ಕಾಶ್ಮೀರ: ಓಲೈಕೆಯ ಪ್ರಯತ್ನ ಜಮ್ಮು ಮತ್ತು ಕಾಶ್ಮೀರ, ರಾಷ್ಟ್ರದ ಆಯಕಟ್ಟಿನಲ್ಲಿರುವ ರಾಜ್ಯ. ಈ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಐದು ವಾರಗಳಲ್ಲಿ ಎರಡು ಬಾರಿ ಭೇಟಿ ನೀಡಿದ್ದಾರೆ. ಜಮ್ಮುವಿನ ಕಾತ್ರಾ ಹಾಗೂ ಕಾಶ್ಮೀರದ ಉರಿ ಪ್ರದೇಶಗಳಿಗೆ ಈಗಾಗಲೇ ಹೋಗಿ ಬಂದಿರುವ ಅವರು ಈಗ ಲಡಾಖ್‌ನ ಲೇಹ್ ಹಾಗೂ ಕಾರ್ಗಿಲ್‌ಗಳಿಗೆ ಭೇಟಿ ನೀಡಿ­ದ್ದಾರೆ. ಇದರಿಂದ ರಾಜ್ಯದ ಎಲ್ಲಾ ಪ್ರಮುಖ ಮೂರು ವಲಯ­ಗಳಲ್ಲೂ ಮೋದಿ ಪ್ರವಾಸ ಮಾಡಿದಂತಾಗಿದೆ. ಈವರೆಗೆ ಕೇಂದ್ರದ ನಾಯಕರ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಪ್ರದೇಶಗಳಿವು. ಈ ವರ್ಷದ ಕೊನೆಗೆ ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರಾಜ್ಯಕ್ಕೆ ನೀಡುತ್ತಿರುವ ಆದ್ಯತೆಯಲ್ಲಿ ಸಹಜವಾಗಿಯೇ ಚುನಾವಣೆ ಗೆಲ್ಲುವ ವ್ಯಾವಹಾರಿಕ ದೃಷ್ಟಿಕೋನ ಅಡಕವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. 1999ರಲ್ಲಿ ಪಾಕಿಸ್ತಾನದ ಜೊತೆ ಯುದ್ಧದ ನಂತರ ಕಾರ್ಗಿಲ್‌ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ ಎಂದೂ ಪ್ರತಿಪಾದಿಸಲಾಗಿದೆ. ಈ ಸಂದರ್ಭದಲ್ಲಿ ಭಯೋತ್ಪಾದಕರ ಮೂಲಕ ಪಾಕಿಸ್ತಾನ ನಡೆಸುತ್ತಿರುವ ‘ಪರೋಕ್ಷ ಯುದ್ಧ’ವನ್ನು ಪ್ರಧಾನಿಯಾದ ನಂತರ ಮೊದಲ ಬಾರಿಗೆ ಮೋದಿ ಪ್ರಸ್ತಾಪಿಸಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳ ಕುರಿತು ಅವರು ಪ್ರಸ್ತಾಪಿಸಿಲ್ಲ. ಬದಲಿಗೆ ರಾಜ್ಯಕ್ಕೆ ಅಭಿವೃದ್ಧಿಯನ್ನು ತರುವ ಅನೇಕ ಯೋಜನೆಗಳಿಗೆ ತಮ್ಮ ಬದ್ಧತೆಯನ್ನು ಪ್ರಧಾನಿ ಪ್ರದರ್ಶಿಸಿ ಸಕಾರಾತ್ಮಕ ಭಾವನೆ ಸೃಷ್ಟಿಗೆ ಪ್ರಯತ್ನಿಸಿ­ದ್ದಾರೆ. ಪ್ರಕಾಶ (ವಿದ್ಯುತ್), ಪರ್ಯಾವರಣ (ಪರಿಸರ) ಹಾಗೂ ಪರ್ಯ­ಟನೆಗೆ (ಪ್ರವಾಸೋದ್ಯಮ) ಸಂಬಂಧಿಸಿದಂತೆ ಲಡಾಖ್‌ನಲ್ಲಿ ಹುದುಗಿರುವ ಅವಕಾಶಗಳು ಜಮ್ಮು–ಕಾಶ್ಮೀರಕ್ಕೆ ಮಾತ್ರವಲ್ಲ ರಾಷ್ಟ್ರದ ಅಭಿವೃದ್ಧಿಗೇ ಚಾಲನೆ ನೀಡುವಂತಹವು ಎಂಬಂಥ ಮಾತುಗಳಿಂದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಲು ನಡೆಸಿರುವ ಪ್ರಯತ್ನ ಸುಸ್ಪಷ್ಟ. ಒಕ್ಕೂಟ ವ್ಯವಸ್ಥೆಯ ರಾಷ್ಟ್ರದಲ್ಲಿ ತನ್ನ ವಿಶೇಷ ಸ್ಥಾನಮಾನದ ಕಾರಣದಿಂದಾಗಿ ಜಮ್ಮು –ಕಾಶ್ಮೀರ ಅನುಭವಿಸುತ್ತಿರುವಂತಹ ನಿರ್ಲಕ್ಷ್ಯ ಹಾಗೂ ಅನಾಥಪ್ರಜ್ಞೆಯ ಭಾವವನ್ನು ತೊಡೆದುಹಾಕುವ ಪ್ರಯತ್ನವನ್ನು ಮೋದಿಯವರ ಈ ನಡೆನುಡಿಗಳಲ್ಲಿ ಗುರುತಿಸಬಹುದು. ಕಾಶ್ಮೀರದಲ್ಲಿ ‘ಕೇಸರಿ ಕ್ರಾಂತಿ’ ಭರವಸೆಯನ್ನೂ ಮೋದಿ ನೀಡಿದ್ದಾರೆ. ಎಂದರೆ ‘ಕೇಸರಿ ’ ಪಕ್ಷ ಬಿಜೆಪಿ ಕುರಿತಂತಲ್ಲ, ಕೇಸರಿ ಕೃಷಿ ಉತ್ತೇಜನಕ್ಕೆ ಆದ್ಯತೆ ನೀಡಲಾಗುವುದು ಎಂಬರ್ಥದಲ್ಲಿ ಮೋದಿ ಬಳಸಿರುವ ನುಡಿಗಟ್ಟು ಇದು. ಜಮ್ಮು – ಕಾಶ್ಮೀರ ಸೇರಿದಂತೆ ಭಾರತದ ವಿವಿಧ ಭಾಗಗಳನ್ನು ರಸ್ತೆ, ರೈಲು, ವಿಮಾನ, ಟೆಲಿ ಸಂಪರ್ಕ ಹಾಗೂ ವಿದ್ಯುತ್ ಜಾಲಗಳ ಮೂಲಕ ಬೆಸೆಯುವುದಕ್ಕೆ ಬದ್ಧವಾಗಿರುವುದಾಗಿಯೂ ಅವರು ಹೇಳಿದ್ದಾರೆ. ಹಾಗೆಯೇ ₨ 8,000 ಕೋಟಿ ಮೊತ್ತದ ರಸ್ತೆ ಯೋಜನೆಗಳನ್ನು ಈ ಸಂದರ್ಭದಲ್ಲಿ ಪ್ರಕಟಿಸಲಾಗಿದೆ. ಸಂಘರ್ಷದಲ್ಲಿ ನಲುಗಿರುವ ರಾಜ್ಯದಲ್ಲಿ ಎಚ್ಚರಿಕೆಯಿಂದ ಆಯ್ದ ಮಾತುಗಳಲ್ಲಿ ಜನರ ಮನ ಗೆಲ್ಲಲು ನಡೆಸಿರುವ ಪ್ರಯತ್ನ ಇಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಪುನಶ್ಚೇತನಕ್ಕೆ ಪೂರಕವಾಗುವ ನೀತಿಗಳು, ಉದ್ಯೋಗಗಳ ಭರವಸೆಗಳ ಮಾತುಗಳಿಂದ ಮೋಡಿ ಮಾಡುವ ಚಾತುರ್ಯ ಇದು. ಈ ಮಾತುಗಳು ಘೋಷಣೆಗಳಾಗಷ್ಟೇ ಉಳಿಯದೆ ಕಾರ್ಯರೂಪಕ್ಕಿಳಿಯುವುದು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.