ಪಾರದರ್ಶಕತೆ ಬೇಕು ನ್ಯಾಯಾಂಗದ ಘನತೆಗೆ ಕುಂದು ತರುವ ರೀತಿಯಲ್ಲಿ ಅದರ ಬಗ್ಗೆ ಅಪ­ಪ್ರಚಾರ ಮಾಡುವ ಪ್ರಯತ್ನಗಳು ಮತ್ತೆ ಮತ್ತೆ ನಡೆಯುತ್ತಿವೆ ಎಂದು ಸುಪ್ರೀಂ­ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಈಗಿರುವ ಕೊಲಿಜಿಯಂ (ನ್ಯಾಯಾಂಗ ನೇಮಕಾತಿ ಸಮಿತಿ) ವ್ಯವಸ್ಥೆಯನ್ನು ಸಮರ್ಥಿ­ಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ನೇಮ­ಕಾತಿ ಆಯೋಗ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಆಯೋಗ ಹಾಗೂ ಅದರ ಸ್ವರೂಪವನ್ನು ಸಂವಿಧಾನದಲ್ಲಿ ಅಡಕ­­ಗೊಳಿಸಲು ಸಂವಿಧಾನದ 121ನೇ ತಿದ್ದುಪಡಿಯನ್ನೂ ಮಂಡಿಸ­ಲಾಗಿದೆ. ನ್ಯಾಯಾಂಗದ ಸುಧಾರಣೆ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. ನ್ಯಾಯಾಂಗದ ನೇಮಕಾತಿ­ಗಳಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಅಗತ್ಯವಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ನ್ಯಾಯಾಂಗದ ನೇಮಕಾತಿ­ಗಳಿಗಾಗಿ ಈಗಿರು­ವಂತಹ ಕೊಲಿಜಿಯಂ ವ್ಯವಸ್ಥೆ ಬದಲಾಗಬೇಕು ಎಂಬುದ­ಕ್ಕಾಗಿ ಹಿಂದಿನ ಯುಪಿಎ ಸರ್ಕಾರ ನ್ಯಾಯಾಂಗ ನೇಮಕಾತಿ ಮಸೂದೆಯನ್ನು ಮಂಡಿಸಿತ್ತು. ಈಗ ಅದನ್ನು ಹಿಂತೆಗೆದುಕೊಂಡು ಒಂದಿಷ್ಟು ಬದಲಾವ­ಣೆ­ಗಳೊಂದಿಗೆ ಹೊಸ­ದಾದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ– 2014 ಮಂಡಿಸಲಾಗಿದೆ. ನ್ಯಾಯಾಧೀಶರುಗಳ ವಿರುದ್ಧ ಅನೇಕ ಆರೋಪ­ಗಳು ಬಹಿರಂಗವಾಗಿವೆ. ನಿಷ್ಕ್ರಿಯತೆ, ಭ್ರಷ್ಟಾಚಾರ ಹಾಗೂ ಅಸಮರ್ಪಕ ರಾಜಿ­ಗಳ ದೂರುಗಳು ನ್ಯಾಯಮೂರ್ತಿಗಳ ವಿರುದ್ಧ ಕೇಳಿ ಬಂದಿ­ರುವುದು ಪ್ರಜಾ­ಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾದದ್ದು. ಇಂತಹ ಸನ್ನಿವೇಶದಲ್ಲಿ ನ್ಯಾಯಾಂಗದ ಸುಧಾರಣೆಯಾಗಬೇಕಾಗಿರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ಮಸೂದೆಯ ಮಂಡನೆ ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ. ನ್ಯಾಯಾಂಗದ ನೇಮಕಗಳ ವಿಚಾರದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಮಧ್ಯೆ ಸೆಣಸಾಟಗಳು ಹಿಂದಿನಿಂದಲೂ ಇವೆ. ಈಗ ಮಂಡಿಸ­ಲಾಗಿರುವ ಮಸೂದೆಯ ಅನ್ವಯ, ಕೊಲಿಜಿಯಂ ವ್ಯವಸ್ಥೆಗೆ ಪರ್ಯಾಯ­ವಾಗಿ ಆರು ಸದಸ್ಯರ ಆಯೋಗ ರಚನೆಯಾಗುತ್ತದೆ. ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಈ ಆಯೋಗಕ್ಕೆ ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಇಬ್ಬರು ಗಣ್ಯ­ವ್ಯಕ್ತಿ­ಗಳು ಹಾಗೂ ಕಾನೂನು ಸಚಿವರು ಸದಸ್ಯರಾಗಿರುತ್ತಾರೆ. ಇದರಿಂದ ನ್ಯಾಯಾಂಗ, ಕಾರ್ಯಾಂಗ ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಆಯೋಗ ಒಳ­ಗೊಂಡಂತಾಗುತ್ತದೆ. ನೇಮಕಾತಿ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಪಾರದರ್ಶ­ಕತೆಗೆ ಇದು ಅನುವು ಮಾಡಿಕೊಡುತ್ತದೆ ಎಂಬಂಥ ಆಶಯ ವ್ಯಕ್ತ­ವಾಗಿದೆ. ನಾಗರಿಕ ಸಮಾಜದ ಇಬ್ಬರು ಗಣ್ಯರನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಪ್ರತಿಪಕ್ಷದ ನಾಯಕರು ಸೇರಿ ಆಯ್ಕೆ ಮಾಡಬೇಕಾಗುತ್ತದೆ. ಈ ಪ್ರಯತ್ನ ನ್ಯಾಯಾಂಗದ ನೇಮಕಾತಿ ಪ್ರಕ್ರಿಯೆ­ಯ­ಲ್ಲಿನ ದೋಷಗಳನ್ನು ಸರಿಪಡಿಸುವಂತಾಗಬೇಕು. ಆದರೆ ಯಾವುದೇ ಬದ­ಲಾ­ವಣೆಗಳು ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ತರು­ವಂತಿ­ರ­ಬಾರದು ಎಂಬ ಎಚ್ಚರ ಅತ್ಯವಶ್ಯ. ರಾಜಕೀಯ ಹಸ್ತಕ್ಷೇಪಗಳಿಂದ ಮುಕ್ತ­ವಾಗಿ­ರು­ವುದು ಇಲ್ಲಿ ಮುಖ್ಯ. ಹೀಗಾಗಿ ಮಸೂದೆ ಅಂಗೀಕಾರಕ್ಕೆ ಮೊದಲು ಅದರ ಸಾಧಕ, ಬಾಧಕಗಳು, ವಿವರವಾದ ಚರ್ಚೆಗೆ ಒಳ­ಪಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.