ಮಾನವೀಯ ಹೆಜ್ಜೆ ಆತ್ಮಹತ್ಯೆ ಪ್ರಯತ್ನವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 309ನೇ ಕಲಂ ರದ್ದು­ಪಡಿಸಲು ಕೇಂದ್ರ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ. ಇದು ಜಾರಿಗೆ ಬಂದ ಬಳಿಕ ಆತ್ಮಹತ್ಯೆ ಯತ್ನ ಅಪರಾಧ ಎನಿಸಿಕೊಳ್ಳುವುದಿಲ್ಲ. ಇದೊಂದು ಮಾನವೀಯ ಮತ್ತು ಸ್ವಾಗತಾರ್ಹ ಹೆಜ್ಜೆ. ಈ ಕೆಲಸ ಯಾವಾ­ಗಲೋ ಆಗಬೇಕಿತ್ತು. ಏಕೆಂದರೆ ಆತ್ಮಹತ್ಯೆಗೆ ಯತ್ನಿಸಿದರೆ ಈಗ ಐಪಿಸಿ 309­ರಂತೆ ಗರಿಷ್ಠ 1 ವರ್ಷ ಜೈಲು ಮತ್ತು ದಂಡ ವಿಧಿಸಬಹುದು. ನಮ್ಮ ದೇಶ­ದಲ್ಲಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ಆತ್ಮಹತ್ಯೆ ಅನೈತಿಕ, ಕಳಂಕ ಎಂಬ ಅಭಿಪ್ರಾಯವಿದೆ. ಯಾವುದೋ ಕಾರಣದಿಂದ ಭಾವನಾತ್ಮಕ ಉದ್ವೇಗದಲ್ಲಿ ಸಾಯಲು ಮುಂದಾಗುವ ವ್ಯಕ್ತಿ, ಆ ಪ್ರಯತ್ನ ವಿಫಲ­ಗೊಂಡಾಗ ಅನುಭ­ವಿ­ಸುವ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಸಮಾಜ, ಕುಟುಂಬದ ಕೆಂಗಣ್ಣು, ಅಪಹಾಸ್ಯಕ್ಕೆ ಗುರಿಯಾಗುವ ಪ್ರಸಂಗಗಳೇ ಹೆಚ್ಚು. ಇಂಥ ಸಂದರ್ಭದಲ್ಲಿ ಆ ವ್ಯಕ್ತಿಗೆ ಬೇಕಿರುವುದು ಸಾಂತ್ವನ, ಆಪ್ತ ಸಮಾ­ಲೋಚನೆ. ಅದಕ್ಕೆ ಬದಲಾಗಿ ಕಾನೂನಿನ ಕ್ರಮ ಜರುಗಿಸುವುದು ಅಮಾನುಷ ಹಿಂಸೆಗೆ ಸಮ. ಆತ್ಮಹತ್ಯೆ ಮೂಲಕ ಜೀವ ಕೊನೆಗಾಣಿಸಿಕೊಳ್ಳುವ ಹಕ್ಕು ವ್ಯಕ್ತಿಗೆ ಇದೆಯೇ ಇಲ್ಲವೇ ಎಂಬ ಬಗ್ಗೆ ಬಹಳ ಕಾಲದಿಂದಲೂ ಚರ್ಚೆ ನಡೆಯುತ್ತಿದೆ. ಆತ್ಮ­ಹತ್ಯೆ­ಯನ್ನು ಅಪರಾಧ ಎಂದೇ ಪರಿಗಣಿಸುವ ಐಪಿಸಿ ರಚನೆಯಾಗಿದ್ದು 1860­ರಲ್ಲಿ. ಅಂದರೆ ಒಂದೂವರೆ ಶತಮಾನಗಳಷ್ಟು ಹಿಂದೆ. ಆ ಕಾಲಕ್ಕೆ ಆತ್ಮಹತ್ಯೆ ತಪ್ಪು ಎನಿಸಿರಬಹುದು. ಈಗ ಕಾಲ ಬದಲಾಗಿದೆ. ಬದುಕನ್ನು ನೋಡುವ ರೀತಿಯೂ ಸಾಕಷ್ಟು ಮಾರ್ಪಾಡು ಕಂಡಿದೆ. ಜತೆಗೆ ಆತ್ಮಹತ್ಯೆ ಪ್ರಮಾಣವೂ ಗಾಬರಿಗೊಳಿಸುವಷ್ಟು ಹೆಚ್ಚುತ್ತಿದೆ. ಆದರೆ ಅದನ್ನು ಕಳಂಕ ಎಂದು ನೋಡದೆ ಮಾನಸಿಕ ಆರೋಗ್ಯದ ಏರುಪೇರು ಎಂದು ಪರಿಗಣಿಸ­ಬೇಕು. ಆತ್ಮಹತ್ಯೆಯ ಕಾರಣ, ಸನ್ನಿವೇಶಗಳನ್ನು ಗಣನೆಗೆ ತೆಗೆದು­ಕೊಳ್ಳ­ಬೇಕು. 1994ರಲ್ಲಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪೀಠ, ಐಪಿಸಿ 309 ಸಂವಿ­ಧಾನಬಾಹಿರ ಎಂದು ಹೇಳಿತ್ತು. ಸಂವಿಧಾನದ 14ನೇ ಕಲಂನಂತೆ ‘ಸಮಾನತೆಯ ಹಕ್ಕು’ ಮತ್ತು 21ನೇ ಕಲಂ ಅಡಿ ದೊರೆತ ‘ಗೌರವದಿಂದ ಜೀವಿಸುವ ಸ್ವಾತಂತ್ರ್ಯ’ಕ್ಕೆ ಐಪಿಸಿಯ 309ನೇ ಕಲಂ ವ್ಯತಿರಿಕ್ತವಾಗಿದೆ ಎಂದು ವ್ಯಾಖ್ಯಾನಿಸಿತ್ತು. ‘ಬದುಕುವ ಹಕ್ಕಿನಲ್ಲಿ, ಬದು­ಕನ್ನು ತನ್ನಿಷ್ಟದಂತೆ ಕೊನೆ­ಗೊಳಿಸಿ­ಕೊಳ್ಳುವ ಹಕ್ಕೂ ಸೇರುತ್ತದೆ’ ಎಂದು ಹೇಳಿತ್ತು. ಆದರೆ 1996ರಲ್ಲಿ ಸುಪ್ರೀಂಕೋರ್ಟ್‌ನ ಐವರು ನ್ಯಾಯ­ಮೂರ್ತಿ­ಗಳ ಸಂವಿಧಾನಪೀಠ ಈ ತೀರ್ಪನ್ನು ರದ್ದುಪಡಿಸಿ ಐಪಿಸಿ 309ನೇ ವಿಧಿ ಸಂವಿಧಾನಬದ್ಧ ಎಂದು ಹೇಳಿತ್ತು. ‘ಬದುಕುವ ಹಕ್ಕಿನಲ್ಲಿ ಬೇಕಾದಾಗ ಸಾಯುವ ಹಕ್ಕೂ ಸೇರಿದೆ’ ಎಂಬ ವ್ಯಾಖ್ಯಾನವನ್ನು ತಳ್ಳಿಹಾಕಿತ್ತು. ಇವೆಲ್ಲಕ್ಕೂ ಹಿಂದೆ ಅಂದರೆ 1971ರಲ್ಲಿಯೇ ಕಾನೂನು ಆಯೋಗ ಐಪಿಸಿ 309ನೇ ವಿಧಿ­ಯನ್ನು ತೆಗೆದು ಹಾಕಲು ಶಿಫಾರಸ್ಸು ಮಾಡಿತ್ತು. ಅದಕ್ಕೆ ಅನುಗುಣವಾಗಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಪ್ರಯತ್ನಗಳು ನಡೆದರೂ ಫಲ ಕೊಟ್ಟಿ­ರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಅತ್ತ ಗಮನಹರಿಸಿದೆ. ಆತ್ಮಹತ್ಯೆಗೆ ಯತ್ನಿಸುವವರನ್ನು ಶಿಕ್ಷಿಸುವುದು ‘ಅಮಾನವೀಯ’ ಎಂಬ ಆಯೋಗದ ವಾದಕ್ಕೆ ಮನ್ನಣೆ ನೀಡಿ ಕಾಲದ ಜತೆ ಬದಲಾವಣೆಗೆ ಅಡಿಯಿಟ್ಟಿದೆ. ಇದು ಅತ್ಯಗತ್ಯವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.