ರಮ ಮಾನವ ಸಾಗಣೆದಾರರು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಯೂ ಅಕ್ರಮ ವಲಸೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿಂದೆ ಶ್ರೀಮಂತ ರಾಷ್ಟ್ರಗಳಲ್ಲಿ ವಲಸಿಗ ಕಾರ್ಮಿಕರಿಗೆ ಬೇಡಿಕೆ ಇತ್ತು, ಅದೇ ಬೇರೆ ಯುಗ ಎಂಬುದು ನೆನಪಿರಬೇಕು. ಇಂದು ತರಬೇತಿ ಪಡೆದ ಐಟಿ ವೃತ್ತಿಪರರು, ವೈದ್ಯರು ಹಾಗೂ ನರ್ಸ್‌ಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಕೌಶಲಗಳು ಬೇಡಿಕೆಯಲ್ಲಿರುವ ರಾಷ್ಟ್ರಗಳಿಗೆ ವಲಸೆ ಹೋಗಲು ಕೌಶಲಗಳ ವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಮಾನವ ಅಕ್ರಮ ಸಾಗಣೆ ಅಪರಾಧ ಕೃತ್ಯ ಎಂಬುದು ಅರಿವಿರಬೇಕು. ಜಾಗತಿಕ ಸಮುದಾಯದ ಮೇಲೆ ಇದು ಬೀರುವ ಕೆಟ್ಟ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.