ಕೃತಕ ಬುದ್ಧಿಮತ್ತೆ: ನೀತಿನಿರೂಪಣೆ ಅಗತ್ಯಗಳಿಗೆ ಎಚ್ಚೆತ್ತುಕೊಳ್ಳಿ ‘ಕೃತಕ ಬುದ್ಧಿಮತ್ತೆ’ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರ. ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಇದರ ಪರಿಣಾಮ ಗೋಚರಿಸಲಾರಂಭಿಸಿಯೇ ಐದು ವರ್ಷಗಳು ಉರುಳಿಹೋದವು. ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ಈ ಹೊಸ ಸವಾಲನ್ನು ಎದುರಿಸುವುದಕ್ಕೆ ಬೇಕಿರುವ ಸಿದ್ಧತೆಗಳನ್ನುಮಾಡಿಕೊಳ್ಳದೇ ಇದ್ದುದರಿಂದ ಗಮನಾರ್ಹ ಪ್ರಮಾಣದ ಉದ್ಯೋಗ ನಷ್ಟವೂ ಸಂಭವಿಸಿತು. ಈ ಪರಿಣಾಮಗಳಿಗೆ ಪ್ರತಿಕ್ರಿಯೆಯೋ ಎಂಬಂತೆ ‘ಕೃತಕ ಬುದ್ಧಿಮತ್ತೆ’ ಕ್ಷೇತ್ರವನ್ನು ಉದ್ಯೋಗ ಸೃಷ್ಟಿಯೂ ಸೇರಿದಂತೆ ಅಭಿವೃದ್ಧಿಯ ಮಾರ್ಗವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಸಲಹೆ ಮಾಡುವ ಚರ್ಚಾ ಟಿಪ್ಪಣಿಯೊಂದನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ. ತಡವಾಗಿಯಾದರೂ ನೀತಿ ನಿರೂಪಣೆಯ ಕ್ಷೇತ್ರ ಈ ವಿಚಾರವನ್ನು ಚರ್ಚಿಸಲು ಮುಂದಾಗಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆ. ‘ಕೃತಕ ಬುದ್ಧಿಮತ್ತೆ’ ಎಂಬುದು ಒಂದು ನಿರ್ದಿಷ್ಟ ತಂತ್ರಜ್ಞಾನ ವಿಭಾಗವಲ್ಲ. ಮಾಹಿತಿ ತಂತ್ರಜ್ಞಾನಾಧಾರಿತವಾದ ಪ್ರತಿಯೊಂದರ ಮೇಲೂ ಪರಿಣಾಮ ಬೀರುವ ಒಂದು ಪರಿಕಲ್ಪನೆ. ಯುರೋಪ್ ಮತ್ತು ಅಮೆರಿಕಗಳು ಈ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಹಾದಿಯಲ್ಲಿ ಈಗಾಗಲೇ ಬಹುದೂರ ಸಾಗಿವೆ. ಈ ಹೊತ್ತಿನಲ್ಲಿ ಹೊರಬಂದಿರುವ ನೀತಿ ಆಯೋಗದ ಚರ್ಚಾ ಟಿಪ್ಪಣಿ ಭಾರತದಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧ್ಯತೆಯ ಬಗ್ಗೆ ಕೆಲವು ನಿರ್ದಿಷ್ಟ ಸಲಹೆಗಳನ್ನು ಮುಂದಿಟ್ಟಿದೆ. ಕೃಷಿ, ಆರೋಗ್ಯ, ಶಿಕ್ಷಣ, ಸ್ಮಾರ್ಟ್ ಸಿಟಿಗಳು ಮತ್ತು ಸಾರಿಗೆ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನ ವನ್ನು ಅನ್ವಯಿಸಬಹುದು ಎಂದು ಚರ್ಚಾ ಟಿಪ್ಪಣಿ ಹೇಳುತ್ತದೆ. ಈ ಸಾಧ್ಯತೆಗಳನ್ನುಮುಂದಿಡುವುದಕ್ಕಾಗಿ ‘ಕೃತಕ ಬುದ್ಧಿಮತ್ತೆ’ ಕ್ಷೇತ್ರದ ವರ್ತಮಾನದ ಸ್ಥಿತಿಯನ್ನು ವಿವರವಾಗಿ ಚರ್ಚಿಸಿರುವ ನೀತಿ ಆಯೋಗವು ತಂತ್ರಜ್ಞಾನದ ಅನ್ವಯಕ್ಕೆ ಇರುವ ಮಿತಿಗಳನ್ನೂ ಪಟ್ಟಿ ಮಾಡಿದೆ. ಬಹಳ ಮುಖ್ಯವಾಗಿ ದತ್ತಾಂಶವನ್ನು ಸಂಗ್ರಹಿಸುವ ವಿಧಾನದಲ್ಲಿ ಏಕರೂಪತೆ ಇಲ್ಲದೇ ಇರುವುದು, ಇಲ್ಲಿಯ ತನಕ ತಂತ್ರಜ್ಞಾನದ ಅಳವಡಿಕೆಯೇ ಪೂರ್ಣಗೊಳ್ಳದಿರುವುದು ಮುಂತಾದ ವಿಷಯಗಳನ್ನು ಚರ್ಚಿಸಲಾಗಿದೆ. ಈ ದೃಷ್ಟಿಯಲ್ಲಿ ನೀತಿ ಆಯೋಗ ಬಹಳ ಪ್ರಾಯೋಗಿಕವಾದ ಸಲಹೆಗಳನ್ನು ಮುಂದಿಡುತ್ತಿದೆ ಎನಿಸಿದರೂ ಸಲಹೆಯ ಭಾಗಕ್ಕೆ ಬರುವಾಗ ಬಹಳ ಆತುರದಲ್ಲಿ ಅವುಗಳನ್ನು ಮಂಡಿಸಿದಂತೆ ಕಾಣಿಸುತ್ತದೆ. ‘ಕೃತಕ ಬುದ್ಧಿಮತ್ತೆ’ಯನ್ನು ಬಳಕೆಗೆ ತರುವುದು ಎಂದರೆ ಸಂಗ್ರಹಿತ ದತ್ತಾಂಶವನ್ನು ವಿಶ್ಲೇಷಿಸಿ ನಿರ್ದಿಷ್ಟ ನಿರ್ಧಾರಗಳಿಗೆ ಬರಲು ಅನುಕೂಲವಾಗುವಂಥ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ಮೊದಲ ಹಂತ. ನಿಯತವಾಗಿ ನಡೆಯುವ ಕ್ರಿಯೆಗಳು ಮತ್ತು ಅದರಲ್ಲಿರುವ ಭಿನ್ನತೆಗಳನ್ನು ಗುರುತಿಸಿ ಅವು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು. ಇದರ ಮೂಲಕ ವಿವಿಧ ಸಂಪನ್ಮೂಲಗಳ ಬಳಕೆಯನ್ನು ತಗ್ಗಿಸುವುದು. ಇದು ಸಾಧ್ಯವಾಗುವುದಕ್ಕೆ ದತ್ತಾಂಶ ಸಂಗ್ರಹ ಸಾಧ್ಯವಾಗಬೇಕು. ಈ ದತ್ತಾಂಶ ಸಂಗ್ರಹ ಮತ್ತು ಬಳಕೆಯ ವಿಧಾನಗಳೆರಡೂ ನೀತಿ ಆಯೋಗ ಸಲಹೆ ಮಾಡಿರುವ ಐದು ಕ್ಷೇತ್ರಗಳಲ್ಲಿ ಭಿನ್ನವಾಗಿ ನಡೆಯುತ್ತವೆ. ಈ ಸೂಕ್ಷ್ಮವನ್ನು ಚರ್ಚಾ ಟಿಪ್ಪಣಿ ಪರಿಗಣಿಸಿದಂತೆ ಇಲ್ಲ. ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗುವ ಸ್ಥೂಲ ಸಲಹೆಗಳನ್ನಷ್ಟೇ ಇಲ್ಲಿ ಕಾಣಬಹುದು. ಇನ್ನು ಆರೋಗ್ಯ, ಶಿಕ್ಷಣ ಮತ್ತು ಸ್ಮಾರ್ಟ್ ಸಿಟಿಯಂಥ ಕ್ಷೇತ್ರಗಳಲ್ಲಿ ಸಂಗ್ರಹವಾಗುವ ದತ್ತಾಂಶಗಳಲ್ಲಿ ಭಾರಿ ಪ್ರಮಾಣದ ವೈಯಕ್ತಿಕ ಮಾಹಿತಿಗಳಿರುತ್ತವೆ. ಇವುಗಳ ಬಳಕೆಗೆ ಮುನ್ನ ನಡೆಯಲೇಬೇಕಾದ ‘ಅನಾಮೀಕರಣ’ ಪ್ರಕ್ರಿಯೆಯ ಶಿಷ್ಟತೆ, ವೈಯಕ್ತಿಕ ಮಾಹಿತಿ ಸಂರಕ್ಷಣೆಗೆ ಅಗತ್ಯವಾದ ಕಾನೂನು ಚೌಕಟ್ಟು ಇತ್ಯಾದಿಗಳೆಲ್ಲವೂ ಅತ್ಯಂತ ಅಗತ್ಯ. ಇವುಗಳನ್ನು ಪೂರ್ಣಗೊಳಿಸದೆ ಮುಂದಿನ ಹೆಜ್ಜೆಯನ್ನು ಇಡಲು ಸಾಧ್ಯವಾಗುವುದೇ ಇಲ್ಲ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಈಗಾಗಲೇ ಬಹುರಾಷ್ಟ್ರೀಯ ದೈತ್ಯ ಕಂಪನಿಗಳಿವೆ. ದತ್ತಾಂಶದ ವಿತರಣೆಗೆ ಸರಿಯಾದ ಶಿಷ್ಟತೆ ಮತ್ತು ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಮೊದಲೇ ಯೋಜಿಸದೇ ಹೋದರೆ ತಂತ್ರಜ್ಞಾನದ ಬಳಕೆಯೇ ದುಃಸ್ವಪ್ನವಾಗಿಬಿಡುವ ಸಾಧ್ಯತೆ ಇದೆ. ಈ ಎಲ್ಲಾ ಮಿತಿಗಳಿದ್ದರೂ ಬಹಳ ತಡವಾಗಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಂಡಿದ್ದರೂ ನೀತಿ ಆಯೋಗ ಇಟ್ಟಿರುವ ಹೆಜ್ಜೆಯನ್ನು ಸ್ವಾಗತಿಸಬೇಕಾಗಿದೆ. ಈಗ ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹಂತಗಳಿಗೆ ವೇಗವಾಗಿ ಸಾಗಬೇಕಾದ ಅಗತ್ಯವನ್ನು ಸರ್ಕಾರ ಮನಗಾಣಬೇಕಾಗಿದೆ. ಇದು ಕೇವಲ ತಾಂತ್ರಿಕ ವಿಷಯವಷ್ಟೇ ಅಲ್ಲ, ಇದೊಂದು ನೀತಿ ನಿರೂಪಣೆಗೂ ಸಂಬಂಧಿಸಿದ ವಿಚಾರ ಎಂಬುದನ್ನು ನಮ್ಮ ಸಂಸದೀಯ ವ್ಯವಸ್ಥೆಯೂ ಅರ್ಥ ಮಾಡಿಕೊಳ್ಳುವಂತೆ ಮಾಡುವುದು ಈಗಿನ ತುರ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.