ಹುಲಿ ಸಾವು ತಪ್ಪಿಸಿ ಅಳಿವಿನ ಅಂಚಿನಲ್ಲಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಕೇವಲ ಮೂರೇ ವರ್ಷಗಳಲ್ಲಿ ರಾಜ್ಯದಲ್ಲಿ ೩೫ ಹುಲಿಗಳು ಅಸಹಜವಾಗಿ ಸತ್ತಿವೆ. ಈ ಪ್ರಕರಣಗಳ ಪೈಕಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರವೇ ಅಪರಾಧಿಗಳಿಗೆ ಶಿಕ್ಷೆಯಾಗಿದೆ ಎನ್ನುವ ವರದಿಯಿದೆ. ದೇಶದಲ್ಲಿ ಬಂಗಾಳ ಹುಲಿಗಳ ಸಂಖ್ಯೆ ಸುಮಾರು ೨೫೦೦ರಷ್ಟಿದ್ದು, ಇತ್ತೀಚಿನ ಹುಲಿಗಣತಿಯ ಪ್ರಕಾರ ರಾಜ್ಯದಲ್ಲಿ ೩೨೦ ವ್ಯಾಘ್ರಗಳಿವೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ದೇಶದಲ್ಲೇ ಹೆಚ್ಚಿನ ಹುಲಿಗಳಿರುವ ರಾಜ್ಯ ಎನ್ನುವ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ಸಾರಿಸ್ಕ ಅಭಯಾರಣ್ಯದಲ್ಲಿ ಹುಲಿಗಳ ಕಣ್ಮರೆ ಪ್ರಕರಣಗಳ ಬಳಿಕ ಕೇಂದ್ರ ಸರ್ಕಾರ ಮತ್ತು ಆಯಾ ರಾಜ್ಯಗಳು ತೆಗೆದುಕೊಂಡ ಸಂರಕ್ಷಣಾ ಕ್ರಮಗಳಿಂದ ಹುಲಿಗಳ ಸಂಖ್ಯೆ ಕ್ರಮೇಣ ಏರುತ್ತಿದೆ. ಇದಕ್ಕೆ ರಾಜ್ಯದ ಹುಲಿ ಅಭಯಾರಣ್ಯಗಳಾದ ಬಂಡೀಪುರ, ನಾಗರಹೊಳೆ, ಭದ್ರಾ ಮತ್ತು ಬಿಳಿಗಿರಿ ರಂಗನ ಬೆಟ್ಟದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದೇ ಸಾಕ್ಷಿ. ರಾಜ್ಯ ಅರಣ್ಯ ಇಲಾಖೆಯು ಬಿಗಿ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಂಡರೂ ಕಾಡಿನ ಅಂಚಿನಲ್ಲಿ ಸಾಯುತ್ತಿರುವ ಹುಲಿಗಳ ಅಸಹಜ ಸಾವಿಗೆ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಚುರುಕಾಗಿಲ್ಲ ಎನ್ನುವುದು ಚಿಂತಿಸಬೇಕಾದ ವಿಷಯವೇ ಸರಿ. ಕಳೆದ ವರ್ಷ ನಾಗರಹೊಳೆ ಹುಲಿ ಅಭಯಾರಣ್ಯ ಒಂದರಲ್ಲೇ ವಿಷಪ್ರಾಶನಕ್ಕೆ ಬಲಿಯಾದ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಒಂದು ಪ್ರಕರಣದಲ್ಲಿ ಬೇಟೆ ಪ್ರಾಣಿಗೆ ಇಲಿಪಾಷಾಣವನ್ನು ಹಾಕಿ ಹುಲಿಯನ್ನೇ ಬೇಟೆ ಮಾಡಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಹುಲಿ ಹಿಡಿದ ಹಸುವಿನ ದೇಹಕ್ಕೆ ಕೀಟನಾಶಕವನ್ನು ಸಿಂಪಡಿಸಿ ವ್ಯಾಘ್ರವನ್ನು ಬಲಿತೆಗೆದುಕೊಳ್ಳ­ಲಾಗಿತ್ತು. ಈ ಪ್ರಕರಣಗಳ ತನಿಖೆಯನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಹುಲಿ ಸಂರಕ್ಷಣಾ ಪಡೆಗೆ ವಹಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದಕಾರಣ ಸಿಐಡಿ ತನಿಖೆಗೆ ವಹಿಸಲಾಗಿತ್ತು. ಆದರೂ ಕೊಲೆಗಡುಕರು ಪತ್ತೆಯಾಗಲಿಲ್ಲ. ಬಿಳಿಗಿರಿರಂಗನಬೆಟ್ಟದಲ್ಲಿ ಎಂಟು ತಿಂಗಳ ಹಿಂದೆ ಹುಲಿ ಮತ್ತು ನಾಲ್ಕು ಮರಿಗಳ ಪೈಕಿ ಒಂದು ಮರಿ ಕರ್ನಾಟಕ ಮತ್ತು ತಮಿಳುನಾಡಿನ ಅಂಚಿನಲ್ಲಿ ವಿಷಪ್ರಾಶನಕ್ಕೆ ಬಲಿಯಾಯಿತು. ಇದರ ಕೊಲೆಗಡುಕರನ್ನೂ ಪತ್ತೆಮಾಡಲು ಆಗಲಿಲ್ಲ. ಕಳ್ಳಬೇಟೆ, ರಸ್ತೆ ಅಪಘಾತ ಅಥವಾ ಹಸು ಇಲ್ಲವೇ ಮನುಷ್ಯರನ್ನೇ ಹಿಡಿಯುವ ಹುಲಿಗಳನ್ನು ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ. ಇಂತಹ ಪ್ರಕರಣಗಳ ತನಿಖೆಯ ಪ್ರಗತಿಯನ್ನು ಗಮನಿಸಿದರೆ ಕೆಲಸದ ಒತ್ತಡವಿರುವ ಸಿಬ್ಬಂದಿಯನ್ನೇ ತನಿಖೆಗೂ ನೇಮಿಸಲಾಗುತ್ತಿದೆ ಎನ್ನುವುದು ಅರಿವಾಗುತ್ತದೆ. ಈ ಮಾತು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿಗೂ ಅನ್ವಯಿಸುತ್ತದೆ. ನ್ಯಾಯಾಲಯಗಳಲ್ಲಿನ ನಿಧಾನಗತಿ ವಿಚಾರಣೆ­ಯಿಂದಲೂ ಪ್ರಕರಣಗಳ ಇತ್ಯರ್ಥ ತಡವಾಗುತ್ತಿದೆ. ಹುಲಿ ಹತ್ಯೆ ಪ್ರಕರಣಗಳು ಶೀಘ್ರ ಇತ್ಯರ್ಥವಾಗಲು ತನಿಖೆಯನ್ನು ಪೊಲೀಸ್‌ ಇಲ್ಲವೇ ಸಿಐಡಿಗೆ ವರ್ಗಾ­ಯಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ತನಿಖೆಯನ್ನು ಹಿರಿಯ ಅಧಿಕಾರಿ­ಗಳ ಮೇಲ್ವಿಚಾರಣೆಗೆ ವಹಿಸಬೇಕು ಮತ್ತು ಅರಣ್ಯ ಕಾಯ್ದೆಯ ಜ್ಞಾನವಿರುವ ವಕೀಲರ ತಂಡವನ್ನು ಅರಣ್ಯ ಇಲಾಖೆ ರಚಿಸಬೇಕು. ಇಲಾಖೆಯು ವ್ಯಾಘ್ರಗಳ ಹತ್ಯೆ ತನಿಖೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅಪರಾಧಿಗಳು ಮತ್ತಷ್ಟು ಹುಲಿಗಳನ್ನು ಕೊಲ್ಲುವುದರಲ್ಲಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.