ಪಠ್ಯಪುಸ್ತಕ ಪೂರೈಕೆ: ವಿಳಂಬ ಸಲ್ಲ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಪೂರೈ­ಸಲು ಇನ್ನೂ ನಮಗೆ ಸಾಧ್ಯವಾಗುತ್ತಿಲ್ಲ. ‘ವಿಳಂಬ’ ಎಂಬುದು ಪ್ರತೀ ವರ್ಷದ ಗೋಳು. ಪಠ್ಯಪುಸ್ತಕಗಳಿಗಾಗಿ ವಿದ್ಯಾರ್ಥಿಗಳು ಪರಿತಪಿಸುವುದು ಮಾಮೂಲಿ ವಿದ್ಯಮಾನವಾಗಿದೆ. ಈ ಕುರಿತು ಮಾಧ್ಯಮ­ಗಳಲ್ಲಿ ಸುದ್ದಿಯಾದಾಗ ‘ಮುಂದಿನ ವರ್ಷದಿಂದ ಯಾವುದೇ ತೊಂದರೆ ಆಗ­ದಂತೆ ನೋಡಿಕೊಳ್ಳುತ್ತೇವೆ’ ಎಂಬ ಭರವಸೆ ಸಂಬಂಧಪಟ್ಟ ಅಧಿಕಾರಿ­ಯಿಂದಲೋ ಇಲ್ಲವೇ ಸಚಿವರಿಂದಲೋ ಹೊರಡುತ್ತದೆಯಾದರೂ ಅದು ಈಡೇರಿದ್ದಂತೂ ಇಲ್ಲ. ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು­ಗಳ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ. ಮೊದಲಾದ ವಿವಿಧ ಪದವಿ ತರಗತಿಗಳ ವಿದ್ಯಾರ್ಥಿಗಳ ವ್ಯಥೆಯನ್ನೇ ನೋಡಿ. ತರಗತಿಗಳು ಆರಂಭವಾಗಿ ಒಂದೂವರೆ ತಿಂಗಳಾದರೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ವಿಷಯದ ಪಠ್ಯಪುಸ್ತಕಗಳು ಲಭ್ಯವಾಗಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ತರಗತಿ­ಗಳು ನಡೆಯುವುದೇ ಮೂರು ತಿಂಗಳು. ಮೊದಲ ಸೆಮಿಸ್ಟರ್‌ ಶುರುವಾಗಿ 45 ದಿನಗಳು ಕಳೆದಿವೆ. ಆದರೂ ವಿದ್ಯಾರ್ಥಿಗಳ ಕೈಗೆ ಪಠ್ಯಪುಸ್ತಕ ಸಿಕ್ಕಿಲ್ಲ! ಕನ್ನಡ ಐಚ್ಛಿಕ ವಿಷಯದ ಪಠ್ಯವೂ ಸರಬರಾಜು ಆಗಿಲ್ಲ. ಹೀಗಾದರೆ ಪಾಠ–ಪ್ರವಚನ ನಡೆಯುವುದು ಹೇಗೆ? ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಹೇಗೆ? ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುವ ಇಂತಹ ಹೊಣೆ­ಗೇಡಿ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ಕುಂಟು ನೆಪ­ಗಳಿಗೆ ಕಿವಿಗೊಡದೆ, ವಿಳಂಬಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಭಾಷಾ ವಿಷಯದ ಪಠ್ಯಪುಸ್ತಕಗಳು ಮೂರು ವರ್ಷಗಳಿಗೊಮ್ಮೆ ಬದ­ಲಾ­ಗು­ತ್ತವೆ. ಈ ನಿಯಮಾನುಸಾರ, ಈ ಸಲ ಮೊದಲ ವರ್ಷದ ಪದವಿ ಪಠ್ಯ­ಕ್ರಮ ಬದಲಾಗಿದೆ. ಪರಿಷ್ಕರಣೆಗೆ ಸಂಬಂಧಿಸಿದಂತೆ ದಿಢೀರ್‌ ಬೆಳವಣಿಗೆ ಏನೂ ಸಂಭವಿಸಿಲ್ಲ. ಹೀಗಿರುವಾಗ ತರಗತಿಗಳು ಆರಂಭವಾಗುವ ವೇಳೆಗೆ ಪಠ್ಯ­­­ಪುಸ್ತಕಗಳನ್ನು ದೊರಕಿಸಿಕೊಡಲು ವಿಶ್ವವಿದ್ಯಾಲಯಕ್ಕೆ ಎದುರಾದ ತೊಡ­­ಕಾದರೂ ಏನು? ಬೆಂಗಳೂರು ವಿ.ವಿಯಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು ಶೈಕ್ಷಣಿಕ ಅಧ್ಯಯನ ಮಂಡಳಿಯ (ಬಿಒಎಸ್) ಅಧ್ಯಕ್ಷರಾಗಿರುತ್ತಾರೆ. ಇವರು ಪದವಿ ತರಗತಿಗಳಿಗೆ ಬೋಧಿಸುವ, ಪ್ರಶ್ನೆ­ಪತ್ರಿಕೆ ರೂಪಿಸುವ, ಮೌಲ್ಯಮಾಪನ ಮಾಡುವ ಯಾವ ಜವಾಬ್ದಾರಿ­ಯನ್ನೂ ನಿರ್ವಹಿಸದೇ, ಸ್ಥಾನಬಲದಿಂದ ಬಿಒಎಸ್‌ ಅಧ್ಯಕ್ಷರಾಗಿ ಪಠ್ಯ ರೂಪಿ­ಸುವ ಗುರುತರ ಹೊಣೆಗಾರಿಕೆ ನಿರ್ವಹಿಸುತ್ತಾರೆ. ಅವರಿಗೆ ಇದು ಹೆಚ್ಚುವರಿ ಕೆಲಸ. ಈ ಜವಾಬ್ದಾರಿ ಆ ‘ಸ್ಥಾನ’ಕ್ಕೆ ವಹಿಸಿರುವುದರ ಔಚಿತ್ಯದ ಕುರಿತೂ ಪ್ರಶ್ನೆ­ಗಳಿವೆ. ಈ ಬಗ್ಗೆಯೂ ಪುನರ್ ಅವಲೋಕನ ಆಗುವ ಅಗತ್ಯವಿದೆ. ಪದವಿ ಕಾಲೇಜುಗಳ ಬೋಧಕರು ಪಠ್ಯಪುಸ್ತಕ ಸಂಪಾದಕ ಮಂಡ­ಳಿ ಸದಸ್ಯರಾಗಿರುತ್ತಾರೆ. ವಿಳಂಬದ ಪರಿಣಾಮ ಇವರಿಗೆ ಗೊತ್ತಿರು­ವಂಥದ್ದೇ. ಪಠ್ಯಪುಸ್ತಕ ಸಕಾಲಕ್ಕೆ ಹೊರಬರುವ ರೀತಿಯಲ್ಲಿ ವೇಳಾಪಟ್ಟಿ ರೂಪಿಸಿ, ಯೋಜ­ನಾ­ಬದ್ಧವಾಗಿ ಕೆಲಸ ಮಾಡಿದ್ದರೆ ಈ ಮುಜುಗರದ ಸ್ಥಿತಿ ಎದು­­­­­­­ರಾ­ಗು­ತ್ತಿರಲಿಲ್ಲ. ವಿಳಂಬಕ್ಕೆ ಕಾರಣಗಳನ್ನು ಪತ್ತೆಹಚ್ಚಬೇಕು. ಇದು ಪುನರಾ­ವರ್ತನೆ ಆಗದಂತೆ ಎಲ್ಲ ಬಗೆಯ ಕ್ರಮಗಳನ್ನೂ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.